ಕೋವಿಡ್ ಸಂತ್ರಸ್ತರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ನೀಡಲು ಸಾಧ್ಯವಿಲ್ಲ: ಕೇಂದ್ರ ಸರಕಾರ ‌

Update: 2021-06-20 17:37 GMT

ಹೊಸದಿಲ್ಲಿ, ಜೂ. 20: ಪ್ರಾಕೃತಿಕ ವಿಕೋಪ ಪ್ರಕರಣಕ್ಕೆ ಮಾತ್ರ ವಿಪತ್ತು ಪರಿಹಾರ ನಿಧಿಯಿಂದ ಪರಿಹಾರ ನೀಡಲು ಆಸ್ಪದವಿದೆ. ಈ ನಿಧಿಯಿಂದ ಕೋವಿಡ್ ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ನೀಡಲು ಸಾಧ್ಯವಿಲ್ಲ. ಅಲ್ಲದೆ ಆರ್ಥಿಕ ಹೊರೆಯಾಗುವುದರಿಂದ ಕೋವಿಡ್ ಸಂತ್ರಸ್ತರ ಕುಟುಂಬಕ್ಕೆ ರಾಜ್ಯ ಸರಕಾರಗಳೂ ತಲಾ ೪ ಲಕ್ಷ ರೂ. ನೀಡಲು ಆಗದು  ಎಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್ ಗೆ ತಿಳಿಸಿದೆ.

ಕೋವಿಡ್ ಸಂತ್ರಸ್ತರಿಗೆ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಿಂದ ಪರಿಹಾರ ನೀಡಿದ ಮೇಲೆ ಇತರ ರೋಗಗಳಿಗೆ ನೀಡಲಾಗದು ಎಂದರೆ ಅನ್ಯಾಯವಾಗುತ್ತದೆ. ಕೊರೋನ ಮಾರಣಾಂತಿಕ ಸೋಂಕು 3.85 ಲಕ್ಷಕ್ಕೂ ಹೆಚ್ಚು ಬಲಿ ಪಡೆದಿದೆ ಮತ್ತು ಸಾವಿನ ಪ್ರಮಾಣ ಹೆಚ್ಚುತ್ತಲೇ ಇದೆ. ಆದ್ದರಿಂದ ಸಂತ್ರಸ್ತ ಕುಟುಂಬಗಳಿಗೆ ತಲಾ 4 ಲಕ್ಷ ರೂ. ನೀಡಲು ರಾಜ್ಯ ಸರಕಾರಗಳಿಂದ ಆಗದು ಎಂದು ಸುಪ್ರೀಂಕೋರ್ಟ್ ಗೆ ಸಲ್ಲಿಸಿದ 183 ಪುಟಗಳ ಅಫಿದಾವಿತ್ನಲ್ಲಿ ಕೇಂದ್ರ ತಿಳಿಸಿದೆ.

ಭೂಕಂಪ, ನೆರೆ ಮುಂತಾದ ಪ್ರಾಕೃತಿಕ ವಿಕೋಪದ ಸಂತ್ರಸ್ತರಿಗೆ ಪರಿಹಾರ ನೀಡಲು ವಿಪತ್ತು ನಿರ್ವಹಣಾ ಕಾಯ್ದೆ ಸ್ಪಷ್ಟವಾಗಿ ತಿಳಿಸಿದೆ. ಜೊತೆಗೆ, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ವೆಚ್ಚ ಹೆಚ್ಚಿರುವುದು ಹಾಗೂ ಆದಾಯ ತಗ್ಗಿರುವುದು ರಾಜ್ಯಗಳ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರಿದೆ. ವಿರಳ ಸಂಪನ್ಮೂಲವನ್ನು ಪರಿಹಾರ ನೀಡಲು ಬಳಸುವುದರಿಂದ ಇತರ ಅಗತ್ಯಸೇವೆಗಳಿಗೆ ವಿನಿಯೋಗಿಸಲು ಆರ್ಥಿಕ ಕೊರತೆ ಎದುರಾಗಬಹುದು ಮತ್ತು ಇದರಿಂದ ಒಳತಿಗಿಂತ ಕೆಡುಕೇ ಹೆಚ್ಚಾಗುತ್ತದೆ ಎಂದು ಅಫಿದಾವಿತ್ನಲ್ಲಿ ಉಲ್ಲೇಖಿಸಲಾಗಿದೆ.

ಕಾರ್ಯನಿರ್ವಾಹಕ ನೀತಿಗಳಿಂದ ದೂರ ಉಳಿಯುವುದಾಗಿ ಈ ಹಿಂದೆ ಸುಪ್ರೀಂಕೋರ್ಟ್ ಹಲವು ಆದೇಶಗಳಲ್ಲಿ ಹೇಳಿರುವುದನ್ನು ನೆನಪಿಸಿರುವ ಕೇಂದ್ರ ಸರಕಾರ, ನ್ಯಾಯಾಂಗವು ಕೇಂದ್ರ ಸರಕಾರದ ಪರವಾಗಿ ನಿರ್ಧಾರ ಕೈಗೊಳ್ಳಲಾಗದು ಎಂದು ಹೇಳಿದೆ.

ಮಧ್ಯಪ್ರದೇಶ ಸರಕಾರ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 1 ಲಕ್ಷ ರೂ. ಪರಿಹಾರ ಘೋಷಿಸಿದೆ. ಸೋಂಕಿನ 2ನೇ ಅಲೆಯ ಸಂದರ್ಭ ಆಮ್ಲಜನಕ ಕೊರತೆಯಿಂದ ಸಾವು ಸಂಭವಿಸಿದರೆ ಸಂತ್ರಸ್ತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ನೀಡುವುದಾಗಿ ದಿಲ್ಲಿ ಸರಕಾರ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News