ಸಕಲ ಸರಕಾರಿ ಗೌರವದೊಂದಿಗೆ ಮಿಲ್ಖಾ ಸಿಂಗ್ ಅಂತ್ಯಕ್ರಿಯೆ

Update: 2021-06-19 14:13 GMT

ಚಂಡೀಗಡ:  ಭಾರತೀಯ ಅಥ್ಲೀಟ್ ದಂತಕತೆ ಮಿಲ್ಖಾ ಸಿಂಗ್ ಅವರನ್ನು ಶನಿವಾರ ಸಂಪೂರ್ಣ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು.

ಮಿಲ್ಖಾ ಅವರ ಕುಟುಂಬ ಸದಸ್ಯರು ಹಾಗೂ  ಕ್ರೀಡಾ ಸಚಿವ ಕಿರಣ್ ರಿಜಿಜು ಸೇರಿದಂತೆ ಹಲವಾರು ಗಣ್ಯರು 91 ರ ಹರೆಯದ ಮಿಲ್ಖಾ ಅವರಿಗೆ ಕಣ್ಣೀರಿನ ವಿದಾಯ ಹೇಳಿದರು.

'ಫ್ಲೈಯಿಂಗ್ ಸಿಖ್' ಎಂದು  ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಮಿಲ್ಖಾ ಸಿಂಗ್  ಕೋವಿಡ್-19 ಸಂಬಂಧಿತ ಸಮಸ್ಯೆಗಳಿಂದಾಗಿ ಶುಕ್ರವಾರ ರಾತ್ರಿ ನಿಧನರಾದರು.

ಮಿಲ್ಖಾ ಸಿಂಗ್ ಅವರ ಮಗ ಹಾಗೂ ಖ್ಯಾತ ಗಾಲ್ಫ್ ಆಟಗಾರ ಜೀವ್ ಮಿಲ್ಖಾ ಸಿಂಗ್ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.

ಪಂಜಾಬ್ ರಾಜ್ಯಪಾಲರು ಮತ್ತು ಚಂಡೀಗಢದ ಆಡಳಿತಾಧಿಕಾರಿ ವಿ.ಪಿ.ಸಿಂಗ್ ಬದ್ನೋರ್, ಪಂಜಾಬ್ ಹಣಕಾಸು ಸಚಿವ ಮನ್‌ಪ್ರೀತ್ ಸಿಂಗ್ ಬಾದಲ್, ಹರಿಯಾಣದ ಕ್ರೀಡಾ ಸಚಿವ ಸಂದೀಪ್ ಸಿಂಗ್ ಅವರು ಅಂತಿಮ ವಿಧಿವಿಧಾನಗಳಲ್ಲಿ ಭಾಗವಹಿಸಿದ್ದರು.

ದಂತಕಥೆಯನ್ನು ಗೌರವಿಸುವ ಸಂಕೇತವಾಗಿ ಪಂಜಾಬ್ ಸರಕಾರ ಒಂದು ದಿನದ ರಾಜ್ಯ ಶೋಕಾಚರಣೆ ಮತ್ತು ರಜಾದಿನವನ್ನು ಘೋಷಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News