ನಮ್ಮ ಸಂಕಷ್ಟ ಆಲಿಸಿ ವ್ಯಾಪಾರಕ್ಕೆ ಅನುಮತಿಸಿ: ಚಪ್ಪಲಿ, ಜವಳಿ ವ್ಯಾಪಾರಸ್ಥರಿಂದ ಪ್ರತಿಭಟನೆ

Update: 2021-06-21 13:09 GMT

ಮಂಗಳೂರು, ಜೂ. 21: ಅವೈಜ್ಞಾನಿಕ ಲಾಕ್‌ಡೌನ್‌ನಿಂದ ನಾವು ಬೀದಿಗೆ ಬರುವಂತಾಗಿದೆ. ಜವಳಿ ಹಾಗೂ ಚಪ್ಪಲಿ ಕೂಡಾ ಅಗತ್ಯ ವಸ್ತುಗಳಲ್ಲಿ ಒಂದಾಗಿದ್ದು, ನಮಗೆ ವ್ಯಾಪಾರಕ್ಕೆ ಅನುಮತಿ ನೀಡುವ ಮೂಲಕ ಗ್ರಾಹಕರ ಸೇವೆಗೆ ಅವಕಾಶ ಕಲ್ಪಿಸಿ ಎಂದು ದ.ಕ. ಜಿಲ್ಲೆಯ ಚಪ್ಪಲಿ ಹಾಗೂ ಜವಳಿ ವ್ಯಾಪಾರಸ್ಥರು ಒತ್ತಾಯಿಸಿದ್ದಾರೆ.

ಪ್ರಸಕ್ತ ದ.ಕ. ಜಿಲ್ಲೆಯಲ್ಲಿನ ಲಾಕ್‌ಡೌನ್ ಸಡಿಲಿಕೆ ಅವಧಿಯಲ್ಲಿ ತಮಗೂ ವ್ಯಾಪರಕ್ಕೆ ಅವಕಾಶ ಕಲ್ಪಿಸಬೇಕೆಂದು ದ.ಕ. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವ ಮೊದಲು ಜಿಲ್ಲಾಧಿಕಾರಿ ಕಚೇರಿ ಎದುರು ವ್ಯಾಪಾರಸ್ಥರು ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡಿದ ಮಂಗಳೂರಿನ ಜವಳಿ ವ್ಯಾಪಾರಸ್ಥರಾದ ಸಂತೋಷ್ ಕಾಮತ್, ನಮ್ಮ ಸಂಕಷ್ಟಗಳ ಕುರಿತಂತೆ ಜನಪ್ರತಿನಿಧಿಗಳಿಗೆ ಮನವಿ ನೀಡುತ್ತಾ ಬಂದಿರುವ ನಾವು ಇದೀಗ ಅನಿವಾರ್ಯವಾಗಿ ಕೋವಿಡ್ ನಿಯಮಾವಳಿ ನಡುವೆಯೂ ಪ್ರತಿಭಟಿಸುವಂತಾಗಿದೆ ಎಂದರು.

ದ.ಕ. ಜಿಲ್ಲೆಯಲ್ಲಿ 2000ಕ್ಕೂ ಅಧಿಕ ಬಟ್ಟೆ ಅಂಗಡಿಗಳಿವೆ. ಅದರಲ್ಲಿ ಸುಮಾರು 15000ಕ್ಕೂ ಅಧಿಕ ಮಂದಿ ಕೆಲಸಕ್ಕಿದ್ದಾರೆ. ಈಗಾಗಲೇ ಎರಡು ತಿಂಗಳು ಅವಧಿ ಕಾಲ ಅಂಗಡಿಗಳು ಮುಚ್ಚಿರುವುದರಿಂದ ಅಲ್ಲಿ ದುಡಿಯುವವರ ಜತೆಗೆ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಈಗಾಗಲೇ ಪ್ರತಿನಿತ್ಯ ದಿನಸಿ, ತರಕಾರಿ, ಹಣ್ಣು ಹಂಪಲು ಖರೀದಿಗೆ ಅವಕಾಶ ನೀಡಿರುವಂತೆ ಕನಿಷ್ಠ ಪರ್ಯಾಯ ದಿನದಲ್ಲಾದರೂ ನಮಗೆ ವ್ಯಾಪಾರಕ್ಕೆ ಅವಕಾಶ ನೀಡಬೇಕು. ಇಲ್ಲವಾದಲ್ಲಿ ನಮ್ಮ ಹೋರಾಟ ಮುಂದುವರಿಸಲಾಗುವುದು ಎಂದರು.

ನಾವು ಈಗಾಗಲೇ 60 ದಿನಗಳಿದಂ ಗೃಹ ಬಂಧನದಲ್ಲಿದ್ದೇವೆ. ಜುಲೈ 5ವರೆಗಾದರೆ ಮತ್ತೆ 75 ದಿನಗಳಾಗಲಿದೆ. ಆದರೆ ಈಗಾಗಲೇ 60 ದಿನಗಳಲ್ಲಿ ಒಳಗಿದ್ದೂ ಕೊರೋನ ಕಡಿಮೆಯಾಗದಿರುವುದಕ್ಕೆ ನಾವು ವ್ಯಾಪಾರಿಗಳೇ ಕಾರಣವೇ ಎಂದು ಪ್ರಶ್ನಿಸಿದ ಮೂಡಬಿದ್ರೆಯ ಜವಳಿ ವ್ಯಾಪಾರಿ ಸದಾಶಿವ ರಾವ್,  ನಮ್ಮ ಅಂಗಡಿಗಳಲ್ಲಿರುವ ಕೋಟ್ಯಾಂತರ, ಲಕ್ಷಾಂತರ ರೂ. ಮೌಲ್ಯದ ದಾಸ್ತಾನು ತನ್ನ ಹೊಳಪು, ಫ್ಯಾಶನ್ ಕಳೆದುಕೊಳ್ಳುತ್ತಿವೆ. ಕಳೆದ ವರ್ಷ ನನ್ನಂತಹ ಸುಮಾರು 800 ಚದರ ಅಡಿ ಅಳತೆಯ ಅಂಗಡಿಯವ ಸುಮಾರು 15 ಲಕ್ಷ ರೂ.ಗಳನ್ನು ಕಳೆದುಕೊಡಿದ್ದೇವೆ. ಈ ವರ್ಷ ಅದನ್ನು ಮಾರಾಟ ಸಾಧ್ಯವಿಲ್ಲ. ದೇಶಕ್ಕೆ ಜಿಎಸ್‌ಟಿ ನೀಡುವ, ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ಜವಳಿ ಉದ್ಯಮಕ್ಕೆ ಸಾರಾಸಗಟಾಗಿ ತಿರಸ್ಕರಿಸುವುದು ಸಮಂಜಸವಲ್ಲ ಎಂದರು.

ಜವಳಿ ಹಾಗೂ ಚಪ್ಪಲಿ ಕೂಡಾ ಮಾನವರ ಅಗತ್ಯ ವಸ್ತುವಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಜನರಿಗೆ ಅಗತ್ಯವಾಗಿ ಮಾಸ್ಕ್ ಒದಗಿಸಿರುವುದು ಈ ಜವಳಿ ಉದ್ಯಮ ಎಂಬುದನ್ನು ಸರಕಾರ ಮರೆಯಬಾರದು. ಮಾತ್ರವಲ್ಲದೆ, ದೇಶದ ಜಿಎಸ್‌ಟಿಗೂ ಈ ವ್ಯಾಪಾರಸ್ಥರ ಕೊಡುಗೆ ಅಪಾರ. ಜವಳಿ ಹಾಗೂ ಚಪ್ಪಲಿ ಉದ್ಯಮವನ್ನು ನಂಬಿದ 40000ಕ್ಕೂ ಅಧಿಕ ಕುಟುಂಬಗಳು ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿವೆ. ಹಾಗಾಗಿ ನಮಗಾಗಿರುವ ಅನ್ಯಾಯವನ್ನು ಬಗೆಹರಿಸಿ ತಕ್ಷಣ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸುಳ್ಯದ ಎಂ.ಬಿ. ಸದಾಶಿವ ಆಗ್ರಹಿಸಿದರು.

ಜಿಲ್ಲೆಯ ವಿವಿಧ ಕಡೆಗಳಿಂದ ಆಯ್ದ ಚಪ್ಪಲಿ ಹಾಗೂ ಜವಳಿ ವ್ಯಾಪಾರಸ್ಥರು ಪ್ರತಿಭಟನೆಯಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಿ ಭಾಗವಹಿಸಿದರು. ಯಾವುದೇ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ನಡೆದ ಪ್ರತಿಭಟನೆಯಲ್ಲಿ ಸುಳ್ಯದಿಂದ ಎಂ.ಬಿ. ಸದಾಶಿವ, ಗೋಪಾಲ್ ಎಂ.ಯು. ಪುತ್ತೂರು, ದಿನೇಶ್ ಮಂಗಳೂರು, ಟೆರೆನ್ಸ್ ಡಿಸೋಜಾ, ಸಯ್ಯದ್ ಇಸ್ಮಾಯಿಲ್, ರಹ್ಮಾನ್, ಬಿಪಿನ್ ರಾಜ್ ಮೊದಲಾದವರು ಚಪ್ಪಲಿ ಹಾಗೂ ಜವಳಿ ವ್ಯಾಪಾರಸ್ಥರ ಸಂಕಷ್ಟವನ್ನು ತೋಡಿಕೊಂಡರು.

ಬಳಿಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.ಯವರಿಗೆ ಮನವಿ ಸಲ್ಲಿಸಲಾಗಿದ್ದು, ಕೋವಿಡ್ ನಿಯಮಾವಳಿಗಳನ್ನು ಶಿಸ್ತುಬದ್ಧವಾಗಿ ಅನುಸರಿಸಿ ವ್ಯವಹಾರ ನಡೆಸಲು ತಾವು ಬದ್ಧರಾಗಿದ್ದು, ಅದಕ್ಕೆ ಅವಕಾಶ ನೀಡಬೇಕೆಂದು ವ್ಯಾಪಾರಸ್ಥರು ಮನವಿಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News