ದ.ಕ. ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಿಲಿಕೆ; ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನತೆ

Update: 2021-06-21 12:20 GMT

ಮಂಗಳೂರು, ಜೂ.21: ದ.ಕ. ಜಿಲ್ಲೆಯಲ್ಲಿ ಸೋಮವಾರದಿಂದಲೇ ಲಾಕ್‌ಡೌನ್ ನಿಯಮದಲ್ಲಿ ಕೊಂಚ ಸಡಿಲಿಕೆ ಮಾಡಲಾಗಿದೆ. ಬೆಳಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿರುವುದರಿಂದ ಜನತೆ ನಿಟ್ಟುಸಿರು ಬಿಡುವಂತಾಗಿದೆ.

ಮಂಗಳೂರು ನಗರದ ಸ್ಟೇಟ್‌ಬ್ಯಾಂಕ್ ವಲಯ, ಕಂಕನಾಡಿ ಸಹಿತ ಹಲವೆಡೆ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಜನತೆ ಮುಗಿಬಿದ್ದಿದ್ದರು. ಬಹುತೇಕ ಕಡೆ ವಸ್ತುಗಳ ಖರೀದಿಯ ಸಂದರ್ಭ ಅರ್ಧಂಬರ್ಧ ಮಾಸ್ಕ್ ಧರಿಸುವುದು, ಸುರಕ್ಷಿತ ಅಂತರ ಕಾಯ್ದುಕೊಳ್ಳದೇ ವ್ಯಾಪಾರದಲ್ಲಿ ಮಗ್ನರಾಗಿದ್ದ ದೃಶ್ಯಗಳು ಸಾಮಾನ್ಯ ಎನ್ನುವಂತಿದ್ದವು.

ಮೀನು ಮಾರುಕಟ್ಟೆ, ಮಾಂಸದಂಗಡಿ ಫುಲ್ ರಶ್: ನಗರದ ಸ್ಟೇಟ್‌ಬ್ಯಾಂಕ್ ಸಮೀಪದ ಮೀನು ಮಾರುಕಟ್ಟೆಯಲ್ಲಿ ಗ್ರಾಹಕರು ಖರೀದಿಯಲ್ಲಿ ಉತ್ಸುಕರಾಗಿದ್ದರು. ಇನ್ನು ಖರೀದಿಗೆ ಮಧ್ಯಾಹ್ನದವರೆಗೂ ಅವಕಾಶ ನೀಡಿದ್ದರಿಂದ ಗ್ರಾಹಕರ ಸಂಖ್ಯೆಯಲ್ಲೂ ಹೆಚ್ಚಳ ಕಂಡುಬಂದಿತ್ತು. ಇನ್ನು ಮಾಂಸದಂಗಡಿ ಮುಂದೆಯೂ ಗ್ರಾಹಕರು ಸಾಲುಗಟ್ಟಿ ಮಾಂಸ ಖರೀದಿಸುವ ದೃಶ್ಯಗಳು ಕಂಡುಬಂದವು. ಮಾಂಸದಂಗಡಿಗಳು ಜನರಿಂದ ಮುತ್ತಿಕೊಂಡಿದ್ದವು.

‘ಬಟ್ಟೆ ಅಂಗಡಿ ತೆರೆಯಲಿ’: ‘ದ.ಕ. ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಿಲಿಕೆಯಾಗಿದ್ದು, ಮಧ್ಯಾಹ್ನ 1 ಗಂಟೆವರೆಗೆ ಖರೀದಿಗೆ ಅವಕಾಶ ನೀಡಲಾಗಿದೆ. ಬಹುತೇಕ ಅಂಗಡಿಗಳನ್ನು ತೆರೆಯಲಾಗಿದೆ. ಆದರೆ ಬಟ್ಟೆ ಅಂಗಡಿಗಳಿಗೆ ಮಾತ್ರ ಅವಕಾಶ ನೀಡಿಲ್ಲ. ಜವಳಿ ವ್ಯಾಪಾರಿಗಳಿಗೆ ಸಾಕಷ್ಟು ನಷ್ಟವಾಗಿದ್ದು, ನಮಗೆ ಅನ್ಯಾಯವಾಗಿದೆ. ಸಾಕಷ್ಟು ಹಣ ವಿನಿಯೋಗಿಸಿ ಬೆಲೆಬಾಳುವ ಬಟ್ಟೆ ಖರೀದಿಸಲಾಗಿತ್ತು. ಈ ಬಟ್ಟೆಗಳನ್ನು ಮಾರಾಟ ಮಾಡಿದ ನಂತರವೇ ಆದಾಯ ಬರಲಿದೆ. ಇಲ್ಲದಿದ್ದರೆ ಬಟ್ಟೆ ಕೊಳೆತು ಹೋಗುವ ಸಾಧ್ಯತೆ ಇದೆ. ಎಲಾಸ್ಟಿಕ್ ಬಟ್ಟೆ ಹಾಳಾಗಿದ್ದು, ಹಾಕಿದ ಬಂಡವಾಳವೇ ಕೈಸೇರದಂತಾಗಿದೆ. ನಮಗೆ ಯಾರ ಸಹಾಯವೂ ಬೇಕಾಗಿಲ್ಲ; ಕಿಟ್ ಬೇಕಾಗಿಲ್ಲ. ಲಾಕ್‌ಡೌನ್ ಸಡಿಲಿಕೆ ಮಾಡಿ, ವ್ಯಾಪಾರಕ್ಕೆ ಅನುವು ಮಾಡಿಕೊಟ್ಟರೆ ಸಾಕು’ ಎನ್ನುತ್ತಾರೆ ಮಂಗಳೂರಿನ ಬಟ್ಟೆ ವ್ಯಾಪಾರಿ ಪ್ರವೀಣ್ ಚಂದ್ರ ರಾವ್.

‘ಲಾಕ್‌ಡೌನ್ ಇನ್ನಷ್ಟು ಸಡಿಲಿಕೆಯಾಗಲಿ’: ‘ಲಾಕ್‌ಡೌನ್ ಅಲ್ಪ ಪ್ರಮಾಣದಲ್ಲಿ ಸಡಿಲಿಕೆಯಾಗಿದೆ ನಿಜ. ಆದರೆ ಈ ಸಮಯ ಸಾಕಾಗುವುದಿಲ್ಲ. ಬಸ್ ಸೌಕರ್ಯಕ್ಕೆ ಜಿಲ್ಲಾಡಳಿತ ಅವಕಾಶ ನೀಡಿದಲ್ಲಿ ಹೆಚ್ಚಿನ ಗ್ರಾಹಕರು ಅಗತ್ಯ ವಸ್ತುಗಳ ಖರೀದಿಗೆ ಬರುವ ನಿರೀಕ್ಷೆ ಇದೆ. ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ವ್ಯಾಪಾರವೂ ಹೇಳಿಕೊಳ್ಳುವಂತೆ ಲಾಭದಾಯಕವಾಗಿಲ್ಲ. ನಾವು ಖರೀದಿಸಿದ ಮಾಲು ಕೂಡ ಮಾರಾಟವಾಗುತ್ತಿಲ್ಲ. ಲಾಕ್‌ಡೌನ್‌ನ್ನು ಇನ್ನಷ್ಟು ಸಡಿಲಿಕೆ ಮಾಡಿದರೆ ವ್ಯಾಪಾರಸ್ಥರು ಹಾಗೂ ಗ್ರಾಹಕರಿಗೆ ಅನುಕೂಲವಾದೀತು’ ಎನ್ನುತ್ತಾರೆ ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮುಹಮ್ಮದ್ ಮುಸ್ತಫಾ.

ಟ್ರಾಫಿಕ್ ಜಾಮ್: ಲಾಕ್‌ಡೌನ್ ಸಡಿಲಿಕೆಯಾದ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ವ್ಯಾಪಾರ ಜೋರಾಗಿತ್ತು. ದಿನಸಿ ಹೊತ್ತ ಲಾರಿಗಳು, ಕಾರು, ರಿಕ್ಷಾಗಳು ದೊಡ್ಡ ಸೌಂಡ್ ಮಾಡುತ್ತಾ ನಗರದಲ್ಲಿ ಧಾವಿಸುತ್ತಿದ್ದವು. ಬಂದರ್ ರಸ್ತೆಯಂತೂ ವಾಹನಗಳಿಂದ ತುಂಬಿಹೋಗಿತ್ತು. ಸ್ಟೇಟ್‌ಬ್ಯಾಂಕ್‌ನಿಂದ ಹಿಡಿದು ಬಂದರ್ ಠಾಣೆ ಮಾರ್ಗವಾಗಿ ಲೋವರ್ ಕಾರ್‌ಸ್ಟ್ರೀಟ್‌ವರೆಗೂ ವಾಹನಗಳು ಮುಂದೆ ಸಾಗಲು ಆಗದೇ ಏದುಸಿರು ಬಿಡುತ್ತಿದ್ದವು. ಇದರ ನಡುವೆ ಬೈಕ್ ಸವಾರರು ಇರುವ ಜಾಗದೊಳಗೆ ನುಸುಳುತ್ತಾ ಮುಂದೆ ಸಾಗುತ್ತಿದ್ದರು. ಬಂದರ್ ಠಾಣೆಯ ಸಮೀಪದ ಜಂಕ್ಷನ್‌ನಲ್ಲಿ ಟ್ರಾಫಿಕ್ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು.

''ಲಾಕ್‌ಡೌನ್ ಏನೋ ಸಡಿಲಿಕೆಯಾಗಿದೆ. ಆದರೆ ಜನತೆ ಹೊರಬರಲು ಹೆದರುವ ಪರಿಸ್ಥಿತಿ ತಲೆದೋರಿದೆ. ಅಗತ್ಯ ವಸ್ತುಗಳನ್ನು ಖರೀದಿಸುವುದು ಅನಿವಾರ್ಯವಾಗಿದ್ದರಿಂದ ಮಾರುಕಟ್ಟೆಗೆ ಬಂದಿದ್ದೇವೆ. ಬೆಳಗ್ಗಿನ ಸಮಯದಲ್ಲೇ ಹೆಚ್ಚು ಮಳೆ ಸುರಿಯುತ್ತದೆ. ಇಂತಹ ಸಂದರ್ಭದಲ್ಲಿ ಖರೀದಿ ಕಷ್ಟಸಾಧ್ಯ. ಮಧ್ಯಾಹ್ನದವರೆಗಿನ ಸಡಿಲಿಕೆಯನ್ನು ಇನ್ನಷ್ಟು ವಿಸ್ತರಿಸಬೇಕು. ಎಲ್ಲರೂ ಮಾಸ್ಕ್ ಧರಿಸಬೇಕು. ಅಂತರ ಕಾಯ್ದುಕೊಂಡರೆ ಒಳ್ಳೆಯದು''.
- ಉಷಾ ಗಣೇಶ್, ಗೃಹಿಣಿ, ಕಾರ್‌ಸ್ಟ್ರೀಟ್ 

''ಕೊರೋನದಿಂದ ಜಗತ್ತೇ ತತ್ತರಿಸಿದೆ. ಲಾಕ್‌ಡೌನ್ ನಂತರ ಅಗತ್ಯ ವಸ್ತು ಖರೀದಿಯೂ ಕಷ್ಟದಾಯಕ. ಮಧ್ಯಾಹ್ನದವರೆಗೆ ಸಡಿಲಿಕೆ ಮಾಡಿರುವುದು ನಿರಾಳತೆ ತಂದಿದೆ. ದೇವರ ಅನುಗ್ರಹದಿಂದ ಕೊರೋನ ತೊಲಗಿ, ಮೊದಲಿನ ದಿನಗಳು ಬರುವಂತಾಗಲಿ. ಜಿಲ್ಲೆಯಲ್ಲಿ ಬಸ್ ಸಂಚಾರವಿಲ್ಲ. ಜೊತೆಗೆ ಮಕ್ಕಳಿಗೆ ಶಾಲೆಯೂ ಇಲ್ಲ. ಇದರಿಂದ ಪೋಷಕರಿಗೆ ಬೇಸರ ತಂದಿದೆ. ಇದರಿಂದ ಜನತೆ ಗೊಂದಲಕ್ಕೀಡಾಗಿದ್ದಾರೆ''.

- ಹಿಲ್ಡಾ, ಗೃಹಿಣಿ

''ಸಾರಿಗೆ ವ್ಯವಸ್ಥೆ ಇಲ್ಲದೆಯೇ ಯಾವುದೇ ವ್ಯಾಪಾರ ಏಳಿಗೆ ಕಾಣುವುದಿಲ್ಲ. ಸಾರಿಗೆಯನ್ನು ಮುಕ್ತಗೊಳಿಸಿದಾಗ ಜನರ ಸಂಚಾರ ಹೆಚ್ಚುತ್ತದೆ. ಲಾಕ್‌ಡೌನ್‌ನ್ನು ಸಂಪೂರ್ಣ ತೆರವು ಮಾಡಬೇಕು. ಆಗ ವ್ಯಾಪಾರ ಎಂದಿನಂತೆ ಸಾಗಲಿದೆ''.

-ಮುಹಮ್ಮದ್ ಸಲೀಂ, ಮಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News