ಗಡಿ ಒಪ್ಪಂದಕ್ಕೆ ಬದ್ಧತೆ ಚೀನಾದ ಜವಾಬ್ದಾರಿಯಾಗಿದೆ: ಎಸ್.ಜೈಶಂಕರ್

Update: 2021-06-23 18:29 GMT

ಹೊಸದಿಲ್ಲಿ, ಜೂ.23: ಪೂರ್ವ ಲಡಾಖ್ ನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಸೇನಾಪಡೆ ನಿಯೋಜನೆ ಕುರಿತಂತೆ ಉಭಯ ದೇಶಗಳ ನಡುವಿನ ಒಪ್ಪಂದಕ್ಕೆ ಬದ್ಧತೆ ತೋರುವುದು ಚೀನಾದ ಜವಾಬ್ದಾರಿಯಾಗಿದೆ ಎಂದು ಭಾರತದ ವಿದೇಶ ವ್ಯವಹಾರ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಖತರ್ ಆರ್ಥಿಕ ಗೋಷ್ಟಿಯ ವರ್ಚುವಲ್ ಅಧಿವೇಶನದಲ್ಲಿ ಅವರು ಮಾತನಾಡುತ್ತಿದ್ದರು. 

ಗಡಿ ಭಾಗದಲ್ಲಿ ಎರಡೂ ದೇಶಗಳು ಬೃಹತ್ ಪ್ರಮಾಣದಲ್ಲಿ ಸೇನೆಯನ್ನು ನಿಯೋಜಿಸಬಾರದು ಎಂದು ಚೀನಾವು ಲಿಖಿತ ರೂಪದಲ್ಲಿ ಒಪ್ಪಿಕೊಂಡಿದೆ. ಇದಕ್ಕೆ ಚೀನಾ ಬದ್ಧವಾಗಿರುತ್ತದೆಯೇ ಎಂಬುದು ಈಗಿರುವ ವಿಷಯವಾಗಿದೆ. ಲಡಾಖ್ನಲ್ಲಿ ಉಭಯ ಸೇನಾಪಡೆಗಳ ನಿಕಟ ನಿಯೋಜನೆ ಈಗಲೂ ಮುಂದುವರಿದಿದೆ ಎಂದವರು ಹೇಳಿದರು. ಭಾರತ ಚೀನಾಗಳ ಸಂಬಂಧ ಪರಸ್ಪರ ಸಂವೇದನಾಶೀಲತೆ, ಪರಸ್ಪರ ಗೌರವ ಮತ್ತು ಪರಸ್ಪರ ಹಿತಾಸಕ್ತಿಗೆ ಅನುಗುಣವಾಗಿರಬೇಕು ಎಂದ ಜೈಶಂಕರ್, ‘ಕ್ವಾಡ್’ನ ಸದಸ್ಯನಾಗಲು ಭಾರತ ನಿರ್ಧರಿಸಿರುವುದು ಚೀನಾದೊಂದಿಗಿನ ಉದ್ವಿಗ್ನತೆ ಹೆಚ್ಚಲು ಕಾರಣವಾಗಿದೆ ಎಂಬುದನ್ನು ನಿರಾಕರಿಸಿದರು. 

‘ಕ್ವಾಡ್’ ರಚನೆಯಾಗುವುದಕ್ಕೂ ಮೊದಲಿನಿಂದಲೇ ಭಾರತ-ಚೀನಾ ಗಡಿ ವಿವಾದ ಇತ್ತು ಎಂದು ಜೈಶಂಕರ್ ಹೇಳಿದರು. ‘ಕ್ವಾಡ್’ ಎಂಬುದು ನಾಲ್ಕುರಾಷ್ಟ್ರಗಳ ಒಕ್ಕೂಟವಾಗಿದೆ. ಅಮೆರಿಕ, ಆಸ್ಟ್ರೇಲಿಯಾ, ಜಪಾನ್ ಮತ್ತು ಭಾರತ ಇದರ ಸದಸ್ಯ ರಾಷ್ಟ್ರ. ಕಳೆದ ಮಾರ್ಚ್ನಲ್ಲಿ ನಡೆದ ಕ್ವಾಡ್ನ ಪ್ರಥಮ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಚೀನಾ ‘ನಾಲ್ಕು ದೇಶಗಳು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಮಾರಕವಾಗದ, ಪೂರಕ ಕಾರ್ಯ ಮಾಡಲಿವೆ ಎಂದು ಆಶಿಸುವುದಾಗಿ’ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News