"ಮಥುರಾ ಮಸ್ಜಿದ್‌ ಅನ್ನು ಸ್ವಯಂಪ್ರೇರಿತರಾಗಿ ಧ್ವಂಸ ಮಾಡಿದರೆ, ದೊಡ್ಡದಾದ ಬೇರೆ ಭೂಮಿ ನೀಡುತ್ತೇವೆ"

Update: 2021-06-24 06:41 GMT
Photo: ANI

ಮಥುರಾ: ಮೊಘಲ್ ಕಾಲದ ಮಸೀದಿಯನ್ನು ಸ್ವಯಂ ನೆಲಸಮ ಮಾಡಲು ಮಸೀದಿಯ ನಿರ್ವಹಣಾ ಸಮಿತಿಯು ಒಪ್ಪಿದರೆ, ಕತ್ರ ಕೇಶವ್ ದೇವ್ ದೇವಾಲಯ ಸಂಕೀರ್ಣದೊಳಗಿರುವ 17 ನೇ ಶತಮಾನದ ಶಾಹಿ ಮಸೀದಿ ಇರುವ ಜಾಗಕ್ಕಿಂತ  ದೊಡ್ಡದಾದ ಭೂಮಿಯನ್ನು ನೀಡುವ ಕೊಡುಗೆಯನ್ನು ಮುಂದಿಟ್ಟಿರುವ ಹಿಂದುತ್ವ ಸಂಘಟನೆಯೊಂದು ಮಂಗಳವಾರ ಮಥುರಾ ನ್ಯಾಯಾಲಯದ ಮೊರೆ ಹೋಗಿದೆ .

ದೇವಾಲಯದ ಪಟ್ಟಣದ ಚೌರಸಿ ಕೋಸ್ ಪರಿಕರ್ಮಾ ಸರ್ಕ್ಯೂಟ್ ಹೊರಗಿನ ದೊಡ್ಡ ಪ್ರಮಾಣದ ಭೂಮಿಯನ್ನು ಮಸೀದಿ ನಿರ್ವಹಣಾ ಸಮಿತಿಗೆ ನೀಡುವುದಾಗಿ ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ಆಂದೋಲನ್ ಸಮಿತಿ ಮಥುರಾದ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದೆ.

ನಿರ್ವಹಣಾ ಸಮಿತಿ ಗೆ ಶಾಹಿ ಮಸೀದಿ ಈದ್ಗಾ ನಿಂತಿರುವ ಜಾಗಕ್ಕಿಂತ ದೊಡ್ಡದಾದ ಭೂಮಿಯನ್ನು ನೀಡಲಾಗುವುದು ಎಂದು ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ಆಂದೋಲನ್ ಸಮಿತಿಯ ಅಧ್ಯಕ್ಷ ವಕೀಲ ಮಹೇಂದ್ರ ಪ್ರತಾಪ್ ಸಿಂಗ್ ಹೇಳಿದ್ದಾರೆ.

ಮಸೀದಿಯ ನಿರ್ವಹಣಾ ಸಮಿತಿಯು ಅಸ್ತಿತ್ವದಲ್ಲಿರುವ ಶಾಹಿ ಮಸೀದಿ ಈದ್ಗಾವನ್ನು ಸ್ವಯಂಪ್ರೇರಣೆಯಿಂದ ನೆಲಸಮಗೊಳಿಸಿದರೆ ಹಾಗೂ  ಭೂಮಿಯನ್ನು ಸಮಿತಿಗೆ ಹಸ್ತಾಂತರಿಸಿದರೆ ‘ಚೌರಾಸಿ ಕೋಸ್ ಪರಿಕ್ರಮ’ ಪರಿಧಿಯ ಹೊರಗೆ ಇನ್ನೂ ಕೆಲವು ಭೂಮಿಯನ್ನು ನೀಡುವುದಾಗಿ ಸಂಘಟನೆ ಹೇಳಿದೆ.

ಹಿರಿಯ ಸಿವಿಲ್ ನ್ಯಾಯಾಧೀಶರು ರಜೆಯಲ್ಲಿದ್ದ ಕಾರಣ ಅರ್ಜಿಯನ್ನು ಸಿವಿಲ್ ನ್ಯಾಯಾಧೀಶ II ಅನುಪಮ್ ಸಿಂಗ್ ಅವರಿಗೆ ಸಲ್ಲಿಸಲಾಯಿತು.

ಭಗವಾನ್ ಶ್ರೀ ಕೃಷ್ಣನ ಜನ್ಮಸ್ಥಳ ಎನ್ನಲಾಗುವ ಪ್ರದೇಶದ ಸಮೀಪವಿರುವ ಕತ್ರ ಕೇಶವ್ ದೇವ್ ದೇವಸ್ಥಾನದ 13.37 ಎಕರೆ ಆವರಣದಲ್ಲಿ 1669-70ರಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ ನಿರ್ಮಿಸಲಾದ ಮಸೀದಿಯನ್ನು ತೆಗೆದುಹಾಕಬೇಕೆಂದು ಕೋರಿ ಮಥುರಾದಲ್ಲಿ ವಿವಿಧ ಸಿವಿಲ್ ನ್ಯಾಯಾಲಯಗಳಲ್ಲಿ ಹಲವಾರು ಅರ್ಜಿಗಳು ವಿಚಾರಣೆಗೆ  ಬಾಕಿ ಉಳಿದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News