ಸರ್ವ ಪಕ್ಷ ಸಭೆಗೆ ಕಾಶ್ಮೀರದ 14ಕ್ಕೂ ಅಧಿಕ ರಾಜಕೀಯ ನಾಯಕರಿಗೆ ಆಹ್ವಾನ

Update: 2021-06-20 16:52 GMT
 ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಜೂ.20: ವಿಧಾನಸಭಾ ಚುನಾವಣೆ ಸೇರಿದಂತೆ ಜಮ್ಮುಕಾಶ್ಮೀರದಲ್ಲಿ ರಾಜಕೀಯ ಪ್ರಕ್ರಿಯೆಯನ್ನು ಪುನಾರಂಭಿಸುವ ಬಗ್ಗೆ ಸಮಾಲೋಚನೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಕರೆದಿರುವ ಸರ್ವಪಕ್ಷ ಸಭೆಗೆ ಜಮ್ಮುಕಾಶ್ಮೀರದ ರಾಜಕೀಯ ಪಕ್ಷಗಳ 14 ಮಂದಿ ನಾಯಕರಿಗೆ ಆಹ್ವಾನ ನೀಡಲಾಗಿದೆಯೆಂದು ಮೂಲಗಳು ತಿಳಿಸಿವೆ.

ಜೂನ್ 24ರಂದು ಹೊಸದಿಲ್ಲಿಯ ಪ್ರಧಾನಿ ನಿವಾಸದಲ್ಲಿ ನಡೆಯಲಿರುವ ಸರ್ವಪಕ್ಷಗಳ ಸಭೆಯಲ್ಲಿ ಜಮ್ಮುಕಾಶ್ಮೀರದ ಪ್ರಮುಖ ರಾಜಕೀಯ ಪಕ್ಷಗಳಾದ ಪೀಪಲ್ಸ್ ಡೆಮಾಕ್ರಾಟಿಕ್ ಪಾರ್ಟಿ (ಪಿಡಿಪಿ) ಹಾಗೂ ನ್ಯಾಶನಲ್ ಕಾನ್ಫರೆನ್ಸ್ (ಎನ್ಸಿ)ನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಬಿಜೆಪಿ , ಕಾಂಗ್ರೆಸ್ ಸೇರಿದಂತೆ ರಾಷ್ಟ್ರೀಯ ಪಕ್ಷಗಳ ನಾಯಕರನ್ನೂ ಸಭೆಗೆ ಆಹ್ವಾನಿಸಲಾಗಿದೆ.

ಗುರುವಾರದ ಸಭೆಯಲ್ಲಿ ಪಾಲ್ಗೊಳ್ಳಲು ತನಗೆ ಆಹ್ವಾನ ದೊರೆತಿರುವುದಾಗಿ ಪಿಡಿಪಿ ನಾಯಕಿ, ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ದೃಢಪಡಿಸಿದ್ದಾರೆ. ಮಾಜಿಮುಖ್ಯಮಂತ್ರಿಗಳು ಹಾಗೂ ನ್ಯಾಶನಲ್ ಕಾನ್ಫರೆನ್ಸ್ ಮುಖಂಡರಾದ ಉಮರ್ ಫಾರೂಕ್ ಹಾಗೂ ಫಾರೂಕ್ ಅಬ್ದುಲ್ಲಾ ಅರೂ ಕೂಡಾ ತಮ್ಮ ಪಕ್ಷಕ್ಕೆ ಸಭೆಯಲ್ಲಿ ಭಾಗವಹಿಸಲು ಆಹ್ವಾನ ಬಂದಿರುವುದಾಗಿ ತಿಳಿಸಿದ್ದಾರೆ. ಪಕ್ಷದ ಹಿರಿಯ ಮುಖಂಡರ ಜೊತೆ ಸಮಾಲೋಚನೆ ನಡೆಸಿದ ಬಳಿಕಷ್ಟೇ ಸಭೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ಸರ್ವಪಕ್ಷ ಸಭೆಗೆ ಕೇಂದ್ರ ಸರಕಾರವು ಆಹ್ವಾನ ನೀಡಿರುವ ವಿಷಯವಾಗಿ ಪಿಡಿಪಿಯ ರಾಜಕೀಯ ವ್ಯವಹಾರಗಳ ಸಮಿತಿಯು ರವಿವಾರ ಸಭೆ ಸೇರಿ ಚರ್ಚಿಸಿತು. ಗುಪ್ಕಾರ್ನಲ್ಲಿರುವ ಮೆಹಬೂಬಾ ಮುಫ್ತಿಯವರ ನಿವಾಸದಲ್ಲಿ ಸಭೆ ನಡೆದಿರುವುದಾಗಿ ಮೂಲಗಳು ತಿಳಿಸಿವೆ.

ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್,ಜಮ್ಮುಕಾಶ್ಮೀರದ ಕಾಂಗ್ರೆಸ್ ನಾಯಕರಾದ ತಾರಾಚಂದ್, ಪೀಪಲ್ಸ್ ಕಾನ್ಫರೆನ್ಸ್ ನಾಯಕ ಮುಝಾಫರ್ ಬೇಗ್ ಹಾಗೂ ಬಿಜೆಪಿ ಮುಖಂಡರಾದ ನಿರ್ಮಲ್ ಸಿಂಗ್ ಗುಪ್ತಾ ಹಾಗೂ ಕವಿಂದರ್ಸಿಂಗ್ ಅವರಿಗೂ ಆಹ್ವಾನ ನೀಡಲಾಗಿದೆ.
 
2018ರಿಂದೀಚೆಗೆ ನೆನೆಗುದಿಯಲ್ಲಿರುವ ಜಮ್ಮುಕಾಶ್ಮೀರ ವಿಧಾನಸಭಾ ಚುನಾವಣೆಯನ್ನು ಶೀಘ್ರದಲ್ಲೇ ನಡೆಸುವುದಾಗಿ ಪ್ರಧಾನಿಯವರು ಸರ್ವಪಕ್ಷ ಸಭೆಯಲ್ಲಿ ಭರವಸೆ ನೀಡುವ ಸಾಧ್ಯತೆಯಿದೆಯೆಂದು ಸರಕಾರಿ ಮೂಲಗಳು ತಿಳಿಸಿವೆ. 

ಜಮ್ಮುಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮರಳಿ ನೀಡಲು ಕಾಂಗ್ರೆಸ್ ಆಗ್ರಹ

ಜಮ್ಮುಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಸ್ಥಾಪಿಸಿ ವಿಧಾನಸಭಾ ಚುನಾವಣೆಗಳನ್ನು ನಡೆಸಬೇಕೆಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಆಗ್ರಹಿಸಿದ್ದಾರೆ. ಜಮ್ಮುಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಮರಳಿ ನೀಡಿದಲ್ಲಿ ಮಾತ್ರವೇ ಆ ಪ್ರದೇಶದ ಜನತೆಯ ಪ್ರಜಾತಾಂತ್ರಿಕ ಹಕ್ಕುಗಳ ಮರುಸ್ಥಾಪನೆಯನ್ನು ಖಾತರಿಪಡಿಸಲು ಸಾಧ್ಯವೆಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News