ಟ್ವಿಟರ್ ಇಂಡಿಯಾ ಮುಖ್ಯಸ್ಥ ಮನೀಷ್ ಮಹೇಶ್ವರಿಗೆ ಕರ್ನಾಟಕ ಹೈಕೋರ್ಟ್ ನಿರೀಕ್ಷಣಾ ಜಾಮೀನು

Update: 2021-06-24 12:09 GMT
photo: facebook

ಹೊಸದಿಲ್ಲಿ: ಕರ್ನಾಟಕ ಹೈಕೋರ್ಟ್‌ನ ಆದೇಶದ ಮೇರೆಗೆ ಟ್ವಿಟರ್ ಇಂಡಿಯಾ ಮುಖ್ಯಸ್ಥ ಮನೀಶ್ ಮಹೇಶ್ವರಿ ಅವರಿಗೆ ಉತ್ತರ ಪ್ರದೇಶ ಪೊಲೀಸರ ಬಂಧನದಿಂದ ತಾತ್ಕಾಲಿಕ ರಕ್ಷಣೆ ನೀಡಲಾಗಿದೆ. ಹಲ್ಲೆ ಕುರಿತ ಟ್ವೀಟ್‌ಗಳ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ  ಆ ರಾಜ್ಯಕ್ಕೆ ಪ್ರಯಾಣಿಸಬೇಕಾಗಿಲ್ಲ ಎಂದು ಹೇಳಿದೆ.

ಮಹೇಶ್ವರಿ ವಿರುದ್ಧ "ಯಾವುದೇ ಬಲವಂತದ ಕ್ರಮ ಕೈಗೊಳ್ಳಲಾಗುವುದಿಲ್ಲ" ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

ನ್ಯಾಯಮೂರ್ತಿ ಜಿ. ನರೇಂದರ್ ಅವರ ಏಕ-ನ್ಯಾಯಾಧೀಶರ ಪೀಠವು "ಈ ವಿಷಯವನ್ನು ಮತ್ತಷ್ಟು ಪರಿಗಣಿಸುವ ಅಗತ್ಯವಿದೆ" ಹಾಗೂ ಜೂನ್ 29 ರವರೆಗೆ ಆದೇಶಗಳನ್ನು ಕಾಯ್ದಿರಿಸಲಾಗಿದೆ. ಅಲ್ಲಿಯವರೆಗೆ ಉತ್ತರಪ್ರದೇಶ ಪೊಲೀಸರು ಬಂಧಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ನರೇಂದರ್ ಹೇಳಿದರು.

ಗಾಝಿಯಾಬಾದ್ ವೃದ್ದರೊಬ್ಬರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಪೊಲೀಸರ ಸಮನ್ಸ್ ಪ್ರಶ್ನಿಸಿರುವ  ಟ್ವಿಟರ್ ಇಂಡಿಯಾ ಮುಖ್ಯಸ್ಥ ಮನೀಷ್  ಮಹೇಶ್ವರಿ ಯಾವುದೇ ಆರೋಪಕ್ಕೂ ನನಗೂ  ಯಾವುದೇ ಸಂಬಂಧವಿಲ್ಲ ... ಕೆಲವು ಆರೋಪಿಗಳು ವೀಡಿಯೊ ಅಪ್‌ಲೋಡ್ ಮಾಡಿದ್ದಾರೆ. ಆದರೆ ಪೊಲೀಸರು ನನ್ನ ವಿರುದ್ಧ ಎಫ್ಐಆರ್ ನೋಂದಾಯಿಸಿದ್ದಾರೆ ಎಂದು ಕರ್ನಾಟಕ ಹೈಕೋರ್ಟ್ ಗೆ ಗುರುವಾರ ತಿಳಿಸಿದ್ದಾರೆ.

 “ಎರಡೇ ದಿನಗಳಲ್ಲಿ, ಪೊಲೀಸರಿಂದ ನನಗೆ ಬಂದಿರುವ ನೋಟಿಸ್ ನಲ್ಲಿ  ನನ್ನನ್ನು ಸಾಕ್ಷಿಯಿಂದ ಆರೋಪಿಯಾಗಿ ಬದಲಾಯಿಸಲಾಗಿದೆ. ಜೂನ್ 17 ರಂದು ಗಾಝಿಯಾಬಾದ್ ಪೊಲೀಸರು ಸಾಕ್ಷಿಯಾಗಿ ನೋಟಿಸ್ ಕಳುಹಿಸಿದ್ದಾರೆ (ಕ್ರಿಮಿನಲ್ ಪ್ರಕ್ರಿಯೆ ಸಂಹಿತೆಯ ಸೆಕ್ಷನ್ 160 ರ ಅಡಿಯಲ್ಲಿ) ಆದರೆ, ಎರಡು ದಿನಗಳ ನಂತರ, ಅವರು ಕಳುಹಿಸಿದ ಮತ್ತೊಂದು ನೋಟಿಸ್ ನಲ್ಲಿ  ನನ್ನನ್ನು ಆರೋಪಿಯನ್ನಾಗಿಸಲಾಗಿತ್ತು ಎಂದು ನ್ಯಾಯಾಲಯಕ್ಕೆ ಮಹೇಶ್ವರಿ ತಿಳಿಸಿದರು.

"ನಾನು ಬೆಂಗಳೂರಿನಲ್ಲಿದ್ದೇನೆ, .ಪೊಲೀಸರು ಇಮೇಲ್ ಮೂಲಕ ನೋಟಿಸ್ ಕಳುಹಿಸಿದ್ದಾರೆ. ನಾನು ಗಾಝಿಯಾಬಾದ್‌ಗೆ ಬರುವ ಸ್ಥಿತಿಯಲ್ಲಿಲ್ಲ. ಆನ್‌ಲೈನ್ ಮೂಲಕ ವಿಚಾರಣೆಗೆ  ಹಾಜರಾಗುವುದಾಗಿ ತಿಳಿಸಿದ್ದೇನೆ. ಆದರೆ ಪೊಲೀಸರು ನಾನು ಸ್ವತಃ ಹಾಜರಾಗುವುದನ್ನು  ಬಯಸುತ್ತಾರೆ" ಎಂದು ಮಹೇಶ್ವರಿ ತಿಳಿಸಿದರು.

ಗಾಝಿಯಾಬಾದ್ ಪೊಲೀಸರು ಮಹೇಶ್ವರಿಯವರನ್ನು ವಿಚಾರಣೆಗೆ ಕರೆದ ನಂತರ ಜೂನ್ 23 ರಂದು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಲಾಯಿತು. ಪೊಲೀಸರ ಮುಂದೆ ಹಾಜರಾಗಲು ಹಾಗೂ  ಹೇಳಿಕೆಯನ್ನು ದಾಖಲಿಸಲು ಮಹೇಶ್ವರಿಗೆ ಏಳು ದಿನಗಳ ಕಾಲಾವಕಾಶ ನೀಡಲಾಗಿತ್ತು.,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News