ಹಫೀಝ್ ಸಯೀದ್ ಮನೆ ಮುಂದೆ ಸ್ಫೋಟ : ಮೂವರು ಬಲಿ

Update: 2021-06-24 05:45 GMT

ಇಸ್ಲಾಮಾಬಾದ್: ಮುಂಬೈ ದಾಳಿ ಪ್ರಕರಣದ ರೂವಾರಿ ಹಫೀಝ್ ಸಯೀದ್‌ನ ಲಾಹೋರ್ ನಿವಾಸದ ಮುಂದೆ ಬುಧವಾರ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ ಮೂವರು ಮೃತಪಟ್ಟು ಇತರ 21 ಮಂದಿ ಗಾಯಗೊಂಡಿದ್ದಾರೆ.

ಈ ಭೀಕರ ಸ್ಫೋಟದ ಸದ್ದು ಹಲವು ಮೈಲುಗಳ ವರೆಗೆ ಕೇಳಿಸಿದ್ದು, ನಿಲ್ಲಿಸಿದ್ದ ವಾಹನಗಳು ಹಾಗೂ ಅಕ್ಕಪಕ್ಕದ ಮನೆಗಳು ಹಾನಿಗೀಡಾಗಿವೆ. ಎಲ್‌ಇಟಿ ಸಂಸ್ಥಾಪಕ ಮತ್ತು ನಿಷೇಧಿತ ಜೆಯುಡಿ ಮುಖ್ಯಸ್ಥನ ಮನೆಯ ಕಿಟಕಿ ಮತ್ತು ಗೋಡೆಗಳಿಗೂ ತೀವ್ರ ಹಾನಿಯಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಗಾಯಗೊಂಡವರಲ್ಲಿ ಸಯೀದ್‌ನ ಮನೆ ಮುಂದೆ ಕಾವಲು ಕಾಯುತ್ತಿದ್ದ ಪೊಲೀಸರು ಸೇರಿದ್ದಾರೆ ಎಂದು ಪಾಕಿಸ್ತಾನ ಪಂಜಾಬ್ ಪೊಲೀಸ್ ಮುಖ್ಯಸ್ಥ ಇನಾಮ್ ಘನಿ ಹೇಳಿದ್ದಾರೆ. ಈ ಸ್ಫೋಟದ ವೇಳೆ ಸಯೀದ್ ಮನೆಯಲ್ಲೇ ಇದ್ದ ಎಂಬ ವದಂತಿ ದಟ್ಟವಾಗಿ ಹಬ್ಬಿತ್ತು. ಭದ್ರತಾ ಕಾರಣಗಳನ್ನು ನೀಡಿ ಅಧಿಕಾರಿಗಳು ಈ ಪ್ರದೇಶಕ್ಕೆ ಭೇಟಿ ನಿಷೇಧಿಸಿದರು.

ಇದು ನಿಗದಿತ ಗುರಿಯ ಮೇಲೆ ನಡೆಸಿದ ಬಾಂಬ್ ದಾಳಿ ಎಂದು ಘನಿ ಹೇಳಿದ್ದಾರೆ. ಇದು ಆತ್ಮಹತ್ಯಾ ಬಾಂಬ್ ದಾಳಿಯೇ ಅಥವಾ ಇಐಡಿ ದಾಳಿಯೇ ಎನ್ನುವ ಬಗ್ಗೆ ಭಯೋತ್ಪಾದಕ ನಿಗ್ರಹ ಇಲಾಖೆ ತನಿಖೆ ನಡೆಸುತ್ತಿದೆ ಎಂದು ವಿವರಿಸಿದ್ದಾರೆ. ಪಾಕಿಸ್ತಾನದಲ್ಲಿ ನಡೆಯುವ ಬಹಳಷ್ಟು ಉಗ್ರ ದಾಳಿಗಳು ಹೊರಗಿನ ಶಕ್ತಿಗಳು ಮತ್ತು ವಿರೋಧಿ ಗುಪ್ತಚರ ಏಜೆನ್ಸಿಯವರು ನಡೆಸುವ ದಾಳಿಗಳು ಎಂದು ಘನಿ ಹೇಳಿಕೊಂಡಿದ್ದಾರೆ.

ಉಗ್ರಗಾಮಿಗಳಿಗೆ ನೆರವು ನೀಡುತ್ತಿದ್ದ ಆರೋಪದಲ್ಲಿ ಕಳೆದ ವರ್ಷ ಪಾಕಿಸ್ತಾನ ಸಯೀದ್‌ಗೆ 15 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಮುಂಬೈ ದಾಳಿ ಸಂಬಂಧ ಸಯೀದ್ ಮೇಲೆ ಯಾವ ಆರೋಪವನ್ನೂ ಹೊರಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News