×
Ad

ದೇಶಾದ್ಯಂತ ಸೋಮವಾರ ವ್ಯಾಕ್ಸಿನೇಶನ್ ದಾಖಲೆ, ಮಂಗಳವಾರ ದಿಢೀರ್ ಕುಸಿತ

Update: 2021-06-23 11:31 IST

 ಹೊಸದಿಲ್ಲಿ: ದೇಶಾದ್ಯಂತ ಸೋಮವಾರ ದಾಖಲೆಯ 88 ಲಕ್ಷ ಜನರಿಗೆ  ಲಸಿಕೆ ನೀಡಿ ದಾಖಲೆ ನಿರ್ಮಿಸಲಾಗಿದ್ದು, ಮಂಗಳವಾರ  ಲಸಿಕೆ ನೀಡಿಕೆಯ ಸಂಖ್ಯೆ  54.22 ಲಕ್ಷಕ್ಕೆ ಇಳಿದಿದೆ. ಲಸಿಕೆ ನೀಡಿಕೆ ಅಂಕಿ-ಅಂಶಗಳ ವ್ಯತ್ಯಾಸವು ಇಂತಹ ದೊಡ್ಡ ಪ್ರಮಾಣದ ವ್ಯಾಕ್ಸಿನೇಷನ್ ಸುಸ್ಥಿರವಾಗಿದೆಯೇ ,ಇಲ್ಲವೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

 ಲಸಿಕೆ ಪೂರೈಕೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಮಧ್ಯಪ್ರದೇಶ ಸೇರಿದಂತೆ ಕೆಲವು ರಾಜ್ಯಗಳು' ಮ್ಯಾಜಿಕ್ ಮಂಡೇ’ ಅನ್ನು ಸಾಧಿಸುವ ಉದ್ದೇಶದಿಂದ ಲಸಿಕೆ ಪ್ರಮಾಣವನ್ನು ದಿನಗಳವರೆಗೆ ಸಂಗ್ರಹಿಸಿವೆ ಎಂಬ ಆರೋಪಗಳಿವೆ. ಲಸಿಕೆ ನೀಡಿಕೆಯಲ್ಲಿ ಮುಂಚೂಣಿಯಲ್ಲಿರುವ ಅಗ್ರ 10 ರಾಜ್ಯಗಳಲ್ಲಿ ಬಿಜೆಪಿ ಆಡಳಿತದ ಏಳು ರಾಜ್ಯಗಳಿವೆ.

ಈ ವರ್ಷದ ಅಂತ್ಯದ ವೇಳೆಗೆ ಎಲ್ಲಾ ವಯಸ್ಕರಿಗೆ ಸಂಪೂರ್ಣವಾಗಿ ಲಸಿಕೆ ನೀಡುವ ಕೇಂದ್ರ ಸರಕಾರದ ಗುರಿಯನ್ನು ಪೂರೈಸಲು, ದಿನಕ್ಕೆ 97 ಲಕ್ಷ ವ್ಯಾಕ್ಸಿನೇಷನ್ ನಡೆಸಬೇಕಾಗಿದೆ. ಪ್ರಸ್ತುತ ಪೂರೈಕೆ ಪರಿಸ್ಥಿತಿಯು ಗುರಿಯನ್ನು ಪೂರೈಸುತ್ತದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ದೈನಂದಿನ ಅಗತ್ಯವಿರುವ ಲಸಿಕೆಗಳನ್ನು ಸಂಗ್ರಹಿಸುವ ಮತ್ತು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಸರಕಾರ ಹೇಳಿಕೊಂಡಿದೆ.

"ಸರಕಾರವು ಪ್ರತಿದಿನ 1 ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ಹೊಂದಿದೆ ಹಾಗೂ  ಪ್ರತಿದಿನ 1.25 ಕೋಟಿ ಡೋಸ್‌ಗಳನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ" ಎಂದು ಎನ್‌ಟಿಎಜಿಐ (ರೋಗನಿರೋಧಕ ಕುರಿತ ರಾಷ್ಟ್ರೀಯ ಸಲಹಾ ಗುಂಪು) ಅಧ್ಯಕ್ಷ ಡಾ.ಎನ್.ಕೆ.ಅರೋರಾ ಹೇಳಿದರು.

"ಲಸಿಕೆಯ ವಿಷಯದಲ್ಲಿ ಕೇಂದ್ರವು ರಾಜ್ಯಗಳೊಂದಿಗೆ ಸಂಪೂರ್ಣ ಸಹಕಾರ ನೀಡುತ್ತಿದೆ. ನಾವು ರಾಜ್ಯಗಳಿಗೆ ಮುನ್ನೋಟವನ್ನು ನೀಡುತ್ತೇವೆ. ಮುಂದಿನ 15 ದಿನಗಳಲ್ಲಿ ನೀವು ಎಷ್ಟು ಡೋಸ್ ಗಳನ್ನು ಪಡೆಯುತ್ತೀರಿ ಎಂದು ನಾವು ಅವರಿಗೆ ಹೇಳುತ್ತೇವೆ. ಆದ್ದರಿಂದ ರಾಜ್ಯಗಳು ಉತ್ತಮವಾಗಿ ಯೋಜನೆ ರೂಪಿಸಬಹುದು" ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್  ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News