ಸಂಸದೀಯ ಸಮಿತಿ ಸಭೆಯಲ್ಲಿ ಕೋವಿಡ್ ಲಸಿಕೆ, ರೂಪಾಂತರಿಗಳ ಕುರಿತು ಚರ್ಚಿಸಲು ನಿರಾಕರಿಸಿ ಹೊರನಡೆದ ಬಿಜೆಪಿ ಸದಸ್ಯರು

Update: 2021-06-24 09:57 GMT

ಹೊಸದಿಲ್ಲಿ: ಕೋವಿಡ್ ಲಸಿಕೆ ಅಭಿವೃದ್ಧಿ ಮತ್ತು ಕೊರೊನವೈರಸ್ ಮತ್ತದರ ರೂಪಾಂತರಿಗಳ ಜೆನೆಟಿಕ್ ಸೀಕ್ವೆನ್ಸಿಂಗ್ ಕುರಿತು ಚರ್ಚಿಸಲು ಬುಧವಾರ ನಡೆದ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತ ಸಂಸದೀಯ ಸ್ಥಾಯಿ ಸಮಿತಿ ಸಭೆಯಲ್ಲಿ ನಿರಾಕರಿಸಿದ ಬಿಜೆಪಿ ಸದಸ್ಯರು, ಇಂತಹ ಚರ್ಚೆಗಳು ವೈಜ್ಞಾನಿಕ ಸಮುದಾಯದ ಆತ್ಮಸ್ಥೈರ್ಯವನ್ನು ಕುಸಿಯುವಂತೆ ಮಾಡಬಹುದು ಎಂದು ಹೇಳಿದ್ದಾರೆ.

ಬಿಜೆಪಿ ಸದಸ್ಯರ ಕೋರಿಕೆಯಂತೆ ಸಭೆಯನ್ನು ಮುಂದೂಡಲು ಸಮಿತಿ ಅಧ್ಯಕ್ಷ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ನಿರಾಕರಿಸಿದಾಗ ಬಿಜೆಪಿ ಸದಸ್ಯರು ಸಭೆಯಿಂದ ಹೊರನಡೆದಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ. ದೇಶ ಈಗಲೂ ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿರುವಾಗ ಲಸಿಕೆ ಅಭಿವೃದ್ಧಿ ಕುರಿತು ಚರ್ಚಿಸುವುದು ಇದು ಸಕಾಲವಲ್ಲ ಎಂದು ವಾದಿಸಿದ ಬಿಜೆಪಿ ಸದಸ್ಯರು ಈ ವಿಚಾರದ ಚರ್ಚೆ ಸೂಕ್ತವೇ ಎಂಬ ಪ್ರಶ್ನೆಯನ್ನು ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಅವರ ಮುಂದಿಡಬೇಕೆಂದು ಆಗ್ರಹಿಸಿದರು.

ಕೋವಿಡ್ ನಿಂದ ದೇಶದಲ್ಲಿ 4 ಲಕ್ಷ ಜರನು ಸಾವಿಗೀಡಾಗಿರುವಾಗ ಸಾಂಕ್ರಾಮಿಕದ ಫೊರೆನ್ಸಿಕ್ ವಿಶ್ಲೇಷಣೆ ತುರ್ತಾಗಿ ನಡೆಯಬೇಕಿದೆ ಎಂದು ವಿಪಕ್ಷ ಸದಸ್ಯರು ಆಗ್ರಹಿಸಿದರಲ್ಲದೆ ಎಐಎಂಐಎಂ ನ ಅಸಾದುದ್ದೀನ್ ಓವೈಸಿ, ಐಯುಎಂಎಲ್‍ನ ಇ ಟಿ ಮೊಹಮ್ಮದ್ ಬಶೀರ್ ಹಾಗೂ ಸಿಪಿಐನ ಬಿನೊಯ್ ವಿಶ್ವಂ ಸಹಿತ ಹಲವರು ಸಭೆ ಮುಂದುವರಿಯಬೇಕೆಂದು ಹೇಳಿದರು.

ಆದರೆ ಬಿಜೆಪಿಯ ಉನ್ನಾವೋ ಸಂಸದ ಸಾಕ್ಷಿ ಮಹಾರಾಜ್ ಒಪ್ಪದೆ ಮತದಾನದ ಮೂಲಕ ಚರ್ಚೆ ನಡೆಯಬೇಕೇ ಬೇಡವೇ ಎಂದು ಇತ್ಯರ್ಥಪಡಿಸಬೇಕೆಂದು ಆಗ್ರಹಿಸಿದರು. ಸಭೆ ನಡೆಯುವುದಕ್ಕಿಂತ ಮುಂಚಿತವಾಗಿಯೇ ಸಾಕ್ಷಿ ಮಹಾರಾಜ್ ಸಹಿತ ಕೆಲ ಬಿಜೆಪಿ ಸದಸ್ಯರು ಸಭೆಯ ವಿಷಯದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರನ್ನೆಲಾಗಿದೆ. ಆದರೆ ಮತದಾನ ನಡೆಸಲು ಜೈರಾಂ ರಮೇಶ್ ನಿರಾಕರಿಸಿದರಲ್ಲದೆ ಸಂಸದೀಯ ಸಮಿತಿ ಸಭೆಗಳು ಯಾವತ್ತೂ ಸಹಮತದೊಂದಿಗೆ ನಡೆಯುತ್ತದೆ ಎಂದು ವಾದಿಸಿದರು. ಈ ಸಂದರ್ಭ ಕೆಲ ಬಿಜೆಪಿ ಸಂಸದರು ಸಭೆಯಿಂದ ಹೊರನಡೆದಿದ್ದಾರೆ.

ಸಂಸದೀಯ ಸಮಿತಿಯಲ್ಲಿ 11 ಬಿಜೆಪಿ ಸಂಸದರು ಹಾಗೂ ಏಳು ವಿಪಕ್ಷ ಸಂಸದರು ಸದಸ್ಯರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News