ಮರವಂತೆಯ ಹಾನಿಗೊಂಡ ರಸ್ತೆ ನಿರ್ಮಾಣಕ್ಕೆ 3 ಕೋಟಿ ರೂ. ಬಿಡುಗಡೆ: ಸಿಎಂ ಯಡಿಯೂರಪ್ಪ ಘೋಷಣೆ

Update: 2021-06-19 13:20 GMT

ಉಡುಪಿ, ಜೂ.19: ಜಿಲ್ಲೆಯಲ್ಲಿ ಕಳೆದ ತಿಂಗಳು ಬೀಸಿದ ತೌಕ್ತೆ ಚಂಡ ಮಾರುತದಿಂದ ಉಂಟಾದ ಸಮುದ್ರ ಕೊರೆತಕ್ಕೆ ತುತ್ತಾಗಿ ಸಂಪೂರ್ಣ ಹಾನಿಗೊಂಡ ಬೈಂದೂರು ತಾಲೂಕು ಮರವಂತೆಯ 1.5 ಕಿ.ಮೀ. ಉದ್ದದ ಕಾಂಕ್ರಿಟ್ ರಸ್ತೆಯ ಮರು ನಿರ್ಮಾಣಕ್ಕೆ ತಕ್ಷಣವೇ 3 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸುವಂತೆ ಸರಕಾರದ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ಶನಿವಾರ ಬೆಂಗಳೂರಿನ ತಮ್ಮ ಗೃಹ ಕಚೇರಿ ಕೃಷ್ಣಾದಿಂದ, ರಾಜ್ಯದ ಉತ್ತರ ಒಳನಾಡು, ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಮುಂಗಾರು ಸಮಯದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಸಂಬಂಧಿಸಿದ ಜಿಲ್ಲೆಗಳ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ನಡೆಸಿದ ವೀಡಿಯೋ ಸಂವಾದದ ವೇಳೆ ಅವರು ಈ ಸೂಚನೆ ನೀಡಿದರು.

ಉಡುಪಿ ಜಿಲ್ಲೆಯಲ್ಲಿ ಇತ್ತೀಚೆಗೆ ತೌಕ್ತೆ ಚಂಡಮಾರುತ ಸಂದರ್ಭದಲ್ಲಿ ಮರವಂತೆಯ 1.5 ಕಿ.ಮೀ. ಉದ್ದದ ರಸ್ತೆ ಹಾನಿಯಾದ ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಜಿಲ್ಲಾಧಿಕಾರಿ ಜಿ. ಜಗದೀಶ್ ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಪ್ರಸ್ತುತ ಹಾಳಾಗಿರುವ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಿದ್ದು, ರಸ್ತೆಯನ್ನು ಪುನರ್ ನಿರ್ಮಿಸಲು 3 ಕೋಟಿ ರೂ.ಗಳ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಈ ರಸ್ತೆಯನ್ನು ಸಂಪೂರ್ಣ ಕಾಂಕ್ರೀಟ್ ರಸ್ತೆಯನ್ನಾಗಿ ಸುಸಜ್ಜಿತವಾಗಿ ನಿರ್ಮಿಸುವಂತೆ ಸೂಚಿಸಿದ ಮುಖ್ಯಮಂತ್ರಿ, ಈ ಕಾಮಗಾರಿಗೆ ಅಗತ್ಯವಿರುವ ಮೂರು ಕೋಟಿ ರೂ .ಗಳ ಅನುದಾನವನ್ನು ತಕ್ಷಣವೇ ಬಿಡುಗಡೆಗೊಳಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದರು. ಅಲ್ಲದೇ ಜಿಲ್ಲೆಯಲ್ಲಿ ಸಂಭವಿಸಿರುವ ಇತರೆ ಹಾನಿಗಳಿಗೆ ಅಗತ್ಯವಿರುವ ಪರಿಹಾರವನ್ನು ಹಂತಹಂತವಾಗಿ ಬಿಡುಗಡೆ ಗೊಳಿಸುವುದಾಗಿಯೂ ಮುಖ್ಯಮಂತ್ರಿ ಭರವಸೆ ನೀಡಿದರು.

ಜಿಲ್ಲೆಯಲ್ಲಿ ಇದುವರೆಗಿನ ವಾಡಿಕೆ ಮಳೆ 770ಮಿ.ಮೀ. ಇದ್ದು, ಇದುವರೆಗೆ 1243 ಮಿ.ಮೀ. ಮಳೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಶೇ.61ರಷ್ಟು ಅಧಿಕ ಮಳೆಯಾಗಿದೆ. ತೌಕ್ತೆ ಚಂಡಮಾರುತ ಮತ್ತು ಮಳೆಯಿಂದ ಜಿಲ್ಲೆಯಲ್ಲಿ 476 ಮನೆ ಹಾನಿ ಮತ್ತು 15 ಕೊಟ್ಟಿಗೆಗಳಿಗೆ ಹಾನಿಯಾಗಿದ್ದು, ಒಂದು ಜೀವ ಹಾನಿ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಜೀವ ಹಾನಿಗೆ 5 ಲಕ್ಷ ರೂ.ಗಳ ಪರಿಹಾರವನ್ನು ಮೆಸ್ಕಾಂ ವತಿಯಿಂದ ವಿತರಿಸಲಾಗಿದೆ. ಜಿಲ್ಲೆಯ ವಿಪತ್ತು ಪರಿಹಾರ ನಿಧಿಯಲ್ಲಿ 7.80 ಕೋಟಿ ರೂ. ಹಣವಿದ್ದು, ಹಣದ ಕೊರತೆ ಇಲ್ಲ. ಮಳೆಗಾಲದಲ್ಲಿ ತುರ್ತು ನೆರವಿಗಾಗಿ ಕಾಳಜಿ ಕೇಂದ್ರಗಳನ್ನು ಸಿದ್ದಪಡಿಸಿಟ್ಟುಕೊಳ್ಳಲಾಗಿದೆ. ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ 24x7 ಕಂಟ್ರೋಲ್ ರೂಂ ತೆರೆಲಾಗಿದೆ. ತುರ್ತು ಕರೆಗಳಿಗೆ ಶೀಘ್ರವಾಗಿ ಸ್ಪಂದಿಸಲಾಗುತ್ತಿದೆ ಎಂದವರು ತಿಳಿಸಿದರು.

ವಿಪತ್ತು ನಿರ್ವಹಣೆಗಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಗ್ರಾಪಂ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಯೋಜನೆಯನ್ನು ರೂಪಿಸಿ, ಟಾಸ್ಕ್‌ಫೋರ್ಸ್ ತಂಡಗಳನ್ನು ರಚಿಸಲಾಗಿದೆ. ಮಂಗಳೂರಿನಲ್ಲಿರುವ ಎನ್.ಡಿ.ಆರ್.ಎಫ್ ತಂಡದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಮಳೆಯಿಂದ ಸಂಭವಿಸುವ ವಿಪತ್ತುಗಳನ್ನು ಯಾವುದೇ ಸಮಯದಲ್ಲಿ ಅತ್ಯಂತ ಸಮರ್ಥವಾಗಿ ಎದುರಿಸಲು ಎಲ್ಲಾ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಮುಖ್ಯಮಂತ್ರಿಗಳಿಗೆ ವಿವರಿಸಿದರು.

ರಾಜ್ಯದಲ್ಲಿ ಮಳೆಯಿಂದ ಮಾನವ ಜೀವ ಹಾನಿ ಮತ್ತು ಜಾನುವಾರುಗಳ ಜೀವಹಾನಿಯನ್ನು ತಡೆಯಲು ಎಲ್ಲಾ ಜಿಲ್ಲೆಗಳಲ್ಲಿ ಸೂಕ್ತ ಮುಂಜಾಗ್ರತಾ ವ್ಯವಸ್ಥೆ ಮಾಡಿಕೊಳ್ಳಬೇಕು. ರಾಜ್ಯದ 1710 ಗ್ರಾಮ ಪಂಚಾಯತ್ ಗಳಲ್ಲಿ ಈಗಾಗಲೇ ರಚಿಸಲಾಗಿರುವ ಗ್ರಾಮೀಣ ಕಾರ್ಯಪಡೆಗಳನ್ನು ನೆರವಿಗೆ ಬಳಸಿಕೊಳ್ಳಬೇಕು. 4 ಎನ್.ಡಿ.ಆರ್.ಎಫ್ ತಂಡಗಳನ್ನು ರಾಜ್ಯದ ವಿವಿಧ ಭಾಗಗಳಲ್ಲಿ ತುರ್ತು ನೆರವಿನ ಅಗತ್ಯವಿದ್ದಲ್ಲಿ ಬಳಸಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.

ಈ ಹಿಂದೆ ಹಾನಿಗೊಳಗಾದ ಪ್ರದೇಶಗಳನ್ನು ಗುರುತಿಸಿಕೊಂಡು, ಆ ಪ್ರದೇಶ ದಲ್ಲಿ ಸಂತ್ರಸ್ಥರ ರಕ್ಷಣೆಗೆ ಅಗತ್ಯ ವೈದ್ಯಕೀಯ ಸೇವೆ ಒಳಗೊಂಡ ಕಾಳಜಿ ಕೇಂದ್ರ ಗಳನ್ನು ಸಿದ್ದವಾಗಿಟ್ಟುಕೊಂಡು ತಕ್ಷಣದಲ್ಲಿ ನಾಗರಿಕರನ್ನು ಸ್ಥಳಾಂತರಿಸಬೇಕು, ನೆರವು ಕಾರ್ಯಾಚರಣೆಗೆ ಅಗತ್ಯವಿರುವ ಸಾಮಗ್ರಿಗಳನ್ನು ಸಿದ್ದಪಡಿಸಿಟ್ಟು ಕೊಂಡಿರಬೇಕು. ಕಾರ್ಯಾಚರಣೆ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ನೆರವು ಪಡೆಯಬೇಕು. ಮಳೆಯಿಂದ ಸಂಪೂರ್ಣ ಮನೆ ನಾಶವಾದಲ್ಲಿ 5 ಲಕ್ಷ ರೂ. ಮತ್ತು ಭಾಗಶಃ ಹಾನಿಯಾದಲ್ಲಿ 2 ಲಕ್ಷ ರೂ.ಗಳ ಪರಿಹಾರವನ್ನು ವಿತರಿಸಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಲ್ಲಾ ಜಿಲ್ಲಾಧಿಕಾರಿಗಳಿಗೆ ತಿಳಿಸಿರು.

ವೀಡಿಯೋ ಸಂವಾದದಲ್ಲಿ ಉಡುಪಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಡಾ.ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್, ನಕ್ಸಲ್ ನಿಗ್ರಹ ಪಡೆಯ ಎಸ್ಪಿ ನಿಖಿಲ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News