ಆರನೇ ಮದುವೆಗೆ ಸಜ್ಜಾಗುತ್ತಿದ್ದ ಸ್ವಯಂ ಘೋಷಿತ ಬಾಬಾ ಕಾನ್ಪುರದಲ್ಲಿ ಬಂಧನ

Update: 2021-06-19 11:25 GMT

ಲಕ್ನೊ: ತನ್ನ ಹಿಂದಿನ ಹೆಂಡತಿಯರಿಂದ ಕಾನೂನುಬದ್ಧವಾಗಿ ಬೇರ್ಪಡದೆ ಐವರು  ಮಹಿಳೆಯರನ್ನು ಮದುವೆಯಾಗಿ ಆರನೇ ಮದುವೆಗೆ ಸಜ್ಜಾಗುತ್ತಿದ್ದ, ಹಲವರನ್ನು ಹನಿ ಟ್ರ್ಯಾಪ್ ಗೆ  ಸಿಲುಕಿಸಿದ್ದ  ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಕಾನ್ಪುರದಲ್ಲಿ ಶುಕ್ರವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು India Today ವರದಿ ಮಾಡಿದೆ.

ಆರೋಪಿಯನ್ನು ಶಹಜಹಾನ್ಪುರದ ಅನುಜ್ ಚೇತನ್ ಕಥೇರಿಯಾ ಎಂದು ಗುರುತಿಸಲಾಗಿದ್ದು, ಆರನೇ ಬಾರಿಗೆ ಮದುವೆಯಾಗಲು ಯೋಜಿಸುತ್ತಿದ್ದಾಗ ಕಿದ್ವಾಯ್ ನಗರ ಪೊಲೀಸರು ಬಂಧಿಸಿದ್ದಾರೆ.

ಪತ್ನಿಯ ದೂರಿನ ಮೇರೆಗೆ ಸ್ವಯಂ ಘೋಷಿತ ‘ಬಾಬಾ’ ಅನುಜ್ ಕಥೇರಿಯಾನನ್ನು ಬಂಧಿಸಲಾಗಿದೆ ಎಂದು ದಕ್ಷಿಣ ಕಾನ್ಪುರ ಪೊಲೀಸ್ ಡಿಸಿಪಿ ರವೀನಾ ತ್ಯಾಗಿ ತಿಳಿಸಿದ್ದಾರೆ.

 "ಅನುಜ್ ಐದು ಮಹಿಳೆಯರನ್ನು ಮದುವೆಯಾಗಿದ್ದಾನೆ ಹಾಗೂ  ಆರನೇ ಬಾರಿ ಮದುವೆಯಾಗಲು ಹೊರಟಿದ್ದಾನೆ ಎಂದು ಆತನ ಪತ್ನಿ ಆರೋಪಿಸಿದ್ದಾರೆ. ಆರೋಪಿಯನ್ನು ಶುಕ್ರವಾರ ಬಂಧಿಸಲಾಗಿದೆ" ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಐವರು ಹೆಂಡತಿಯರ ಕಥೆ:  ಆರಂಭಿಕ ತನಿಖೆಯಲ್ಲಿ ಅನುಜ್ 2005 ರಲ್ಲಿ ಮೊದಲ ಬಾರಿಗೆ ವಿವಾಹವಾಗಿದ್ದ ಎಂದು ತಿಳಿದುಬಂದಿದೆ. ತಮ್ಮ ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಮೈನ್ಪುರ ಜಿಲ್ಲೆಯ ನಿವಾಸಿಯಾಗಿರುವ ಮೊದಲ ಪತ್ನಿ ಪೊಲೀಸರಿಗೆ ತಿಳಿಸಿದ್ದಾರೆ. 2010 ರಲ್ಲಿ, ಅನುಜ್,  ಬರೇಲಿ ಜಿಲ್ಲೆಯ ಮಹಿಳೆಯನ್ನು ಮದುವೆಯಾದ. ಆಕೆ ಕೂಡ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

ನಾಲ್ಕು ವರ್ಷಗಳ ನಂತರ, ಔರೈಯಾ ಜಿಲ್ಲೆಯ ಮಹಿಳೆಯನ್ನು ಮದುವೆಯಾದ. ತದನಂತರ ಅನುಜ್ ತನ್ನ ಮೂರನೆಯ ಹೆಂಡತಿಯ ಸೋದರಸಂಬಂಧಿಯನ್ನು ಮದುವೆಯಾದ. ಆಕೆ ಈತನ  ಹಿಂದಿನ ವಿವಾಹಗಳ ಬಗ್ಗೆ ಸತ್ಯವನ್ನು ತಿಳಿದುಕೊಂಡ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಅನುಜ್ 2019 ರಲ್ಲಿ ಐದನೇ ಬಾರಿಗೆ ವಿವಾಹವಾದ. ವಿವಾಹದ ಸ್ವಲ್ಪ ಸಮಯದ ನಂತರ ಪತ್ನಿಗೆ ಕಿರುಕುಳ ನೀಡಲು ಆರಂಭಿಸಿದ್ದ, ಆ ನಂತರ ಅನುಜ್  ವಿರುದ್ಧ ಪ್ರಕರಣ ದಾಖಲಾಗಿದೆ.

"ಅನುಜ್  ಐದನೇ ಹೆಂಡತಿಗೆ ಆತನ ಇತರ ವಿವಾಹಗಳ ಬಗ್ಗೆ ತಿಳಿಸಿರಲಿಲ್ಲ. ಮದುವೆಯಾದ ಕೆಲವು ದಿನಗಳ ನಂತರ ಅನುಜ್  ತನ್ನ ಪತ್ನಿಗೆ ಕಿರುಕುಳ ನೀಡಲು ಆರಂಭಿಸಿದ್ದ. ಮಹಿಳೆ ಕಳೆದ ವರ್ಷ ಚಾಕೆರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಅನುಜ್ ಕಿದ್ವಾಯ್ ನಗರ ಪೊಲೀಸ್ ಠಾಣೆ ಪ್ರದೇಶದಲ್ಲಿ ವಾಸಿಸುತ್ತಿದ್ದ ಕಾರಣ, ಮಹಿಳೆ ಕಳೆದ ತಿಂಗಳು ಇದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು  ”ಎಂದು ಪೊಲೀಸರು ತಿಳಿಸಿದ್ದಾರೆ.

ಅನುಜ್ ಮದುವೆ ವೆಬ್ ಸೈಟ್ ನಲ್ಲಿ ತಾನೊಬ್ಬ ಸರಕಾರಿ ಶಿಕ್ಷಕ ಅಥವಾ ಉದ್ಯಮಿ ಎಂದು ಪರಿಚಯಿಸಿಕೊಳ್ಳುತ್ತಿದ್ದ. ಲಕ್ಕಿ ಪಾಂಡೆ ಎಂಬ ಹೆಸರಿನಲ್ಲಿ ಮಹಿಳೆಯರನ್ನು ಸಂಪರ್ಕಿಸುತ್ತಿದ್ದ.  ಮದುವೆ ಸೈಟ್ ನಲ್ಲಿ ಮಹಿಳೆಯರ ಸಂಪರ್ಕ ಸಾಧಿಸಿದ ನಂತರ ಅವರನ್ನು ಆಶ್ರಮಕ್ಕೆ ಕರೆಸಿಕೊಂಡು ಅಲ್ಲಿ ಮಂತ್ರ-ತಂತ್ರ ನಡೆಸುತ್ತಿದ್ದ. ಸಮಸ್ಯೆಗೆ ಪರಿಹಾರ ಕೇಳಿಕೊಂಡು ಆಶ್ರಮಕ್ಕೆ ಬರುತ್ತಿದ್ದ ಮಹಿಳೆಯರನ್ನು ತನ್ನ ಬಲೆಗೆ ಹಾಕಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News