ಹಳೆಯ ಫೋಟೋ ಪೋಸ್ಟ್ ಮಾಡಿ ದಿಲ್ಲಿಯಲ್ಲಿ ನೀರಿನ ಸಮಸ್ಯೆ ಇದೆ ಎಂದು ಬಿಂಬಿಸಲು ಯತ್ನಿಸಿದ ಬಿಜೆಪಿ ನಾಯಕ

Update: 2021-06-21 10:35 GMT
Photo: Twitter/@VijayGoelBJP

ಹೊಸದಿಲ್ಲಿ : ರಾಜಧಾನಿ ದಿಲ್ಲಿಯಲ್ಲಿ ನೀರಿನ ಟ್ಯಾಂಕರ್ ಒಂದಕ್ಕೆ ಜನರು ಸುತ್ತುವರಿದಿರುವ ಫೋಟೋವನ್ನು ಟ್ವಿಟ್ಟರ್‍ನಲ್ಲಿ ಶೇರ್ ಮಾಡಿರುವ ಬಿಜೆಪಿ ನಾಯಕ ವಿಜಯ್ ಗೋಯೆಲ್, ರಾಜಧಾನಿಯಲ್ಲಿನ ನೀರಿನ ಸಮಸ್ಯೆಯನ್ನು ಅಲ್ಲಿನ ಆಪ್ ಸರಕಾರ ನಿರ್ಲಕ್ಷ್ಯಿಸುತ್ತಿದೆ ಎಂದು ಆರೋಪಿಸಿದ್ದಾರೆ.

ರವಿವಾರ ಗೋಯೆಲ್ ಈ ಚಿತ್ರ ಟ್ವೀಟ್ ಮಾಡಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

"ದಿಲ್ಲಿಯಲ್ಲಿ ನೀರಿನ ಪರಿಸ್ಥಿತಿ, ಭೈಯ್ಯಾ ಕೇಜ್ರಿವಾಲ್ ಏನಾದರೂ ಮಾಡಿ,'' ಎಂದು ಈ ಫೋಟೋ ಜತೆಗೆ ಗೋಯೆಲ್  ಬರೆದಿದ್ದರು.

ಅವರ ಟ್ವೀಟ್ ಅನ್ನು 800ಕ್ಕೂ ಅಧಿಕ ಮಂದಿ ರಿಟ್ವೀಟ್ ಮಾಡಿದ್ದರಲ್ಲದೆ ಸೂರತ್ ಬಿಜೆಪಿ ಶಾಸಕ ಹರ್ಷ್ ಸಂಘವಿ, ಗುಜರಾತ್ ಬಿಜೆಪಿ  ಐಟಿ ಘಟಕದ ಸದಸ್ಯರಾದ ನಿಖಿಲ್ ಪಟೇಲ್, ತರುಣ್ ಜೆ ಬರೋಟ್ ಮತ್ತು ಹಲವು ಬಿಜೆಪಿ ನಾಯಕರು ಅದನ್ನು ಶೇರ್ ಮಾಡಿದ್ದರು.

ಆದರೆ ವಾಸ್ತವವಾಗಿ ಈ ಫೋಟೋ 2009ರದ್ದಾಗಿತ್ತು. ದಿಲ್ಲಿಯ ಸಂಜಯ್ ಕಾಲನಿ ನಿವಾಸಿಗಳು ದಿಲ್ಲಿ ಜಲ ಮಂಡಳಿಯ ನೀರಿನ ಟ್ಯಾಂಕರ್ ಒಂದನ್ನು ಸುತ್ತುವರಿದಿದ್ದರು. ಆಗ ದಿಲ್ಲಿಯಲ್ಲಿ ಶೀಲಾ ದೀಕ್ಷಿತ್ ಮುಖ್ಯಮಂತ್ರಿಯಾಗಿದ್ದರಲ್ಲದೆ ಈ ಫೋಟೋ ಕ್ಲಿಕ್ಕಿಸಿದವರು ರಾಯ್ಟರ್ಸ್ ನ ಅದ್ನಾನ್ ಅಬಿದಿ ಆಗಿದ್ದರು.

ಗೋಯೆಲ್ ಅವರ ದಾರಿತಪ್ಪಿಸುವ ಟ್ವೀಟ್ ಮತ್ತು ಫೋಟೋಗೆ ತಿರುಗೇಟು ನೀಡಿರುವ ಆಪ್, 2009ನಲ್ಲಿ ಈ ಚಿತ್ರದ ಜತೆ ಪ್ರಕಟವಾದ ಲೇಖನದ ಸ್ಕ್ರೀನ್ ಶಾಟ್ ಕೂಡ ಪೋಸ್ಟ್ ಮಾಡಿದೆ.

"ಹಿಂದಿನ ಘಟನೆ ನೆನಪಿಸಿ ಈ 2009ರ ಫೋಟೋ ಶೇರ್ ಮಾಡಿದ್ದೀರಾ ವಿಜಯ್ ಗೋಯೆಲ್ ಜೀ ಅಥವಾ ಕೇಜ್ರಿವಾಲ್ ಸರಕಾರದ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶಪೂರ್ವಕ ಯತ್ನವೇ?,'' ಎಂದು ಆಪ್ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News