ದೋಹಾದಲ್ಲಿ ತಾಲಿಬಾನ್ ನಾಯಕರನ್ನು ಭೇಟಿಯಾದ ಭಾರತದ ನಿಯೋಗ: ವರದಿ

Update: 2021-06-22 11:58 GMT

ಹೊಸದಿಲ್ಲಿ: ದೋಹಾದಲ್ಲಿರುವ ತಾಲಿಬಾನ್ ರಾಜಕೀಯ ನಾಯಕರ ಜತೆಗೆ ಮಾತನಾಡಲೆಂದು ಭಾರತೀಯ ಅಧಿಕಾರಿಗಳು ಸದ್ದಿಲ್ಲದೆ ದೋಹಾಗೆ ಭೇಟಿ ನೀಡಿದ್ದರೆಂಬ ಮಾಹಿತಿಯನ್ನು ಹಿರಿಯ ಕತಾರ್ ಅಧಿಕಾರಿಯೊಬ್ಬರು ಬಹಿರಂಗ ಪಡಿಸಿದ್ದಾರೆ. ಭಾರತವು ತಾಲಿಬಾನ್ ಜತೆಗೆ ನೇರ ಮಾತುಕತೆ ನಡೆಸುತ್ತಿದೆ ಎಂಬ ಇತ್ತೀಚಿಗಿನ ವರದಿಗಳು ಇದೀಗ ದೃಢವಾದಂತಾಗಿದೆ ಎಂದು thehindu.com ವರದಿ ಮಾಡಿದೆ.

ವೆಬ್ ಸಮ್ಮೇಳನವೊಂದರ ವೇಳೆ ಮೇಲಿನ ಮಾಹಿತಿಯನ್ನು ಉಗ್ರ ನಿಗ್ರಹ  ಹಾಗೂ ಸಂಘರ್ಷ ಪರಿಹಾರಕ್ಕಾಗಿನ ಕತಾರ್ ನ ವಿಶೇಷ ರಾಯಭಾರಿ ಮುತ್ಲಖ್ ಬಿನ್ ಮಜೀದ್ ಅಲ್ ಖಹ್ತಾನಿ  ನೀಡಿದ್ದಾರೆ.

ಕಳೆದೆರಡು ವಾರಗಳ ಅವಧಿಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಕತಾರ್ ನಾಯಕರ ಜತೆ ಮಾತನಾಡಲೆಂದು ದೋಹಾಗೆ ಎರಡು ಬಾರಿ ಭೇಟಿ ನೀಡಿದ ನಂತರದ ಬೆಳವಣಿಗೆ ಇದಾಗಿದೆ. ಆದರೆ ಖಹ್ತಾನಿ ಅವರ ಹೇಳಿಕೆ ಕುರಿತಂತೆ ಭಾರತದ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿಲ್ಲ ಎಂದು ವರದಿ ತಿಳಿಸಿದೆ.

ಆದರೆ ಈ ಕುರಿತು ಮಾಹಿತಿ ನೀಡಿದ ಖಹ್ತಾನಿ, ಅಫ್ಗಾನಿಸ್ತಾನದ ಭವಿಷ್ಯದಲ್ಲಿ ತಾಲಿಬಾನ್ ಪ್ರಮುಖ ಪಾತ್ರ ವಹಿಸಬಹುದೆಂಬ ನಿರೀಕ್ಷೆಯಿಂದ ಈ ಸಭೆ ನಡೆದಿದೆ ಎಂದಿದ್ದಾರೆ.

ದೋಹಾದಲ್ಲಿ ತಾಲಿಬಾನ್ ನ ಮುಖ್ಯ ಕಾರ್ಯಾಲಯ ಕತಾರ್ ಸರಕಾರದ ಆಶ್ರಯದಲ್ಲಿ 2013ರಿಂದೀಚೆಗೆ ಕಾರ್ಯಾಚರಿಸುತ್ತಿದೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ನಡೆದಿದ್ದ  ಅಫ್ಗಾನ್-ತಾಲಿಬಾನ್ ಮಾತುಕತೆಗಳ ಕುರಿತಾದ ಕಾರ್ಯಕ್ರಮವನ್ನು ಕತಾರ್ ಸರಕಾರ ಸಂಘಟಿಸಿತ್ತು ಹಾಗೂ ಇದರ ಉದ್ಘಾಟನಾ ಸಮಾರಂಭದಲ್ಲಿ ಜೈಶಂಕರ್ ಕೂಡ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News