ನೂತನ ಐಟಿ ನಿಯಮ ಪ್ರಶ್ನಿಸಿ ಮಾಧ್ಯಮ ಸಂಸ್ಥೆಗಳಿಂದ ಅರ್ಜಿ: ಕೇಂದ್ರ ಸರಕಾರಕ್ಕೆ ಮದ್ರಾಸ್ ಹೈಕೋರ್ಟ್ ನೋಟಿಸ್

Update: 2021-06-23 17:53 GMT

ಚೆನ್ನೈ, ಜೂ. 23: ಮಾಹಿತಿ ತಂತ್ರಜ್ಞಾನ ನಿಯಮ 2021ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ 13 ಮಾಧ್ಯಮ ಸಂಸ್ಥೆಗಳು ಒಳಗೊಂಡ ಡಿಜಿಟಲ್ ನ್ಯೂಸ್ ಪಬ್ಲಿಷರ್ಸ್ ಅಸೋಸಿಯೇಶನ್ ಸಲ್ಲಿಸಿದ ಮನವಿ ಕುರಿತಂತೆ ಮದ್ರಾಸ್ ಉಚ್ಚ ನ್ಯಾಯಾಲಯ ಬುಧವಾರ ಕೇಂದ್ರ ಸರಕಾರಕ್ಕೆ ನೋಟಿಸು ಜಾರಿ ಮಾಡಿದೆ.

ಕೆಲವು ವಾರಗಳ ಹಿಂದೆ ಕರ್ನಾಟಕ ಸಂಗೀತಗಾರ ಟಿ.ಎಂ. ಕೃಷ್ಣ ಸಲ್ಲಿಸಿದ ಮನವಿಯೊಂದಿಗೆ ಈ ಮನವಿಯನ್ನು ಕೂಡ ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಹಾಗೂ ನ್ಯಾಯಮೂರ್ತಿ ಸೆಂಥಿಲ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ ವಿಚಾರಣೆ ನಡೆಸಿತು. ನಿರ್ದಿಷ್ಟವಾಗಿ 12, 14 ಹಾಗೂ 16 ನಿಯಮಗಳ ಅಡಿಯಲ್ಲಿ ಕೇಂದ್ರ ಸರಕಾರ ಯಾವುದೇ ಬಲವಂತದ ಹಾಗೂ ಬೆದರಿಕೆಯನ್ನು ಒಡ್ಡಿದಲ್ಲಿ ನ್ಯಾಯಾಲಯವನ್ನು ಸಂಪರ್ಕಿಸಲು ಅಸೋಸಿಯೇಶನ್ ಗೆ ನ್ಯಾಯಪೀಠ ಮಧ್ಯಂತರ ಅವಕಾಶವನ್ನು ನೀಡಿತು.

ಕಾಯ್ದೆಯ ಎರಡು ನಿಯಮಗಳು ಅಸೋಸಿಯೇಶನ್ ಅನ್ನು ತತ್‌ ಕ್ಷಣ ತಪ್ಪಿತಸ್ಥನನ್ನಾಗಿ ಮಾಡುತ್ತವೆ ಎಂದು ದೂರುದಾರರ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಪಿ.ಎಸ್. ರಮಣ್ ಪ್ರತಿಪಾದಿಸಿದರು. ನಿರ್ದಿಷ್ಟವಾಗಿ ನಿಯಮ 16 ಯಾವುದೇ ಡಿಜಿಟಲ್ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗದಂತೆ ತಡೆಯಲು ಕೇಂದ್ರ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿಗೆ ಅಧಿಕಾರ ನೀಡುತ್ತದೆ. ಮನವಿ ವಿಲೇವಾರಿಗೆ ಬಾಕಿ ಇರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ನಿಯಮದ ಅಡಿ ಯಾವುದೇ ಕ್ರಮಗಳನ್ನು ಕೈಗೊಳ್ಳುವುದಕ್ಕೆ ತಡೆ ನೀಡಲು ಮಧ್ಯಂತರ ಆದೇಶ ನೀಡುವಂತೆ ಅಸೋಸಿಯೇಶನ್ ಬಯಸಿದೆ ಎಂದು ಅವರು ಹೇಳಿದರು. 

ಮಾಧ್ಯಮ ಸಂಸ್ಥೆಗಳ ವಿರುದ್ಧ ಕೇಂದ್ರ ಸರಕಾರ ಇದುವರೆಗೆ ಯಾವುದೇ ರೀತಿಯ ಬಲವಂತದ ಕ್ರಮಗಳನ್ನು ಕೈಗೊಳ್ಳದೇ ಇರುವುದರಿಂದ ಪೂರ್ವಬಾವಿ ಮಧ್ಯಂತರ ಆದೇಶವನ್ನು ಜಾರಿಗೊಳಿಸುವ ಅಗತ್ಯ ಇಲ್ಲ ಎಂದು ನ್ಯಾಯಪೀಠ ತನ್ನ ಪ್ರತಿಕ್ರಿಯೆಯಲ್ಲಿ ಪ್ರತಿಪಾದಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News