ಸೋಂಕಿತ ಮಕ್ಕಳಿಂದ ಮನೆಯವರಿಗೆ ತೊಂದರೆಯಿದೆ ಎಂದು ಭೂಲೋಕದ ಯಾವ ವರದಿ ಹೇಳಿದೆ ?

Update: 2021-06-23 16:51 GMT
-ಡಾ.ಶ್ರೀನಿವಾಸ ಕಕ್ಕಿಲ್ಲಾಯ

ಬಹುಮಾನ್ಯರಾದ ದೇವಿಪ್ರಸಾದ್ ಶೆಟ್ಟಿಯವರು ಅಥವಾ ಬೇರೆ ಇನ್ನಾರಾದರೂ ಕೊರೋನ ಮಹಾತಜ್ಞರು ದಯಮಾಡಿ ಈ ಪ್ರಶ್ನೆಗಳಿಗೆ ಉತ್ತರಿಸಿ ಸ್ವಾಮಿ.

ನೀವೆಲ್ಲ ಮಹಾತಜ್ಞರು ಸಲ್ಲಿಸಿರುವ ಮೂರನೇ ಅಲೆಯ ಬಗೆಗಿನ ವರದಿಯನ್ನು ಓದುವ ಮಹಾಭಾಗ್ಯ ಇಂದು ದೊರೆಯಿತು, ಆದರೆ ಅದರೊಳಗಿನ ಲೆಕ್ಕಾಚಾರ, ಎಂದಿನಂತೆ, ಅರ್ಥವಾಗಲೇ ಇಲ್ಲ. ಹಾಗಾಗಿ ಈ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ.

ನಿಮ್ಮ ವರದಿಯ ಪುಟ 30ರಲ್ಲಿ ಒಂದು ಸುಂದರವಾದ ಕೋಷ್ಟಕವನ್ನು ನೀಡಿದ್ದೀರಿ. ಅದರಲ್ಲಿ ರಾಜ್ಯದ ಜನಸಂಖ್ಯೆ 70,259,592, ಅದರಲ್ಲಿ 20ಕ್ಕೆ ಕೆಳಗಿನ ಮಕ್ಕಳ ಸಂಖ್ಯೆ 23,838,995 ಅಂದರೆ 34% ಎಂದು ಹೇಳಿದ್ದೀರಿ. ಅಲ್ಲೇ ಕೆಳಗೆ ರಾಜ್ಯದಲ್ಲಿ ಎರಡನೇ ಅಲೆಯಲ್ಲಿ ದಿನದ ಅತ್ಯಧಿಕ ಪ್ರಕರಣಗಳು 50,717 ಎಂದು ಹೇಳಿದ್ದೀರಿ, ಕಳೆದ ವರ್ಷ ಮಾಡಿದ್ದ ಸಿರೋ ಸರ್ವೇ ಆಧಾರದಲ್ಲಿ ಪ್ರಕರಣಗಳ ಒಟ್ಟು ಪ್ರಮಾಣ 1:30 ಎಂದು (ಅದಕ್ಕೆ ಆ ಅಧ್ಯಯನದ ಕೊಂಡಿಯಾಗಿ ಸಂಖ್ಯೆ 3ನ್ನು ನಮೂದಿಸಿದ್ದೀರಿ) ಹೇಳಿ, ಅಲ್ಲೇ ಆ ಪ್ರಮಾಣ 20 ಎಂದು ಬರೆದಿದ್ದೀರಿ, ಅದರ ಕೆಳಗೆ ಎರಡನೇ ಅಲೆಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಪ್ರಕರಣಗಳ ಸಂಖ್ಯೆ ಎಂದು 1,521,510 ಎಂಬ ಸಂಖ್ಯೆ ಬರೆದಿದ್ದೀರಿ, ಇದು ಹೇಗೆ ಯಾವುದರ 20 ಪಟ್ಟು ಆಗುತ್ತದೆ ಎಂದು ಎಷ್ಟು ತಲೆ ಕೆರೆದುಕೊಂಡರೂ ಹೊಳೆಯದೆ, ಸ್ವಲ್ಪ ಏನೇನೋ ಒತ್ತಿ ನೋಡಿದಾಗ ದಿನದ ಅತ್ಯಧಿಕ ಪ್ರಕರಣ ಎಂದು ಅಲ್ಲೇ ಮೇಲೆ ಹೇಳಿದ್ದನ್ನು 30ರಿಂದ ಗುಣಿಸಿದರೆ ಈ 1,521,510 ದೊರೆಯುತ್ತದೆ ಎಂದು ಕಂಡು ಬಂದು, ಹಾಗಾದರೆ 20 ರ ಬದಲಿಗೆ 1:30ರ ಲೆಕ್ಕವನ್ನು ತೆಗೆದುಕೊಂಡಿರಬಹುದು ಎಂದು ಊಹಿಸಿಕೊಳ್ಳುವಂತಾಯಿತು. ಏನೇ ಇರಲಿ, ಇವೆಲ್ಲದರ ಕೆಳಗೆ, ಎರಡನೇ ಅಲೆಯ ಆಧಾರದಲ್ಲಿ ಮೂರನೇ ಅಲೆಯು ಉತ್ತುಂಗಕ್ಕೇರಿದಾಗ 2.2% ಜನರು ಸೋಂಕಿತರಾಗಲಿದ್ದಾರೆ ಎಂದು ಬರೆದಿದ್ದೀರಿ.

ಅದು ಹೇಗೆ ಸ್ವಾಮಿ? ಸ್ವಲ್ಪ ನಮಗೆ ಲೆಕ್ಕ ಕಲಿಸಿಕೊಡುವಿರಾ?

ನೀವು ಈ ಮೇಲಿನ ಲೆಕ್ಕದಲ್ಲಿ ಉದ್ದರಿಸಿದ ಆ ನಂ 3ನೇ ಅಧ್ಯಯನವು ಇಲ್ಲಿದೆ ಎಂದು ನೀವೇ ತೋರಿಸಿದ್ದೀರಿ: https://www.medrxiv.org/content/10.1101/2020.12.04.20243949v1.full. ಇದು ರಾಜ್ಯದ ಮಹಾ ತಜ್ಞರ ಸಮಿತಿಯ ಎಲ್ಲರ ಹೆಸರನ್ನೂ ಹೊತ್ತಿರುವ ವರದಿಯಾದ್ದರಿಂದ ಮತ್ತು ನೀವು ಕೂಡ ಅದನ್ನೇ ಉದ್ಧರಿಸಿರುವುದರಿಂದ ಅದನ್ನು ನೀವೆಲ್ಲರೂ ಒಪ್ಪಿಕೊಂಡಿದ್ದೀರೆಂದು ತಿಳಿಯಬಹುದಲ್ಲವೇ?

ಈ ವರದಿಯಲ್ಲಿ ಹೀಗೆ ಹೇಳಲಾಗಿದೆ ಸ್ವಾಮಿ:

The overall adjusted prevalence of COVID-19 in Karnataka was 27.3%, including IgG 16.4% and active infection 12.7%. The case-to-infection ratio was 1:40, and the infection fatality rate was 0 ·05%. ಅಂದರೆ ಸೆಪ್ಟೆಂಬರ್ 2020ರ ವೇಳೆಗೆ ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಪ್ರಮಾಣವು 27.3% ಇತ್ತು (16.4% ಐಜಿ ಜಿ ಪ್ರತಿಕಾಯಗಳಿದ್ದವರು, 12.7% ಸಕ್ರಿಯ ಪ್ರಕರಣಗಳು ಸೇರಿ), ಪ್ರತೀ ಪ್ರಕರಣಕ್ಕೆ ಸೋಂಕಿತರ ಒಟ್ಟು ಸಂಖ್ಯೆಯು 1:40 ಇತ್ತು, ಮತ್ತು ಸಾವಿನ ಪ್ರಮಾಣವು 0.05% ಇತ್ತು. 

ಹಾಗಾದರೆ, ಈ ವರದಿಯನುಸಾರ, ಎಪ್ರಿಲ್ 1, 2021ರ ವೇಳೆಗೆ ಮೊದಲ ಅಲೆ ಮುಗಿದು ಎರಡನೇ ಅಲೆ ಆರಂಭವಾಗುವ ಹೊತ್ತಿಗೆ, ರಾಜ್ಯದಲ್ಲಿ 10,01,238 ಪ್ರಕರಣಗಳಿದ್ದಾಗ ಒಟ್ಟು ಸೋಂಕಿತರ ಸಂಖ್ಯೆಯು ಅದರ 40 ಪಟ್ಟು, ಅಂದರೆ 4,00,49,520 ಆಗಿದ್ದಿರಬೇಕಲ್ಲವೇ? ಅಕ್ಟೋಬರ್‌ನಲ್ಲೇ ಮಾನ್ಯ ಆರೋಗ್ಯ ಸಚಿವರು ಕೂಡ ಇದೇ ವರದಿಯ ಆಧಾರದಲ್ಲಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯು 1.93 ಕೋಟಿಯಷ್ಟಿದೆ ಎಂದು ಹೇಳಿದ್ದರಲ್ಲ? ಇರಲಿ, ನೀವೇ ಕೊಟ್ಟಿರುವ ನಿಮ್ಮದೇ ತಜ್ಞರ ಲೆಕ್ಕಾಚಾರದಂತೆ ಎಪ್ರಿಲ್ ವೇಳೆಗೆ ಸೋಂಕಿತರ ಸಂಖ್ಯೆಯು 4 ಕೋಟಿ ಆಗುತ್ತದೆ. ರಾಜ್ಯದ 7 ಕೋಟಿಯಲ್ಲಿ ಇನ್ನುಳಿದಿದ್ದವರು 3 ಕೋಟಿ, ಅಲ್ಲವೇ?

ಈಗ ಎರಡನೇ ಅಲೆಯು ಮುಗಿಯುತ್ತಾ ಬಂದಿರುವಾಗ ಒಟ್ಟು ಪ್ರಕರಣಗಳು 28,15,029 ಆಗಿವೆ. ಅಂದರೆ 1 ಎಪ್ರಿಲ್‌ನಿಂದ ಜೂನ್ 22ರವರೆಗೆ 18,13,791 ಪ್ರಕರಣಗಳು ದಾಖಲಾಗಿವೆ. ಇದನ್ನು 40ರಿಂದ ಗುಣಿಸಿದರೆ (ನಿಮ್ಮ ವರದಿ ನಂ 3ರನುಸಾರವೇ) 7,25,51,640 ಅಂದರೆ 7 ಕೋಟಿಗೂ ಹೆಚ್ಚಾಗುತ್ತದೆ, ರಾಜ್ಯದ ಜನಸಂಖ್ಯೆಯನ್ನೇ ಮೀರುತ್ತದೆ! ಅದು ಬೇಡ, ನೀವೇ ಪುಟ 30ರಲ್ಲಿ ಕೊಟ್ಟ 1:30 ಎಂದು ಗುಣಿಸಿದರೆ 5,44,13,730 ಅಗುತ್ತದೆ, ಆದರೆ 4,00,49,520 ಎಪ್ರಿಲ್ ವೇಳೆಗಾಗಲೇ ಸೋಂಕಿತರಾಗಿ, ಬಾಕಿ ಉಳಿದವರು 3 ಕೋಟಿ ಮಾತ್ರ ಇರುವುದರಿಂದ ಈ 5 ಕೋಟಿ ಎಲ್ಲಿನವರು? ಹೋಗಲಿ ಬಿಡಿ, ನೀವೇ ಕೊಟ್ಟ ಇನ್ನೊಂದು ಸಂಖ್ಯೆ ಆ 20ರಿಂದ ಗುಣಿಸಿದರೆ 3,62,75,820 ಆಗುತ್ತದೆ ಸ್ವಾಮಿ! ಆ ಲೆಕ್ಕದಲ್ಲೂ ರಾಜ್ಯದ ಜನಸಂಖ್ಯೆಗಿಂತ 62 ಲಕ್ಷ ಮೀರಿ ಹೋಗುತ್ತದೆ ಸ್ವಾಮಿ!

ಅಂದರೆ ನೀವು ಮತ್ತು ನಿಮ್ಮವರು ಆ ವರದಿಯಲ್ಲೂ, ಈ ವರದಿಯಲ್ಲೂ ಕೊಟ್ಟಿರುವ ಯಾವುದೇ ಲೆಕ್ಕವನ್ನು ಹೇಗೆ ಹೇಗೆ ಮಾಡಿದರೂ ರಾಜ್ಯದ ಎಲ್ಲರೂ ಕೊರೋನದಿಂದ ಸೋಂಕಿತರಾಗಿ ಆಗಿದೆ ಎಂದೇ ಆಗುತ್ತದೆಯಲ್ಲ? ಯಾವ ಲೆಕ್ಕ ಎಲ್ಲಿ ತಪ್ಪಿದೆ ಅಂತ ಸ್ವಲ್ಪ ಹೇಳಬಹುದೇ? 

ಆ ಮೇಲೆ ಇದನ್ನೂ ಸ್ವಲ್ಪ ಹೇಳಿಬಿಡಿ ಮಹಾಸ್ವಾಮಿ. ಅದೇ ನಿಮ್ಮ ವರದಿಯ ಅದೇ ಪುಟ 30ರಲ್ಲಿ ಎರಡನೇ ಅಲೆಯ ಆಧಾರದಲ್ಲಿ ಮೂರನೇ ಅಲೆಯು ಉತ್ತುಂಗಕ್ಕೇರಿದಾಗ 2.2% ಜನರು ಸೋಂಕಿತರಾಗಲಿದ್ದಾರೆ ಎಂದು ಬರೆದಿದ್ದೀರಿ ಅಂತ ಮೇಲೆಯೇ ಹೇಳಿದೆ. ಈ 2.2% ಎಲ್ಲಿಂದ ಬಂತು ಸ್ವಾಮಿ? ನಿಮ್ಮದೇ ಲೆಕ್ಕದಂತೆ ರಾಜ್ಯದ ಎಲ್ಲರೂ ಈಗಾಗಲೇ ಸೋಂಕಿತರಾಗಿದ್ದಾರೆ ಎಂದ ಮೇಲೆ ಎರಡನೇ ಅಲೆಯಂತೆಯೇ ಮೂರನೇ ಅಲೆಯ ಉತ್ತುಂಗದಲ್ಲಿ 2.2% ಸೋಂಕಿತರಾಗಲು ಬಾಕಿ ಉಳಿದವರು ಯಾರು ಸ್ವಾಮಿ? ಎಲ್ಲಿಂದ ಹುಡುಕಿ ತೆಗೆದಿರಿ ಈ 2.2%?

ಈ 2.2% ಆಧಾರದಲ್ಲಿ 3,40,000 ಮಕ್ಕಳು ಸೋಂಕಿತರಾಗಬಹುದು ಎಂದು ಹೇಳಿದ್ದೀರಲ್ಲ, ಇದು ಹೇಗೆ ಅಂತ ಸ್ವಲ್ಪ ಹೇಳಿಬಿಡಿ. ಅವರಲ್ಲಿ 2% ಐಸಿಯುಗೆ ಅಂತ ಹೇಳಿದ್ದೀರಲ್ಲ, ಅದು ಹೇಗೆ ಅಂತಲೂ ಹೇಳಿಬಿಡಿ. ಅದಕ್ಕೆ ಅದಾವುದೋ ಅಮೆರಿಕದ ವರದಿಯನ್ನು ಉದ್ಧರಿಸಿದ್ದೀರಲ್ಲಾ, ಯಾಕೆ ಸ್ವಾಮಿ? ಕರ್ನಾಟಕದಲ್ಲಿ ಮೊದಲ ಅಲೆಯಲ್ಲೂ, ಎರಡನೇ ಅಲೆಯಲ್ಲೂ ಅದೆಷ್ಟು ಮಕ್ಕಳು ಐಸಿಯು ಸೇರಿದ್ದರು ಎಂಬ ಮಾಹಿತಿ ನಿಮ್ಮಂಥ ಮಹಾತಜ್ಞರ ಬಳಿಯಲ್ಲಾಗಲೀ, ಈ ಘನ ಸರ್ಕಾರದ ಬಳಿಯಲ್ಲಾಗಲೀ ಇಲ್ಲವೇ? ಅದೇ ಅಮೆರಿಕದ ವರದಿಯನ್ನು ಉದ್ಧರಿಸಿ, ಅಲ್ಲಿ ಮಕ್ಕಳು ಮೃತರಾಗಿಲ್ಲ ಎಂದಿದ್ದೀರಲ್ಲ, ಅದು ಇಲ್ಲಿಗೆ ಅನ್ವಯಿಸುವುದಿಲ್ಲವೇ? ಹಾಗಾದರೆ ಇಷ್ಟೆಲ್ಲ ಗದ್ದಲ ಯಾಕಾಗಿ?

ಕರ್ನಾಟಕದ ವರದಿ ನಿಮ್ಮಲ್ಲಿ ಇಲ್ಲವೇ? ಇದೇ ಸರಕಾರವು ಪ್ರಕಟಿಸಿರುವ ಮಾರ್ಚ್ 21, 2021ರ ವರದಿ ನನ್ನಲ್ಲಂತೂ ಇದೆ. ಬೇಕಾದರೆ ಕಳಿಸಿಕೊಡುತ್ತೇನೆ. ಅದರನುಸಾರ ಒಟ್ಟು 9,58,663 ಪ್ರಕರಣಗಳಲ್ಲಿ 10 ವರ್ಷಕ್ಕಿಂತ ಕೆಳಗಿನವರು 27,674 ಅಂದರೆ 2.9%, ಮತ್ತು 10-19ರವರು 64,806 ಅಂದರೆ 6.8% ಇದ್ದರು; ಅಂದರೆ 20ರ ಒಳಗಿನವರು ಜನಸಂಖ್ಯೆಯ 34% ಇದ್ದರೂ ಸೋಂಕಿತರಲ್ಲಿ 9.65% ಅಷ್ಟೇ ಇದ್ದರು ಸ್ವಾಮಿ. ಒಟ್ಟು 12,396 ಮೃತರಲ್ಲಿ 10ಕ್ಕಿಂತ ಕೆಳಗಿನವರು 28 (0.22%) ಮತ್ತು 10-19ರವರು 46 (0.37%) ಇದ್ದರು, ಮತ್ತು 30ಕ್ಕಿಂತ ಕೆಳಗಿನ ಸೋಂಕಿತರಲ್ಲಿ ಮೃತರ ಪ್ರಮಾಣ 0.1% ಇತ್ತು (ಇದು ಅಧಿಕೃತ ಸೋಂಕಿತರಲ್ಲಿ; ಒಟ್ಟು ಸೋಂಕಿತರನ್ನು ಪರಿಗಣಿಸಿದರೆ ಇದು ಇನ್ನೂ ಬಹಳಷ್ಟು ಕಡಿಮೆ ಇರುತ್ತದೆ). ಹಾಗಿರುವಾಗ, ಮಕ್ಕಳಲ್ಲಿ ಸೋಂಕಿತರಾದವರಲ್ಲಿ 2% ಐಸಿಯುಗೆ ಹೋಗಬೇಕಾಗುತ್ತದೆ, ಮೂರನೇ ಅಲೆ ಮಕ್ಕಳಿಗೆ ಮಹಾ ಕಂಟಕ ಎಂದೆಲ್ಲ ಕಿರುಚಾಡುವುದಕ್ಕೆ ಆಧಾರವೇನು ಸ್ವಾಮಿ? 

ಇನ್ನು ನಿಮ್ಮ ವರದಿಯಲ್ಲಿ ಸೋಂಕಿತ ಮಕ್ಕಳಲ್ಲಿ 15% ಮಕ್ಕಳನ್ನು ಬಾಲ ಆರೈಕೆ ಕೇಂದ್ರಗಳಿಗೆ ತಳ್ಳಬೇಕು ಎಂದು ಬರೆದಿದ್ದೀರಿ. ಅಂದರೆ ಈ ಮಕ್ಕಳನ್ನು ಅವರ ಮನೆಯಿಂದ ಬೇರ್ಪಡಿಸಿ ಬೇರೆಲ್ಲೋ ಇರಿಸುವ ಯೋಜನೆ! ಅದು ಯಾಕೆ ಸ್ವಾಮಿ? ಮಕ್ಕಳಿಂದ ಮನೆಯವರಿಗೆ ತೊಂದರೆಯಾಗುತ್ತದೆ ಎಂಬ ವರದಿ ಈ ಭೂಲೋಕದ ಎಲ್ಲಿಂದಾದರೂ ನಿಮಗೆ ದೊರೆತಿದೆಯೇ? ಇದ್ದರೆ ನಮಗೂ ಸ್ವಲ್ಪ ತೋರಿಸಿ, ನೋಡೋಣವಂತೆ.

-ಡಾ.ಶ್ರೀನಿವಾಸ ಕಕ್ಕಿಲ್ಲಾಯ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News