ನಕಲಿ ಲಸಿಕಾ ಶಿಬಿರದಲ್ಲಿ ಲಸಿಕೆ ಪಡೆದ ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ: ಆರೋಪಿಯ ಬಂಧನ

Update: 2021-06-24 06:27 GMT

ಕೋಲ್ಕತಾ: ತೃಣಮೂಲ ಕಾಂಗ್ರೆಸ್ ಸಂಸದೆ, ನಟಿ ಮಿಮಿ ಚಕ್ರವರ್ತಿ ನಕಲಿ ಲಸಿಕಾ ಶಿಬಿರದಲ್ಲಿ ಕೋವಿಡ್ ಲಸಿಕೆ ತೆಗೆದುಕೊಂಡ ಘಟನೆ ನಡೆದಿದೆ. ಲಸಿಕೆ ತೆಗೆದುಕೊಂಡ ನಂತರ ಯಾವುದೇ ಅಧಿಕೃತ ದೃಢೀಕರಣದ ಸಂದೇಶವನ್ನು ಪಡೆಯದಿದ್ದಾಗ ಅನುಮಾನಗೊಂಡು ಮಿಮಿ ಚಕ್ರವರ್ತಿ ಪೊಲೀಸರಿಗೆ ದೂರು ನೀಡಿದ್ದಾರೆ. 

ತಾನು ಕೋಲ್ಕತಾದ ಮುನ್ಸಿಪಲ್ ಕಾರ್ಪೋರೇಶನ್ ನ ಜಂಟಿ ಆಯುಕ್ತ ಎಂದು ಹೇಳಿಕೊಂಡು  ಕೋಲ್ಕತ್ತಾದಲ್ಲಿ ಸಾವಿರಾರು ವ್ಯಾಕ್ಸಿನೇಷನ್‌ ಗಳ ಮೇಲ್ವಿಚಾರಣೆ ನಡೆಸುತ್ತಿದ್ದ,ಲಸಿಕಾ ಶಿಬಿರವನ್ನು ಆಯೋಜಿಸುತ್ತಿದ್ದ 28ರ ವಯಸ್ಸಿನ ವ್ಯಕ್ತಿಯನ್ನು ಘಟನೆಗೆ ಸಂಬಂಧಿಸಿ ಬುಧವಾರ ಬಂಧಿಸಲಾಗಿದೆ.

ದಕ್ಷಿಣ ಕೋಲ್ಕತ್ತಾದಲ್ಲಿ ಬಂಧಿತ ವ್ಯಕ್ತಿ ದೇಬಂಜನ್ ದೇವ್ ಆಯೋಜಿಸಿದ್ದ ಲಸಿಕೆ ಶಿಬಿರಕ್ಕೆ ನಟಿ-ರಾಜಕಾರಣಿ ಮಿಮಿ ಚಕ್ರವರ್ತಿ ಮುಖ್ಯ ಅತಿಥಿಯಾಗಿ ತೆರಳಿದ್ದರು.
ಜನರು ತಮ್ಮನ್ನು ತಾವು ಲಸಿಕೆ ಹಾಕಿಸಿಕೊಳ್ಳಲು ಪ್ರೋತ್ಸಾಹಿಸಲು ಹಾಗೂ  ವೈರಸ್ ಹರಡುವುದನ್ನು ತಡೆಯಲು ಸಹಾಯ ಮಾಡಲು ಚಕ್ರವರ್ತಿ ಸ್ವತಃ ಕೋವಿಡ್ ಲಸಿಕೆ  ತೆಗೆದುಕೊಂಡರು. ಶಿಬಿರದಲ್ಲಿ ಸುಮಾರು 250 ಜನರಿಗೆ ಲಸಿಕೆ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಜನರು ತೆಗೆದುಕೊಂಡ ಲಸಿಕೆ ನಕಲಿಯೇ ,ಅಸಲಿಯೇ ಎಂದು ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. 

ಐಎಎಸ್ ಅಧಿಕಾರಿ ಎಂದು ಹೇಳಿಕೊಂಡಿದ್ದ ದೇಬಂಜನ್ ದೇವ್ ಸಂಸದೆ ಚಕ್ರವರ್ತಿಯನ್ನು ಶಿಬಿರಕ್ಕೆ ಆಹ್ವಾನಿಸಿದ್ದ. ಕೋಲ್ಕತಾ ಮುನ್ಸಿಪಲ್ ಕಾರ್ಪೊರೇಷನ್ ಲಸಿಕೆ ಶಿಬಿರವನ್ನು ಆಯೋಜಿಸಿದೆ ಎಂದು ದೇವ್ ಹೇಳಿದ್ದ.

"ನಾನು ಜನರು ಲಸಿಕೆ ತೆಗೆದುಕೊಳ್ಳುವುದನ್ನುಪ್ರೇರೇಪಿಸಲು ಶಿಬಿರದಲ್ಲಿ ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡೆ. ಆದರೆ ಕೋವಿನ್‌ ನಿಂದ   ನನಗೆ ಯಾವುದೇ ದೃಢೀಕರಣ ಸಂದೇಶ ಬಂದಿರಲಿಲ್ಲ" ಎಂದು ಚಕ್ರವರ್ತಿ  ಹೇಳಿದರು.

ಜನರನ್ನು ಕೋವಿನ್‌ ನಲ್ಲಿ ನೋಂದಾಯಿಸಲು ಯಾವುದೇ ಆಧಾರ್ ಕಾರ್ಡ್ ವಿವರಗಳನ್ನು ತೆಗೆದುಕೊಂಡಿಲ್ಲದಿರುವುದನ್ನು ಸಂಸದೆ ಗಮನಿಸಿದ್ದಾರೆ, ಹೀಗಾಗಿ ಯಾರಿಗೂ  ಕೂಡ ಲಸಿಕೆಯ  ನಂತರ ಯಾವುದೇ ಸಂದೇಶ ಬಂದಿಲ್ಲ.

ಲಸಿಕೆಯ ಬಗ್ಗೆ ಅನುಮಾನಗೊಂಡ ಚಕ್ರವರ್ತಿ ಕೋಲ್ಕತಾ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News