ಲಕ್ಷದ್ವೀಪಕ್ಕೆ ನ್ಯಾಯ ಸಿಗುವವರೆಗೂ ನಾನು ಹೋರಾಟ ಮುಂದುವರಿಸುತ್ತೇನೆ: ಆಯಿಶಾ ಸುಲ್ತಾನಾ

Update: 2021-06-19 14:47 GMT

ಕೊಚ್ಚಿ, ಜೂ.19: ತಾನು ಈವರೆಗೆ ಯಾವುದೇ ದೇಶವಿರೋಧಿ ಕೃತ್ಯವನ್ನು ಮಾಡಿಲ್ಲ ಮತ್ತು ದ್ವೀಪವಾಸಿಗಳಿಗೆ ನ್ಯಾಯ ದೊರಕುವವರೆಗೆ ಹೋರಾಟವನ್ನು ಮುಂದುವರಿಸುವುದಾಗಿ ದೇಶದ್ರೋಹ ಪ್ರಕರಣ ದಾಖಲಿಸಲ್ಪಟ್ಟಿರುವ ಲಕ್ಷದ್ವೀಪದ ಚಲನಚಿತ್ರ ನಿರ್ಮಾಪಕಿ ಆಯಿಷಾ ಸುಲ್ತಾನಾ ಅವರು ಇಂದಿಲ್ಲಿ ಹೇಳಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ರವಿವಾರ ಕವರಟ್ಟಿಯಲ್ಲಿ ಪೊಲೀಸರೆದುರು ಹಾಜರಾಗಲು ಲಕ್ಷದ್ವೀಪಕ್ಕೆ ತೆರಳುವ ಮುನ್ನ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಲ್ತಾನಾ, ತನ್ನ ವಕೀಲರು ತನ್ನ ಜೊತೆಯಲ್ಲಿರುತ್ತಾರೆ ಮತ್ತು ಪೊಲೀಸರೊಂದಿಗೆ ಸಹಕರಿಸುವುದಾಗಿ ತಿಳಿಸಿದರು.‘ನಾನೇನನ್ನೂ ಮಾಡಿಲ್ಲ,ಹೀಗಾಗಿ ನನಗೆ ನ್ಯಾಯ ದೊರೆಯುವ ವಿಶ್ವಾಸವಿದೆ. ನನ್ನ ಮಾತುಗನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿದೆ ಮತ್ತು ಈಗಾಗಲೇ ಪ್ರತಿಯೊಂದನ್ನೂ ನನ್ನ ಇತ್ತೀಚಿನ ಫೇಸ್ಬುಕ್ ಪೋಸ್ಟ್ ನಲ್ಲಿ ವಿವರಿಸಿದ್ದೇನೆ’ ಎಂದರು.

ಟಿವಿ ಚರ್ಚೆ ಸಂದರ್ಭ ‘ಜೈವಿಕ ಅಸ್ತ್ರ ’ಶಬ್ದದ ವಿವಾದಾತ್ಮಕ ಬಳಕೆಯ ಕುರಿತಂತೆ ಸುಲ್ತಾನಾ, ಈ ನಿರ್ದಿಷ್ಟ ಶಬ್ದದಿಂದಾಗಿ ಈ ಎಲ್ಲ ವಿವಾದಗಳು ಸೃಷ್ಟಿಯಾಗಿವೆ ಎಂದರು.
‘ನಾನು ಯಾವುದೇ ದೇಶವಿರೋಧಿ ಕೃತ್ಯವನ್ನು ಮಾಡಿಲ್ಲ. ನಾನು ಉಸುರಿದ ಒಂದು ಶಬ್ದದಿಂದಾಗಿ ಇದೆಲ್ಲ ನಡೆದಿದೆ. ಹೀಗಾಗಿ ನಾನು ಯಾವುದೇ ತಪ್ಪು ಮಾಡಿಲ್ಲ ಎನ್ನುವುದನ್ನು ಸಾಬೀತು ಮಾಡುವುದು ನನ್ನ ಹೊಣೆಗಾರಿಕೆಯಾಗಿದೆ. ನನ್ನ ಭೂಮಿ ಮತ್ತು ಜನರಿಗೆ ನ್ಯಾಯ ದೊರಕುವವರೆಗೆ ನನ್ನ ಹೋರಾಟವನ್ನು ಮುಂದುವರಿಸುತ್ತೇನೆ ’ಎಂದರು.

ಸುಲ್ತಾನಾ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ಮೇಲೆ ತನ್ನ ಆದೇಶವನ್ನು ಗುರುವಾರ ಕಾಯ್ದಿರಿಸಿದ ಕೇರಳ ಉಚ್ಚ ನ್ಯಾಯಾಲಯವು ಅವರಿಗೆ ಒಂದು ವಾರ ಅವಧಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು, ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂ.20ರಂದು ಕವರಟ್ಟಿ ಪೊಲೀಸರೆದುರು ಹಾಜರಾಗುವಂತೆ ನಿರ್ದೇಶ ನೀಡಿದೆ.

ಜೂ.7ರಂದು ಮಲಯಾಳಂ ಸುದ್ದಿ ವಾಹಿನಿಯು ಪ್ರಸಾರ ಮಾಡಿದ್ದ ಚರ್ಚೆಯಲ್ಲಿ ಕೇಂದ್ರವು ಲಕ್ಷದ್ವೀಪ ನಿವಾಸಿಗಳ ವಿರುದ್ಧ ಜೈವಿಕ ಅಸ್ತ್ರವನ್ನು ಬಳಸಿದೆ ಎಂದು ಸುಲ್ತಾನಾ ಹೇಳಿದ್ದು, ಅವರ ವಿರುದ್ಧ ದೇಶದ್ರೋಹ ಪ್ರಕರಣಕ್ಕೆ ಕಾರಣವಾಗಿದೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News