ಕೋವಿಡ್-19ನಿಂದ ಮೃತಪಟ್ಟವರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರದ ಕುರಿತ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

Update: 2021-06-21 09:51 GMT

ಹೊಸದಿಲ್ಲಿ: ಕೋವಿಡ್-19 ನಿಂದ ಮೃತಪಟ್ಟವರ ಕುಟುಂಬಗಳಿಗೆ 4 ಲಕ್ಷ ರೂ.ಗಳ ಪರಿಹಾರವನ್ನು ಪಾವತಿಸಬೇಕೆಂದು ನಿರ್ದೇಶಿಸಲು ಕೋರಿ ಸಲ್ಲಿಸಿದ ಮನವಿಯ ಕುರಿತು ಸುಪ್ರೀಂ ಕೋರ್ಟ್ ಸೋಮವಾರ ತೀರ್ಪು ಕಾಯ್ದಿರಿಸಿದೆ.

ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಹಾಗೂ ಎಂ. ಆರ್. ಷಾ ಅವರನ್ನೊಳಗೊಂಡ ವಿಶೇಷ ರಜಾ ಕಾಲದ ಪೀಠವು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಹಿರಿಯ ವಕೀಲ ಎಸ್. ಬಿ. ಉಪಾಧ್ಯಾಯ ಮತ್ತು ಇತರ ವಕೀಲರ ವಾದವನ್ನು ಸುಮಾರು ಎರಡು ಗಂಟೆಗಳ ಕಾಲ ಆಲಿಸಿತು.

ಮೂರು ದಿನಗಳಲ್ಲಿ ಲಿಖಿತ ಸಲ್ಲಿಕೆಗಳನ್ನು ಸಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯವು ಕಕ್ಷಿದಾರರಿಗೆ ಸೂಚಿಸಿತು ಹಾಗೂ ಕೋವಿಡ್-19 ನಿಂದ ಮೃತಪಟ್ಟವರ ಅವಲಂಬಿತರಿಗೆ ಮರಣ ಪ್ರಮಾಣಪತ್ರಗಳನ್ನು ನೀಡುವ ಪ್ರಕ್ರಿಯೆಯನ್ನು ಸರಳಗೊಳಿಸುವಂತೆ ಕೇಂದ್ರಕ್ಕೆ ನಿರ್ದಿಷ್ಟವಾಗಿ ನಿರ್ದೇಶನ ನೀಡಿತು.

ರಾಜ್ಯ ಸರಕಾರಗಳು ಹಾಗೂ ಕೇಂದ್ರದ ಆರ್ಥಿಕತೆಯು ತೀವ್ರ ಒತ್ತಡಕ್ಕೆ ಸಿಲುಕಿರುವ ಕಾರಣ ಕೋವಿಡ್-19 ನಿಂದ ಮೃತಪಟ್ಟವರ ಕುಟುಂಬಗಳಿಗೆ 4 ಲಕ್ಷ ರೂಪಾಯಿಗಳ ಪರಿಹಾರವನ್ನು ಪಾವತಿಸಲಾಗುವುದಿಲ್ಲ ಎಂದು ಕೇಂದ್ರವು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News