ಸಂತ ಜೋಸೆಫ್ ಕಾಲೇಜಿನಲ್ಲಿ ಎಐಸಿಟಿಇ ಐಡಿಯ ಲ್ಯಾಬ್ಸ್‌ಗೆ ಅನುಮೋದನೆ

Update: 2021-06-21 18:09 GMT

ಮಂಗಳೂರು, ಜೂ.21: ನಗರದ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು (ಎಸ್‌ಜೆಇಸಿ) ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (ಎಐಸಿಟಿಇ) ಪ್ರತಿಷ್ಠಿತ ಐಡಿಯ ಲ್ಯಾಬ್ಸ್ ಸ್ಥಾಪಿಸಲು ಅನುಮೋದನೆ ಪಡೆದಿದೆ.

ದೇಶದಲ್ಲಿ ಈ ಸಾಧನೆಗೈದ 49 ಸಂಸ್ಥೆಗಳಲ್ಲಿ ಜೋಸೆಫ್ ಕಾಲೇಜ್ ಕೂಡ ಒಂದಾಗಿದೆ. ಕರ್ನಾಟಕದ ಕೇವಲ ಐದು ಕಾಲೇಜುಗಳ ಸಾಲಿಗೆ ಸೇರಿದೆ. ಈ ಮೊದಲು ನ್ಯಾಷನಲ್ ಇನ್ನೋವೇಶನ್ ಮತ್ತು ಸ್ಟಾರ್ಟ್-ಅಪ್ ಪಾಲಿಸಿ (ಎನ್‌ಐಎಸ್‌ಪಿ) ಅನುಷ್ಠಾನಕ್ಕೆ ಅನುಮೋದನೆ ಪಡೆದ 255 ಸಂಸ್ಥೆಗಳಲ್ಲಿ ಗುರುತಿಸಲ್ಪಟ್ಟ ಮಹೋನ್ನತ ಸಾಧನೆಯನ್ನು ಸಹ ಕಾಲೇಜು ಮಾಡಿತ್ತು.

ಐಡಿಯಾ ಲ್ಯಾಬ್ ಎನ್ನುವುದು ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತಗಳ ಮೂಲಭೂತ ಅಂಶಗಳನ್ನು ಪ್ರಾಯೋಗಿಕ ಅನುಭವದ ಕಡೆಗೆ ಅನ್ವಯಿಸುವಂತೆ ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಇಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ, ಸಮಸ್ಯೆ ನಿವಾರಣೆ, ವಿನ್ಯಾಸ ಚಿಂತನೆ, ಸಹಯೋಗ, ಸಂವಹನ ಮತ್ತು ಆಜೀವ ಕಲಿಕೆಯ ಕೌಶಲ್ಯಗಳನ್ನು ಅಳವಡಿಸುವುದರ ಜೊತೆಗೆ ಹೆಚ್ಚು ಕಾಲ್ಪನಿಕ ಮತ್ತು ಸೃಜನಶೀಲರನ್ನಾಗಿ ಮಾಡುವ ಉದ್ದೇಶವನ್ನು ಹೊಂದಿರಲಿದೆ. ಈ ಲ್ಯಾಬ್ 5000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದ್ದು, ಸುಧಾರಿತ ಯಂತ್ರೋಪಕರಣಗಳು, ಉಪಕರಣಗಳು ಮತ್ತು ಕಾರ್ಯವಿಧಾನಗಳನ್ನು ಒಳಗೊಂಡಿದೆ.

ಈ ಯೋಜನೆಯ ಅವಧಿ ಎರಡು ವರ್ಷಗಳು ಆಗಿದ್ದು, ಐಡಿಯ ಲ್ಯಾಬ್ ಸ್ಥಾಪಿಸಲು ಒಟ್ಟು 1.10 ಕೋಟಿ ರೂ. ವೆಚ್ಚವಾಗಲಿದೆ. ಎಐಸಿಟಿಇಯು ಒಟ್ಟು ಯೋಜನಾ ವೆಚ್ಚದ ಸರಿಸುಮಾರು ಶೇ.40ನ್ನು ಒದಗಿಸಲಿದೆ. ಉಳಿದ ಶೇ.60ನ್ನು ಉದ್ಯಮ ಪಾಲುದಾರರ ಪ್ರಾಯೋಜಕತ್ವದೊಂದಿಗೆ ಕಾಲೇಜು ಭರಿಸಲಿದೆ. ಎರಡು ವರ್ಷಗಳ ಬಳಿಕ ಈ ಲ್ಯಾಬ್‌ನ್ನು ಉಳಿಸಿಕೊಳ್ಳಲು ಸಂಸ್ಥೆ ಇನ್ನೂ 40 ಲಕ್ಷ ರೂ. ಭರಿಸಬೇಕಿದೆ.

ಕಾಲೇಜಿನಲ್ಲಿ ಈಗಾಗಲೇ ರಾಜ್ಯ ಸರಕಾರದ ಉಪಕ್ರಮವಾದ ‘ನ್ಯೂ ಏಜ್ ಇನ್ನೋವೇಶನ್ ನೆಟ್‌ವರ್ಕ್’ (ಎನ್‌ಎಐಎನ್) ಕಾರ್ಯಕ್ರಮದಡಿ ಇನ್ನೋವೇಶನ್ ಕೇಂದ್ರವಿದೆ. ಈ ಇನ್ನೋವೇಶನ್ ಕೇಂದ್ರವು ಇದೇ ಯೋಜನೆಯಡಿ ಕಾರ್ಯಾಚರಣೆಯ ವೆಚ್ಚವಾಗಿ ವರ್ಷಕ್ಕೆ 10 ಲಕ್ಷ ರೂ.ಗಳ ಜೊತೆಗೆ 10 ಪ್ರಾಜೆಕ್ಟ್‌ಗಳಿಗೆ ಪ್ರತಿ ಪ್ರಾಜೆಕ್ಟ್‌ಗೆ ಮೂರು ಲಕ್ಷ ರೂ.ನ್ನು ವಾರ್ಷಿಕವಾಗಿ ಮೂರು ವರ್ಷಗಳ ಕಾಲ ಪಡೆಯಲಿದೆ.

ಸಂಸ್ಥೆಯು ಈಗಾಗಲೇ ಸುಸಜ್ಜಿತ ಟಿಂಕರಿಂಗ್ ಮತ್ತು ಇಂಜಿನಿಯರಿಂಗ್ ಎಕ್ಸ್‌ಪ್ಲೋರೇಶನ್ ಲ್ಯಾಬ್‌ಗಳನ್ನು ಸ್ಥಾಪಿಸಿದೆ. ಇದು ವಿದ್ಯಾರ್ಥಿಗಳಿಗೆ ಮೊದಲ ವರ್ಷದ ವ್ಯಾಸಂಗದಲ್ಲಿಯೇ ನೈಜ ಜೀವನದ ಅಪ್ಲಿಕೇಶನ್‌ಗಳನ್ನು ನಿರ್ಮಿಸಲು ಸಹಾಯ ಮಾಡುವ ಮೂಲಕ ತಾಂತ್ರಿಕ ಪರಿಕಲ್ಪನೆಗಳನ್ನು ಕಲಿಯುವಲ್ಲಿ ಅವರ ಆಸಕ್ತಿಯನ್ನು ಹೆಚ್ಚಿಸುತ್ತದೆ.

ಕ್ಯಾಂಪಸ್‌ನಲ್ಲಿ ಎಲ್ಲ ಸೌಕರ್ಯಗಳ ಉಪಸ್ಥಿತಿಯು ಆಲೋಚನೆಗಳನ್ನು ಪ್ರೂಫ್-ಆಫ್-ಕಾನ್ಸೆಪ್ಟ್‌ಗೆ ಪರಿವರ್ತಿಸಲು ಮತ್ತು ಅವುಗಳನ್ನು ವಾಣಿಜ್ಯ ಮೌಲ್ಯದೊಂದಿಗೆ ಉತ್ಪನ್ನದ ಮಟ್ಟಕ್ಕೆ ತರಲು ವಿದ್ಯಾರ್ಥಿಗಳಿಗೆ ಪೂರಕವಾದ ವ್ಯವಸ್ಥೆ ಒದಗಿಸುತ್ತದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News