ವಿವಿಧ ರಾಜ್ಯಗಳಲ್ಲಿ ಬಳಕೆಯಾಗದೆ ಬಿದ್ದಿರುವ 5500ಕ್ಕೂ ಅಧಿಕ ವೆಂಟಿಲೇಟರ್ ಗಳು:ಉತ್ತರ ಪ್ರದೇಶ,ಕರ್ನಾಟಕ ಮುಂಚೂಣಿಯಲ್ಲಿ

Update: 2021-06-20 15:38 GMT
ಸಾಂದರ್ಭಿಕ ಚಿತ್ರ 

ಹೊಸದಿಲ್ಲಿ,ಜೂ.20: ಕೊರೋನ ಎರಡನೇ ಅಲೆಯಲ್ಲಿ ವೆಂಟಿಲೇಟರ್ ಗಳ ಕೊರತೆಯಿಂದಾಗಿ ಹಲವಾರು ರೋಗಿಗಳು ಸಾವನ್ನಪ್ಪಿದ್ದರೆ, ವಿವಿಧ ರಾಜ್ಯಗಳಲ್ಲಿ ಈ ಜೀವರಕ್ಷಕ ಸಾಧನಗಳು ಬಳಕೆಯಾಗದೆ ಬಿದ್ದುಕೊಂಡಿವೆ. ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾಗಿದ್ದ ಅರ್ಜಿಯೊಂದು ಈ ಆಘಾತಕಾರಿ ವಿಷಯವನ್ನು ಬಯಲುಗೊಳಿಸಿದೆ. ಮೇ ಅಂತ್ಯದವರೆಗೆ ವಿವಿಧ ರಾಜ್ಯಗಳ ಉಗ್ರಾಣಗಳಲ್ಲಿ 5,500ಕ್ಕೂ ಅಧಿಕ ವೆಂಟಿಲೇಟರ್ ಗಳು ಧೂಳು ತಿನ್ನುತ್ತಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಆಂಗ್ಲ ಮಾಧ್ಯಮವೊಂದಕ್ಕೆ ನೀಡಿರುವ ಆರ್‌ಟಿಐ ಉತ್ತರದಲ್ಲಿ ತಿಳಿಸಿದೆ. 

ಬೇಡಿಕೆ ಸಲ್ಲಿಸಲಾಗಿದ್ದ, ದೇಶಾದ್ಯಂತ ವಿವಿಧ ಆಸ್ಪತ್ರೆಗಳಿಗೆ ಪೂರೈಸಲಾದ ಮತ್ತು ಅಳವಡಿಸಲಾದ ವೆಂಟಿಲೇಟರ್ ಗಳು ಸಂಖ್ಯೆಯಲ್ಲಿಯೂ ಸಾಕಷ್ಟು ವ್ಯತ್ಯಾಸಗಳು ಕಂಡು ಬಂದಿವೆ.

ಆರ್‌ಟಿಐ ಉತ್ತರದಲ್ಲಿ ತಿಳಿಸಿರುವಂತೆ ಆರೋಗ್ಯ ಸಚಿವಾಲಯವು 60,559 ವೆಂಟಿಲೇಟರ್ಗಳ ಖರೀದಿಗಾಗಿ ವಿವಿಧ ತಯಾರಕರಿಗೆ ಬೇಡಿಕೆಗಳನ್ನು ಸಲ್ಲಿಸಿತ್ತು ಮತ್ತು ಈ ಪೈಕಿ 46,511 ವೆಂಟಿಲೇಟರ್ ಗಳನ್ನು ರಾಜ್ಯಗಳಿಗೆ ಹಂಚಿಕೆ ಮಾಡಲಾಗಿತ್ತು. ಉಳಿದ ವೆಂಟಿಲೇಟರ್ ಗಳನ್ನು ಕೇಂದ್ರ ಸರಕಾರದ ಆಸ್ಪತ್ರೆಗಳಿಗೆ ಪೂರೈಸಲಾಗಿತ್ತು. ರಾಜ್ಯಗಳಿಗೆ 45,191 ವೆಂಟಿಲೇಟರ್ ಗಳನ್ನು ಪೂರೈಸಲಾಗಿದ್ದು, ಈ ಪೈಕಿ 39,640 ವೆಂಟಿಲೇಟರ್ ಗಳನ್ನು ಅವು ಸ್ಥಾಪಿಸಿದ್ದು, 5,551 ವೆಂಟಿಲೇಟರ್ ಗಳು ಬಳಕೆಯಾಗದೆ ಬಿದ್ದುಕೊಂಡಿವೆ.

ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ,ಕರ್ನಾಟಕ ಮತ್ತು ಗುಜರಾತಗಳಲ್ಲಿ ಗರಿಷ್ಠ ಸಂಖ್ಯೆಯ ವೆಂಟಿಲೇಟರ್ ಗಳು ಬಳಕೆಯಾಗಿಲ್ಲ ಎಂದು ಆರ್ಟಿಐ ಉತ್ತರವು ತೋರಿಸಿದೆ. ಉತ್ತರ ಪ್ರದೇಶಕ್ಕೆ ಪೂರೈಕೆಯಾಗಿದ್ದ 5,116 ವೆಂಟಿಲೇಟರ್ಗಳ ಪೈಕಿ ಮೇ ಅಂತ್ಯದವರೆಗೆ 4,010 ಯಂತ್ರಗಳು ಸ್ಥಾಪನೆಗೊಂಡು ಕಾರ್ಯ ನಿರ್ವಹಿಸುತ್ತಿದ್ದರೆ,1,106 ಯಂತ್ರಗಳು ಇನ್ನಷ್ಟೇ ಸ್ಥಾಪನೆಗೊಳ್ಳಬೇಕಿದ್ದವು. ಗುಜರಾತ್ ಮತ್ತು ಕರ್ನಾಟಕಕ್ಕೆ ಅನುಕ್ರಮವಾಗಿ 5,600 ಮತ್ತು 2,913 ವೆಂಟಿಲೇಟರ್‌ ಗಳು ಪೂರೈಕೆಯಾಗಿದ್ದು,ಈ ಪೈಕಿ 4,991 ಮತ್ತು 2,004 ಯಂತ್ರಗಳು ಸ್ಥಾಪನೆಗೊಂಡಿವೆ, ಅಂದರೆ ಇವೆರಡು ರಾಜ್ಯಗಳಲ್ಲಿ ಅನುಕ್ರಮವಾಗಿ 600 ಅಧಿಕ ಮತ್ತು 900ಕ್ಕೂಕ್ಕೂ ಅಧಿಕ ಯಂತ್ರಗಳು ಮೂಲೆಗುಂಪಾಗಿವೆ.

ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್ ಆಡಳಿತದ ಪಂಜಾಬ್ ಮತ್ತು ರಾಜಸ್ಥಾನಗಳಲ್ಲಿ ಅನುಕ್ರಮವಾಗಿ ಕೇವಲ 56 ಮತ್ತು 29 ವೆಂಟಿಲೇಟರ್ಗಳು ಬಳಕೆಯಾಗದೆ ಉಳಿದುಕೊಂಡಿವೆ. ಪ್ರತಿಪಕ್ಷ ಆಡಳಿತವಿರುವ ರಾಜ್ಯಗಳಲ್ಲಿ ಜಾರ್ಖಂಡ್ ತನಗೆ ಪೂರೈಕೆಯಾಗಿದ್ದ 1,210 ವೆಂಟಿಲೇಟರ್ಗಳ ಪೈಕಿ ಕೇವಲ 461 ವೆಂಟಿಲೇಟರ್ ಗಳನ್ನು ಆಸ್ಪತ್ರೆಗಳಲ್ಲಿ ಸ್ಥಾಪಿಸುವ ಮೂಲಕ ಅತ್ಯಂತ ಹಿಂದುಳಿದಿದೆ.

ಮಧ್ಯಪ್ರದೇಶದಲ್ಲಿ ರೋಗಿಗಳು ವೆಂಟಿಲೇಟರ್ ಹಾಸಿಗೆಗಳಿಗಾಗಿ ಪರದಾಡುತ್ತಿದ್ದರೂ ರಾಜ್ಯ ಸರಕಾರವು ಈ ತಿಂಗಳ ಪೂರ್ವಾರ್ಧದಲ್ಲಿ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ಹೇಳಿಕೆಯಲ್ಲಿ ಅಗತ್ಯ ಸಂದರ್ಭಗಳಿಗಾಗಿ 204 ವೆಂಟಿಲೇಟರ್ಗಳನ್ನು ಗೋದಾಮಿನಲ್ಲಿ ದಾಸ್ತಾನಿಡಲಾಗಿದೆ ಎಂದು ತಿಳಿಸಿತ್ತು. ಮೇ ತಿಂಗಳಿನಲ್ಲಿ ಕೋವಿಡ್ ಎರಡನೇ ಅಲೆಯು ಉತ್ತುಂಗದಲ್ಲಿದ್ದಾಗ ಪಿಎಂ ಕೇರ್ಸ್ ಅಡಿ ತಮಗೆ ಪೂರೈಸಲಾದ ವೆಂಟಿಲೇಟರ್ಗಳು ದೋಷಪೂರಿತವಾಗಿವೆ ಮತ್ತು ಕಳಪೆ ಗುಣಮಟ್ಟದ್ದಾಗಿವೆ ಎಂದು ಪಂಜಾಬ್ ಮತ್ತು ರಾಜಸ್ಥಾನ ಸರಕಾರಗಳು ಆರೋಪಿಸಿದ್ದವು.

ನೂರಾರು ವೆಂಟಿಲೇಟರ್ಗಳು ಹಾಳಾಗಿ ಉಪಯೋಗಿಸಲಾರದ ಸ್ಥಿತಿಯಲ್ಲಿವೆ ಎಂದು ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳಿಂದ ವರದಿಯಾಗಿದೆ. ಹಲವಾರು ಪ್ರಕರಣಗಳಲ್ಲಿ ವೆಂಟಿಲೇಟರ್ಗಳನ್ನು ನಿರ್ವಹಿಸಲು ನುರಿತ ವೈದ್ಯಕೀಯ ಸಿಬ್ಬಂದಿಗಳಿಲ್ಲದೆ ಅವುಗಳ ಪ್ಯಾಕ್ ಅನ್ನು ಇನ್ನೂ ಬಿಚ್ಚಿಯೇ ಇಲ್ಲ.

ಕಾರ್ಯ ನಿರ್ವಹಿಸದ ವೆಂಟಿಲೇಟರ್ಗಳು ಮತ್ತು ತಯಾರಕರಿಗೆ ವಾಪಸ್ ಕಳುಹಿಸಲಾದ ವೆಂಟಿಲೇಟರ್ಗಳ ಕುರಿತು ಪ್ರಶ್ನೆಗೆ ಆರೋಗ್ಯ ಸಚಿವಾಲಯವು,ಕೇಂದ್ರದ ಬಳಿ ಈ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಆರೋಗ್ಯ ಸಚಿವಾಲಯವು ತನ್ನ ಉತ್ತರದಲ್ಲಿ ತಿಳಿಸಿದೆ. ದೂರುಗಳನ್ನು ಸ್ವೀಕರಿಸಿದ ಬಳಿಕ ಯಂತ್ರಗಳ ಕಾರ್ಯ ನಿರ್ವಹಣೆಯ ಕುರಿತು ಆಡಿಟ್ಗೆ ತಾನು ಆದೇಶಿಸಿರುವುದಾಗಿ ಅದು ಬಹಿರಂಗಗೊಳಿಸಿದೆ.
 
ಸರಕಾರವು ವಿವಿಧ ಕಂಪನಿಗಳಿಂದ ಖರೀದಿಸಿರುವ ವೆಂಟಿಲೇಟರ್ಗಳ ದರಗಳಲ್ಲಿಯೂ ಬೃಹತ್ ವ್ಯತ್ಯಾಸಗಳಿವೆ. ಪ್ರತಿ ಯೂನಿಟ್ ಗೆ 5,04,640 ರೂ.ನಂತೆ ಭಾರತ ಇಲೆಕ್ಟ್ರಾನಿಕ್ಸ್ ಗೆ 30,000 ಯಂತ್ರಗಳ ಖರೀದಿಗೆ ಬೇಡಿಕೆ ಸಲ್ಲಿಸಲಾಗಿದ್ದರೆ,1,66,376 ರೂ.ಗಳಂತೆ 9,500 ಯಂತ್ರಗಳ ಖರೀದಿಗಾಗಿ ಎಎಂಟಿಝಡ್(ಬೇಸಿಕ್)ಗೆ ಬೇಡಿಕೆಯನ್ನು ಸಲ್ಲಿಸಲಾಗಿತ್ತು. ಅಲೈಡ್ ಮೆಡಿಕಲ್ ಪ್ರತಿ ಯೂನಿಟ್ ಗೆ 8,62,400 ರೂ.ದರದಲ್ಲಿ 350 ವೆಂಟಿಲೇಟರ್ಗಳನ್ನು ಪೂರೈಸಿತ್ತು.

ಸೈನೊಫಾರ್ಮ್‌ ನಿಂದ ತಲಾ 10,89,500 ರೂ.ಗಳಂತೆ ಸುಮಾರು 1,000,ಹ್ಯಾಮಿಲ್ಟನ್ನಿಂದ ತಲಾ 10,32,400 ರೂ.ದರದಲ್ಲಿ 771 ಮತ್ತು ಡ್ರೇಜರ್ತ‌ ನಿಂದಲಾ 17 ಲ.ರೂ.ದರದಲ್ಲಿ 15 ವೆಂಟಿಲೇಟರ್ಗಳನ್ನು ಖರೀದಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News