ದಿಲ್ಲಿಯಲ್ಲಿ 97 ರೂ. ದಾಟಿದ ಪ್ರತಿ ಲೀಟರ್ ಪೆಟ್ರೋಲ್ ದರ

Update: 2021-06-20 10:04 GMT

ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪೆನಿಗಳು ರವಿವಾರ ದೇಶಾದ್ಯಂತ ಇಂಧನ ಬೆಲೆಗಳನ್ನು ಮತ್ತೊಮ್ಮೆ ಪರಿಷ್ಕರಿಸಿವೆ. ದಿಲ್ಲಿಯಲ್ಲಿ ಪೆಟ್ರೋಲ್ ಹಾಗೂ  ಡೀಸೆಲ್ ಬೆಲೆಯನ್ನು ಕ್ರಮವಾಗಿ 29 ಪೈಸೆ ಮತ್ತು 28 ಪೈಸೆ ಹೆಚ್ಚಿಸಲಾಗಿದೆ.

 ಹೊಸ ಬೆಲೆಗಳು ಜಾರಿಗೆ ಬರುತ್ತಿರುವುದರಿಂದ, ಎರಡು ಆಟೋ ಇಂಧನಗಳ ಬೆಲೆ  ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದ್ದು, ದಿಲ್ಲಿಯಲ್ಲಿ ರವಿವಾರ ಬೆಳಗ್ಗೆ ಪೆಟ್ರೋಲ್ ಲೀಟರ್‌ಗೆ ರೂ.97.22 ಹಾಗೂ  ಡೀಸೆಲ್ ರೂ.87.97 ಕ್ಕೆ ತಲುಪಿದೆ. ಇದು ಮೇ 4, 2021 ರಿಂದ ಇಂಧನ ದರದಲ್ಲಿ 27 ನೇ ಏರಿಕೆಯಾಗಿದ್ದು, ಆ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು  ಕ್ರಮವಾಗಿ ಲೀಟರ್‌ಗೆ  6.82 ಮತ್ತು ಲೀಟರ್‌ಗೆ 7.24 ರಷ್ಟು ಹೆಚ್ಚಳವಾಗಿದೆ.

ಮುಂಬೈಯಲ್ಲಿ, ಪೆಟ್ರೋಲ್ ಈಗಾಗಲೇ ಪ್ರತಿ ಲೀಟರ್‌ಗೆ 103 ರೂ.ಅನ್ನು ಮೀರಿದೆ, ಪ್ರಸ್ತುತ ಲೀಟರ್‌ಗೆ  103.36 ರಷ್ಟಿದೆ, ಡೀಸೆಲ್ ಪ್ರತಿ ಲೀಟರ್‌ಗೆ 95.44 ಅನ್ನು ಮುಟ್ಟಿದೆ.

ಪ್ರಸ್ತುತ ದೇಶಾದ್ಯಂತ ಇಂಧನ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟದಲ್ಲಿವೆ. ಇತರ ಮೆಟ್ರೋ ನಗರಗಳೂ ಸಹ ಇಂಧನ ದರದಲ್ಲಿ ಇದೇ ರೀತಿಯ ಏರಿಕೆ ಕಂಡಿವೆ. ಕೋಲ್ಕತ್ತಾದಲ್ಲಿ ಈಗ ಪೆಟ್ರೋಲ್‌ನ ಬೆಲೆ ಲೀಟರ್‌ಗೆ ರೂ. 97.12 ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ ರೂ. 90.82 ಆಗಿದೆ. ಚೆನ್ನೈನಲ್ಲಿ ಎರಡು ವಾಹನ ಇಂಧನಗಳ ಬೆಲೆಗಳು ಈಗ ಪ್ರತಿ ಲೀಟರ್‌ಗೆ ರೂ. 98.40 ಮತ್ತು ಪ್ರತಿ ಲೀಟರ್‌ಗೆ ರೂ.  92.58 ರಷ್ಟಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ಹಾಗೂ  ಡೀಸೆಲ್ ಬೆಲೆ ಕ್ರಮವಾಗಿ ಲೀಟರ್‌ಗೆ ರೂ.100.47 ಹಾಗೂ  ಲೀಟರ್‌ಗೆ ರೂ. 93.26 ತಲುಪಿದೆ. ಹೈದರಾಬಾದ್‌ನ ಗ್ರಾಹಕರು ಪೆಟ್ರೋಲ್‌ಗೆ 101.04 ರೂ. ಮತ್ತು ಡೀಸೆಲ್‌ಗೆ. 95.89 ರೂ. ಪಾವತಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News