×
Ad

ಗುಜರಾತ್ ಕೇಡರ್ ಅಧಿಕಾರಿ ಪ್ರವೀಣ್ ಸಿನ್ಹಾ ಸಿಬಿಐ ವಿಶೇಷ ನಿರ್ದೇಶಕರಾಗಿ ನೇಮಕ

Update: 2021-06-23 23:24 IST
photo: twitter

ಹೊಸದಿಲ್ಲಿ: ಸಿಬಿಐ ಹೆಚ್ಚುವರಿ ನಿರ್ದೇಶಕ ಪ್ರವೀಣ್ ಸಿನ್ಹಾ ಅವರನ್ನು ಕೇಂದ್ರೀಯ ತನಿಖಾ ದಳದ ವಿಶೇಷ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.  ಈ ಹುದ್ದೆಯನ್ನು ಈ ಹಿಂದೆ ರಾಕೇಶ್ ಅಸ್ತಾನ ನಿರ್ವಹಿಸಿದ್ದರು. ಸಿಬಿಐ ನಲ್ಲಿ ನಿರ್ದೇಶಕರ ನಂತರ ವಿಶೇಷ ನಿರ್ದೇಶಕ ಸ್ಥಾನ ಎರಡನೇ ಹಿರಿಯ-ಉನ್ನತ ಹುದ್ದೆಯಾಗಿದೆ. ಕಳೆದ ಮೂರು ವರ್ಷಗಳಿಂದ ಈ ಹುದ್ದೆ ಖಾಲಿಯಾಗಿತ್ತು.

ಡಿಒಪಿಟಿ (ಸಿಬ್ಬಂದಿ ಹಾಗೂ ತರಬೇತಿ ಇಲಾಖೆ) ಮಾಡಿದ ಶಿಫಾರಸುಗಳ ಮೇರೆಗೆ ಸಿಬಿಐನ ವಿಶೇಷ ನಿರ್ದೇಶಕರಾಗಿ ಪ್ರವೀಣ್ ಸಿನ್ಹಾ ಅವರನ್ನು ಕ್ಯಾಬಿನೆಟ್ ನೇಮಕಾತಿ ಸಮಿತಿ ಬುಧವಾರ ನೇಮಕ ಮಾಡಿದೆ.

1988 ರ ಬ್ಯಾಚ್‌ನ ಗುಜರಾತ್ ಕೇಡರ್ ನ  ಐಪಿಎಸ್ ಅಧಿಕಾರಿ ಸಿನ್ಹಾ ಅವರು ಸಿಬಿಐ ನಲ್ಲಿ  ಪೊಲೀಸ್ ಅಧೀಕ್ಷಕರು, ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್, ಜಂಟಿ ನಿರ್ದೇಶಕರು ಹಾಗೂ  ಹೆಚ್ಚುವರಿ ನಿರ್ದೇಶಕರಾಗಿ 2000 ಮತ್ತು 2021 ರ ನಡುವೆ ಎರಡು ಹಂತಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಮಾಜಿ ಸಿಬಿಐ ಮುಖ್ಯಸ್ಥ ರಿಷಿ ಕುಮಾರ್ ಶುಕ್ಲಾ ನಿವೃತ್ತರಾದ ನಂತರ,  ಪ್ರಧಾನಿ ಮೋದಿ ನೇತೃತ್ವದ ಉನ್ನತ ಸಮಿತಿಯಿಂದ ಸುಬೋಧ್ ಜೈಸ್ವಾಲ್ ಅವರನ್ನು ಸಿಬಿಐ ನಿರ್ದೇಶಕರಾಗಿ ನೇಮಕ ಮಾಡುವವರೆಗೂ ಪ್ರವೀಣ್ ಸಿನ್ಹಾ ಅವರು ಸಿಬಿಐ ಹಂಗಾಮಿ ನಿರ್ದೇಶಕ ಹುದ್ದೆಯನ್ನು ಅಲಂಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News