ಕಾಶ್ಮೀರ ನಾಯಕರೊಂದಿಗೆ ಪ್ರಧಾನಿ ಸಭೆಗೆ ಮುನ್ನಾದಿನ ಜಮ್ಮು-ಕಾಶ್ಮೀರದಲ್ಲಿ 3 ಕಡೆ ಉಗ್ರರ ದಾಳಿ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿನ ಹಾಲಿ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಕರೆದಿರುವ ನಿರ್ಣಾಯಕ ಸರ್ವಪಕ್ಷ ಸಭೆಗೆ ಒಂದು ದಿನ ಮೊದಲು, ಬುಧವಾರ ವಿವಿಧ ಸ್ಥಳಗಳಲ್ಲಿ ಉಗ್ರರ ದಾಳಿ ನಡೆದಿದೆ.
ಪುಲ್ವಾಮಾದ ರಾಜ್‌ಪೋರಾ ಚೌಕ್‌ನಲ್ಲಿ ಪೊಲೀಸ್ ಹಾಗೂ ಸಿಆರ್‌ಪಿಎಫ್ ಸಿಬ್ಬಂದಿಗಳ ನಿಯೋಜನಾ ಪಾರ್ಟಿಯಲ್ಲಿ ಉಗ್ರರು ಗ್ರೆನೇಡ್ ಎಸೆದರು. ಪ್ರತೀಕಾರವಾಗಿ ಜಂಟಿ ಪಡೆಗಳು ಕೆಲವು ವೈಮಾನಿಕ ಶಾಟ್ ಗಳನ್ನು ಸಿಡಿಸಿದವು. ಯಾವುದೇ ಪ್ರಾಣಹಾನಿ ಅಥವಾ ಗಾಯ ಸಂಭವಿಸಿಲ್ಲ.
ಮತ್ತೊಂದು ಘಟನೆಯಲ್ಲಿ, ಶೋಪಿಯಾನ್ ಜಿಲ್ಲೆಯ ಶಿರ್ಮಲ್ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗಿನ ಗುಂಡಿನ ಚಕಮಕಿಯಲ್ಲಿ ಉಗ್ರನೊಬ್ಬನನ್ನು ಕೊಲ್ಲಲಾಯಿತು.
ಏತನ್ಮಧ್ಯೆ, ಶ್ರೀನಗರ ನಗರದ ಹಬಕಡಾಲ್ ಪ್ರದೇಶದಲ್ಲಿ ಅಪರಿಚಿತ ಬಂದೂಕುಧಾರಿಗಳು ಯುವಕನನ್ನು ಗುಂಡಿಕ್ಕಿ ಕೊಂದಿದ್ದಾರೆ.
ಮುಂದಿನ 48 ಗಂಟೆಗಳ ಕಾಲ ಕೇಂದ್ರಾಡಳಿತ ಪ್ರದೇಶ ಜಮ್ಮು ಹಾಗೂ ಕಾಶ್ಮೀರದಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಅಂತರ್ಜಾಲ ಸೇವೆಗಳನ್ನು ಗುರುವಾರ ಸ್ಥಗಿತಗೊಳಿಸಬಹುದು.
ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 24 ರಂದು ಹೊಸದಿಲ್ಲಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಕುರಿತು ಸರ್ವ ಪಕ್ಷಗಳ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಹಾಗೂ ಹಿಂದಿನ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ ಕಾಶ್ಮೀರದಲ್ಲಿನ ರಾಜಕೀಯ ಬಿಕ್ಕಟ್ಟನ್ನು ಕೊನೆಗೊಳಿಸುವುದಕ್ಕೆ ಇದು ಕೇಂದ್ರದ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ.