ಕಾಶ್ಮೀರ ಕುರಿತಾದ ಪ್ರಧಾನಿ ನೇತೃತ್ವದ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಲು ಗುಪ್ಕರ್ ಒಕ್ಕೂಟ ನಿರ್ಧಾರ

Update: 2021-06-22 17:32 GMT

ಶ್ರೀನಗರ: ಜಮ್ಮು ಹಾಗೂ  ಕಾಶ್ಮೀರದ ಗುಪ್ಕರ್ ಒಕ್ಕೂಟವು ಹಿರಿಯ ರಾಜಕಾರಣಿ ಫಾರೂಕ್ ಅಬ್ದುಲ್ಲಾ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಗುರುವಾರ ನಡೆಯುವ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸುವುದಾಗಿ ಹೇಳಿದೆ.

ಕಾಶ್ಮೀರಕ್ಕೆ ಮತ್ತೆ ರಾಜ್ಯ ಸ್ಥಾನಮಾನ ನೀಡುವುದು ಹಾಗೂ   ಕೇಂದ್ರಾಡಳಿತಕ್ಕೆ ಸಂಬಂಧಿಸಿದ ಇತರ ಪ್ರಮುಖ ವಿಷಯಗಳ ಬಗ್ಗೆ ಕೇಂದ್ರ ಸರಕಾರವು ಚರ್ಚಿಸಬಹುದು ಎಂಬ ವರದಿಗಳ ಮಧ್ಯೆ ಪ್ರಧಾನಿ ಮೋದಿ ಅವರು ಸರ್ವಪಕ್ಷ ಸಭೆ ಕರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

2019 ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಬಳಿಕ ಉಂಟಾಗಿರುವ ರಾಜಕೀಯ ಬಿಕ್ಕಟ್ಟನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರ ಮೊದಲ ಪ್ರಮುಖ ಪ್ರಯತ್ನ ಇದಾಗಿದ ಎನ್ನಲಾಗಿದೆ.

ಪ್ರಧಾನಿ ಕರೆದಿರುವ ಸಭೆಯಲ್ಲಿ ಮೆಹಬೂಬಾ ಜೀ, ಎಂಡಿ ತಾರಿಗಾಮಿ ಸಾಹೀಬ್ ಭಾಗವಹಿಸುತ್ತಾರೆ. ನಮ್ಮ ಕಾರ್ಯಸೂಚಿಯನ್ನು ಪ್ರಧಾನಿ ಹಾಗೂ ಗೃಹ ಸಚಿವರ ಮುಂದೆ ಇಡಬೇಕೆಂದು  ನಾವು ಬಯಸುತ್ತೇವೆ ಎಂದು ಜಮ್ಮು-ಕಾಶ್ಮೀರದ ಪಕ್ಷಗಳ ಜೊತೆ ಸಭೆ ನಡೆಸಿದ ನಂತರ ಸುದ್ದಿಗಾರರಿಗೆ ಡಾ.ಅಬ್ದುಲ್ಲಾ ತಿಳಿಸಿದ್ದಾರೆ.

ಪ್ರಧಾನಿಯವರು ನಮ್ಮನ್ನು ಸರ್ವಪಕ್ಷ ಸಭೆಗೆ ಆಹ್ವಾನಿಸಿದ್ದಾರೆ ಮತ್ತು ನಾವು ಸಭೆಯಲ್ಲಿ ಭಾಗವಹಿಸಲಿದ್ದೇವೆ. ಪ್ರಧಾನಿ ಮತ್ತು ಗೃಹಸಚಿವರ ಮುಂದೆ ನಾವು ನಮ್ಮ ಬೇಡಿಕೆಗಳನ್ನು ಮಂಡಿಸಲಿದ್ದೇವೆ. ಸ್ವಾತಂತ್ರಾನಂತರ ಸಂವಿಧಾನದ 370ನೇ ವಿಧಿಯಲ್ಲಿನ ಕೆಲವು ನಿಬಂಧನೆಗಳು ಮತ್ತು ಷರತ್ತುಗಳ ಮೇಲೆ ಜಮ್ಮು-ಕಾಶ್ಮೀರವು ಭಾರತ ಒಕ್ಕೂಟದಲ್ಲಿ ವಿಲೀನಗೊಂಡಿತ್ತು. 370ನೇ ವಿಧಿಯಡಿ ವಿಶೇಷ ಸ್ಥಾನಮಾನವು ನಮಗೆ ಸಾಂವಿಧಾನಿಕ ಸುರಕ್ಷತೆಯನ್ನು ಒದಗಿಸಿತ್ತು ಮತ್ತು ಅವರು ಜಮ್ಮು-ಕಾಶ್ಮೀರದ ಜನತೆಯೊಂದಿಗೆ ಸಮಾಲೋಚಿಸದೆ ಅದನ್ನು ನಮ್ಮಿಂದ ಕಿತ್ತುಕೊಂಡಿದ್ದಾರೆ. ಇದು ಕಾನೂನು ಬಾಹಿರ ಮತ್ತು ಅಸಾಂವಿಧಾನಿಕವಾಗಿದೆ.

-ಫಾರೂಕ್ ಅಬ್ದುಲ್ಲಾ ಮಾಜಿ ಕೇಂದ್ರ ಸಚಿವ ಹಾಗೂ ಎನ್ಸಿ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News