ಬ್ಯಾಂಕಿನ ಗೋಡೆಗೆ ರಂಧ್ರ ಕೊರೆದು 55 ಲಕ್ಷ ರೂ. ದರೋಡೆ

Update: 2021-06-22 17:24 GMT

ಹೊಸದಿಲ್ಲಿ: ಪೂರ್ವ ದಿಲ್ಲಿಯ ಫಾರ್ಶ್ ಬಝಾರ್ ಪ್ರದೇಶದ ಪಕ್ಕದ ನಿರ್ಮಾಣ ಹಂತದಲ್ಲಿರುವ ಕಟ್ಟಡದಿಂದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ ನುಗ್ಗಿ 55 ಲಕ್ಷ ರೂ. ಕಳ್ಳತನ ಮಾಡಲಾಗಿದ್ದು, ಈ ಕೃತ್ಯಕ್ಕೆ ಸಂಬಂಧಿಸಿ 34 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಆರೋಪಿಗಳ ಬಗ್ಗೆ ತಿಳಿಯದೆ ಬ್ಯಾಂಕ್ ಅಧಿಕಾರಿಗಳು ಈಹಿಂದೆ ತಮ್ಮ ಆವರಣ ದೊಳಗಿನ ಗೋಡೆಯ ರಂಧ್ರವನ್ನು ಸರಿಪಡಿಸುವ ಕೆಲಸವನ್ನು ಅವನಿಗೇ ವಹಿಸಿಕೊಟ್ಟಿದ್ದರು.

ತನ್ನ ಗುರುತನ್ನು ಮರೆ ಮಾಡಲು ಕಳ್ಳತನದ ಸಮಯದಲ್ಲಿ ಆರೋಪಿ ಹೆಲ್ಮೆಟ್ ಧರಿಸಿದ್ದ ಎಂದು ಅವರು ಹೇಳಿದ್ದಾರೆ.

ಕದ್ದ ಹಣದಲ್ಲಿ ಸ್ವಲ್ಪ ಹಣವನ್ನು ಪಡೆದ ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರು ಆರೋಪಿಗಳನ್ನು ವಿಶ್ವಾಸ್  ನಗರದ ನಿವಾಸಿಗಳಾದ ಹರಿರಾಮ್ ಹಾಗೂ ಕಾಲಿಚರಣ್  ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದರು.

ಸೋಮವಾರ ಬೆಳಗ್ಗೆ 10:15ರ ಸುಮಾರಿಗೆ ವಿಶ್ವಾಸ್ ನಗರ ಪ್ರದೇಶದ ಬ್ಯಾಂಕಿನಲ್ಲಿ ನಡೆದ ಕಳ್ಳತನದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಸ್ಥಳ ಪರಿಶೀಲನೆ ನಡೆಸಿದ ಪೊಲೀಸರಿಗೆ ಪಕ್ಕದ ನಿರ್ಮಾಣ ಹಂತದಲ್ಲಿರುವ ಕಟ್ಟಡದಿಂದ ಬ್ಯಾಂಕಿನ ಸರ್ವರ್ ಕೋಣೆಯ ಗೋಡೆಯಲ್ಲಿ ರಂಧ್ರವನ್ನು ಮಾಡಲಾಗಿದೆ ಎಂದು ತಿಳಿದುಬಂದಿದೆ. ನೆಲ ಮಾಳಿಗೆಯಲ್ಲಿ ಸ್ಟ್ರಾಂಗ್ ರೂಮ್ ಗೋಡೆಯಲ್ಲಿ ಮತ್ತೊಂದು ರಂಧ್ರ ಕೊರೆದು 55,03,330 ರೂ. ಹಣವನ್ನು ಕಳವು ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News