ಖ್ಯಾತ ಆ್ಯಂಟಿ-ವೈರಸ್ ಸಾಫ್ಟ್ ವೇರ್ ತಂತ್ರಜ್ಞ ಜಾನ್ ಮೆಕಾಫೀ ಜೈಲಿನಲ್ಲಿ ಮೃತ್ಯು; ಆತ್ಮಹತ್ಯೆ ಶಂಕೆ

Update: 2021-06-24 09:12 GMT
photo: twiter/@rameshlaus

ಮ್ಯಾಡ್ರಿಡ್: ಖ್ಯಾತ ಆ್ಯಂಟಿ-ವೈರಸ್ ಸಾಫ್ಟ್ ವೇರ್ ತಂತ್ರಜ್ಞ ಜಾನ್ ಮೆಕಾಫೀ ಅವರು ಸ್ಪೇನ್‍ನ  ಜೈಲಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದ್ದಾರೆ. ತೆರಿಗೆ ವಂಚನೆ ಪ್ರಕರಣದಲ್ಲಿ ಅಮೆರಿಕಾಗೆ ಅವರು ಬೇಕಾಗಿದ್ದರಿಂದ ಅವರನ್ನು ಅಲ್ಲಿಗೆ ಗಡೀಪಾರುಗೊಳಿಸಲು ನ್ಯಾಯಾಲಯವೊಂದು ಅನುಮೋದನೆ ನೀಡಿದ ಬೆನ್ನಿಗೇ ಈ ಬೆಳವಣಿಗೆ ನಡೆದಿದೆ.

ಎಪ್ಪತ್ತೈದು ವರ್ಷದ  ಜಾನ್ ಅವರು  ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯಿದೆ ಎಂದು ಅವರಿದ್ದ ಬಾರ್ಸಿಲೋನಾ ಸಮೀಪದ ಬ್ರಿಯಾನ್ಸ್ 2 ಜೈಲಿನ ಅಧಿಕಾರಿಗಳು ಹೇಳಿದ್ದಾರೆ.

ಇಸ್ತಾಂಬುಲ್ ಗೆ ತೆರಳಲೆಂದು ವಿಮಾನ ಹತ್ತುವ ಸಂದರ್ಭ ಅಕ್ಟೋಬರ್ 2020ರಲ್ಲಿ ಜಾನ್ ಮೆಕಾಫೀ ಅವರನ್ನು ಬಾರ್ಸಿಲೋನಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.  ತಮ್ಮ ಕನ್ಸಲ್ಟೆನ್ಸಿ ಕೆಲಸ, ಕ್ರಿಪ್ಟೋಕರೆನ್ಸಿ ಹಾಗೂ ತಮ್ಮ ಜೀವನ ವೃತ್ತಾಂತದ  ಕುರಿತ ಹಕ್ಕುಗಳ ಮಾರಾಟದಿಂದ ಅವರು 10 ಮಿಲಿಯನ್ ಯುರೋ (12 ಮಿಲಿಯನ್ ಡಾಲರ್)ಹಣ ಸಂಪಾದಿಸಿದ್ದರೂ 2014 ಹಾಗೂ 2018 ನಡುವೆ ತೆರಿಗೆ ರಿಟರ್ನ್ಸ್ ಅನ್ನು ಉದ್ದೇಶಪೂರ್ವಕವಾಗಿ ಅವರು ಪಾವತಿಸಿರಲಿಲ್ಲವೆಂದು ಆರೋಪಿಸಲಾಗಿದೆ.‌

 ತೆರಿಗೆ ತಪ್ಪಿಸಲು ಅವರು ಬೇನಾಮಿ ಹೆಸರಿನಲ್ಲಿ ಆಸ್ತಿ ವರ್ಗಾಯಿಸಿದ್ದರೆನ್ನಲಾಗಿದೆ. ಅವರು ತಪ್ಪಿತಸ್ಥರೆಂದು ನ್ಯಾಯಾಲಯ ಒಂದು ವೇಳೆ ಘೋಷಿಸಿದ್ದರೆ ಅವರಿಗೆ 30 ವರ್ಷ ತನಕ ಜೈಲು ಶಿಕ್ಷೆಯಾಗುತ್ತಿತ್ತು.

ಬುಧವಾರವಷ್ಟೇ ಸ್ಪೇನ್‍ನ ನ್ಯಾಷನಲ್ ಕೋರ್ಟ್ ಅವರನ್ನು ಅಮೆರಿಕಾಗೆ ಗಡೀಪಾರುಗೊಳಿಸಲು ಅನುಮೋದನೆ ನೀಡಿತ್ತು. ಇದರ ವಿರುದ್ಧ ಅವರು  ಅಪೀಲು ಸಲ್ಲಿಸಲು ಅವಕಾಶವಿತ್ತು.

ಎಂಬತ್ತರ ದಶಕದಲ್ಲಿ ಆ್ಯಂಟಿ-ವೈರಸ್ ಸಾಫ್ಟ್ ವೇರ್ ಮೆಕಾಫೀ ಮೂಲಕ ಸಾಕಷ್ಟು ಹಣ ಗಳಿಸಿದ್ದ ಅವರು  ನಂತರ ಸ್ವಘೋಷಿತ ಕ್ರಿಪ್ಟೋ ಕರೆನ್ಸಿ ಗುರು ಆಗಿದ್ದರಲ್ಲದೆ ಟ್ವಿಟ್ಟರ್‍ನಲ್ಲಿ ಅವರಿಗೆ 10 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News