ಜಾತಿ ಪ್ರಮಾಣಪತ್ರ ರದ್ಧತಿ: ಹೈಕೋರ್ಟ್ ಆದೇಶ ತಡೆಹಿಡಿದ ಸುಪ್ರೀಂಕೋರ್ಟ್,ಸಂಸದೆ ನವನೀತ್ ರಾಣಾ ನಿರಾಳ

Update: 2021-06-22 10:05 GMT

ಹೊಸದಿಲ್ಲಿ: ಮಹಾರಾಷ್ಟ್ರದ ಅಮರಾವತಿಯಿಂದ  ಮೊದಲ ಬಾರಿಗೆ ಸಂಸದೆಯಾಗಿ ಆಯ್ಕೆಯಾಗಿರುವ ನವನೀತ್ ಕೌರ್ ರಾಣಾ ಅವರ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ರದ್ದುಗೊಳಿಸುವ ಬಾಂಬೆ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ. ಈ ಮೂಲಕ  ಸಂಸದೆ ನವನೀತ್ ರಾಣಾ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.

ಕಪೋಲಕಲ್ಪಿತ ದಾಖಲೆಗಳನ್ನು ಬಳಸಿ ಜಾತಿ ಪ್ರಮಾಣ ಪತ್ರವನ್ನು ಪಡೆಯಲಾಗಿದೆ ಎಂದು ಹೇಳಿದ್ದ ಬಾಂಬೆ ಹೈಕೋರ್ಟ್ ನವನೀತ್ ಅವರ  ಜಾತಿ ಪ್ರಮಾಣಪತ್ರವನ್ನು ರದ್ದುಗೊಳಿಸಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಣಾ ಸುಪ್ರೀಂಕೋರ್ಟ್  ಮೆಟ್ಟಿಲೇರಿದ್ದರು.

ಒಂದು ವೇಳೆ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ತಡೆಹಿಡಿಯದೇ ಇರುತ್ತಿದ್ದರೆ ನವನೀತ್ ಕೌರ್ ರಾಣಾ ತಮ್ಮ ಲೋಕಸಭಾ ಸ್ಥಾನವನ್ನು ಕಳೆದುಕೊಳ್ಳುತ್ತಿದ್ದರು.

ನವನೀತ್ ರಾಣಾ ಅವರು ಪರಿಶಿಷ್ಟ ಜಾತಿಗಳಿಗೆ ಮೀಸಲಾಗಿರುವ ಅಮರಾವತಿ ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಶರದ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ ಸಿಪಿ) ಬೆಂಬಲದೊಂದಿಗೆ ಗೆಲುವು ಸಾಧಿಸಿದ್ದರು.

ಜೂನ್ 8 ರಂದು ನೀಡಿದ್ದ ತೀರ್ಪಿನಲ್ಲಿ ಬಾಂಬೆ ಹೈಕೋರ್ಟ್  2 ಲಕ್ಷ ರೂ. ವೆಚ್ಚ ಭರಿಸುವಂತೆ ರಾಣಾಗೆ ಸೂಚಿಸಿತ್ತು. ಈ ಮೊತ್ತವನ್ನು ನವನೀತ್ ರಾಣಾ ಮಹಾರಾಷ್ಟ್ರ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಎರಡು ವಾರಗಳ ಅವಧಿಯಲ್ಲಿ ಪಾವತಿಸಬೇಕಾಗಿದೆ.

ಆಗಸ್ಟ್ 2013 ರಲ್ಲಿ ನವನೀತ್ ರಾಣಾ ಅವರಿಗೆ ನೀಡಲಾಗಿರುವ  ಜಾತಿ ಪ್ರಮಾಣಪತ್ರವನ್ನು ರದ್ದುಗೊಳಿಸುವಂತೆ ಕೋರಿ ಸಮಾಜ ಸೇವಕ ಆನಂದರಾವ್ ಆಡ್ಸುಲ್ ಅವರು ಅರ್ಜಿ ಸಲ್ಲಿಸಿದ ನಂತರ ಈ ವಿಷಯ ಹೈಕೋರ್ಟ್‌ಗೆ ತಲುಪಿತ್ತು.

ಮಹಾರಾಷ್ಟ್ರ ವಿಧಾನಸಭೆಯ ಸದಸ್ಯರಾಗಿರುವ ಪತಿ ರವಿ ರಾಣಾ ಅವರ ಪ್ರಭಾವದಿಂದ ನವನೀತ್ ರಾಣಾ ಜಾತಿ ಪ್ರಮಾಣಪತ್ರವನ್ನು ಪಡೆದಿದ್ದಾರೆ ಎಂದು ಅರ್ಜಿದಾರರು ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News