ಅಲೋಪತಿ ಕುರಿತು ಟೀಕೆ:ಪೊಲೀಸ್ ಪ್ರಕರಣಗಳನ್ನು ರದ್ದುಪಡಿಸಲು ಸುಪ್ರೀಂ ಕೋರ್ಟ್ ಗೆ ರಾಮ್ ದೇವ್ ಮೊರೆ

Update: 2021-06-23 09:50 GMT

ಹೊಸದಿಲ್ಲಿ: ಅಲೋಪತಿ ಔಷಧದ ಬಗ್ಗೆ ತನ್ನ ಹೇಳಿಕೆಗಳಿಂದ ದೇಶಾದ್ಯಂತ ವೈದ್ಯರನ್ನು ಕೆರಳಿಸಿದ್ದ ಯೋಗ ಶಿಕ್ಷಕ ರಾಮದೇವ್  ಈ ವಿಷಯದ ಬಗ್ಗೆ ತಮ್ಮ ವಿರುದ್ಧ ದಾಖಲಾಗಿರುವ  ಪೊಲೀಸ್ ಪ್ರಕರಣಗಳನ್ನು ರದ್ದುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿದ್ದಾರೆ. ದೇಶಾದ್ಯಂತ ಸಲ್ಲಿಸಲಾದ ಎಫ್ ಐಆರ್ ಗಳನ್ನು ಒಟ್ಟಿಗೆ ಸೇರಿಸಿ ದಿಲ್ಲಿ ಗೆ ವರ್ಗಾಯಿಸಬೇಕು ಎಂದು ಅವರು ವಿನಂತಿಸಿದ್ದಾರೆ.

ಕಳೆದ ತಿಂಗಳು ಕೋವಿಡ್‌ನ ಎರಡನೇ ಅಲೆಯು ದೇಶಾದ್ಯಂತ ಸಾವಿರಾರು ಜನರನ್ನು ಬಲಿ ಪಡೆದಾಗ, ರಾಮ್‌ದೇವ್ ವೈರಸ್ ವಿರುದ್ಧ ಅಲೋಪತಿ ಔಷಧಿಗಳ ಪರಿಣಾಮಕಾರಿತ್ವದ ಕುರಿತು ನೀಡಿದ್ದ ಹೇಳಿಕೆ ವಿವಾದವನ್ನು ಹುಟ್ಟುಹಾಕಿತ್ತು.

ವ್ಯಾಪಕವಾಗಿ ಹಂಚಲ್ಪಟ್ಟ ವೀಡಿಯೊವೊಂದರಲ್ಲಿ, "ಅಲೋಪತಿ ಔಷಧಿಗಳಿಂದಾಗಿ ಲಕ್ಷಾಂತರ ಜನರು ಸಾವನ್ನಪ್ಪಿದ್ದಾರೆ. ಚಿಕಿತ್ಸೆ ಅಥವಾ ಆಮ್ಲಜನಕವನ್ನು ಪಡೆಯದ ಸಾವನ್ನಪ್ಪಿದವರಿಗಿಂತ ಹೆಚ್ಚು ಜನರು ಅಲೋಪತಿ ಔಷಧದಿಂದ ಮೃತಪಟ್ಟಿದ್ದರು ಎಂದು ರಾಮ್ ದೇವ್ ಟೀಕಿಸಿದ್ದರು.

ಭಾರತೀಯ ವೈದ್ಯಕೀಯ ಸಂಘದ ವಿವಿಧ ಘಟಕಗಳು ರಾಮ್ ದೇವ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಅದರ ಆಧಾರದ ಮೇಲೆ ಅನೇಕ ಪ್ರಕರಣಗಳು ದಾಖಲಾಗಿವೆ. ಈ ಹೇಳಿಕೆಗೆ 15 ದಿನಗಳಲ್ಲಿ ಕ್ಷಮೆಯಾಚಿಸುವಂತೆ ವೈದ್ಯರ ಸಂಘವು ರಾಮ್ ದೇವ್ ಗೆ ನೋಟಿಸ್ ಕಳುಹಿಸಿದೆ. ಇದರಲ್ಲಿ ವಿಫಲವಾದರೆ, ಮಾನನಷ್ಟಕ್ಕಾಗಿ  1,000 ಕೋಟಿ ರೂ.ಪರಿಹಾರವನ್ನು ಕೋರಲಾಗುವುದು ಎಂದು ದೇಶದ ಉನ್ನತ ವೈದ್ಯರ ಸಂಸ್ಥೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News