ತಮಿಳುನಾಡು: ಪೊಲೀಸರಿಂದ ಥಳಿತಕ್ಕೊಳಗಾದ ವ್ಯಕ್ತಿ ಸಾವು; ವಿಶೇಷ ಸಬ್ ಇನ್ಸ್ಪೆಕ್ಟರ್ ಬಂಧನ

Update: 2021-06-23 17:52 GMT

ಸೇಲಂ, ಜೂ. 23: ಪಪ್ಪಾನೈಖೆನಪಟ್ಟಿ ಚೆಕ್ ಪೋಸ್ಟ್‌ ನಲ್ಲಿ ಮಂಗಳವಾರ ಸಂಜೆ ಪೊಲೀಸರಿಂದ ಥಳಿತಕ್ಕೊಳಗಾಗಿದ್ದ ಸೇಲಂ ಎಡಪಟ್ಟಿಯ 40ರ ಹರೆಯದ ವ್ಯಕ್ತಿಯೋರ್ವ ನಿಧನರಾಗಿದ್ದಾರೆ. ಪೊಲೀಸರಿಂದ ಹಲ್ಲೆಗೊಳಗಾಗಿ ಪ್ರಜ್ಞೆ ಕಳೆದುಕೊಂಡಿದ್ದ ಈ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಸೇಲಂನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಬುಧವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿ ವಿಶೇಷ ಪೊಲೀಸ್ ಸಬ್ಇನ್ಸ್ಪೆಕ್ಟರ್ ಪೆರಿಯಸ್ವಾಮಿ ಅವರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. 

ಸೇಲಂನ ಯೇತಪುರ ಸಮೀಪದ ಎಡಪಟ್ಟಿಯ ನಿವಾಸಿಯಾಗಿರುವ ಮುರುಗೇಶನ್ ರೈತ. ಆತ ತುಂಬೈ ರಸ್ತೆಯಲ್ಲಿ ಅಂಗಡಿಯೊಂದನ್ನು ನಡೆಸುತ್ತಿದ್ದ. ಮಂಗಳವಾರ ಸಂಜೆ ಆತ ತನ್ನ ಗೆಳೆಯನೊಂದಿಗೆ ಬೈಕ್ ನಲ್ಲಿ ಕಲ್ಲಕುರಿಚಿಗೆ ಮದ್ಯ ಸೇವಿಸಲು ತೆರಳಿದ್ದ. ಹಿಂದಿರುಗುವ ಸಂದರ್ಭ ಪಪ್ಪಾನೈಖೆನಪಟ್ಟಿ ಚೆಕ್ ಪೋಸ್ಟ್ ನಲ್ಲಿ ಬೈಕ್ ಅನ್ನು ಪೊಲೀಸರು ತಡೆ ಹಿಡಿದರು. ಈ ಸಂದರ್ಭ ಮುರುಗೇಶನ್ ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆದಿತ್ತು. ಈ ವೇಳೆ ವಿಶೇಷ ಸಬ್ ಇನ್ಸ್ಪೆಕ್ಟರ್ ಪೆರಿಯಸ್ವಾಮಿ ಆತನ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಇದರಿಂದ ಮುರಗೇಶನ್ ನ ತಲೆಗೆ ತೀವ್ರ ಗಾಯವಾಗಿತ್ತು ಎಂದು ವರದಿ ತಿಳಿಸಿದೆ. 

ಮುರೇಗಶನ್ ನನ್ನು ಆತನ ಗೆಳೆಯ ಕೂಡಲೇ ತುಂಬಾಲ್ ಪ್ರಾರ್ಥಮಿಕ ಆರೋಗ್ಯ ಕೇಂದ್ರ ದಾಖಲಿಸಿದ್ದರು. ಬಳಿಕ ಅತ್ತೂರು ಸರಕಾರಿ ಆಸ್ಪತ್ರೆಗೆ ವರ್ಗಾಯಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮುರುಗೇಶನ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News