ಕುಂಭ ಕೋವಿಡ್ ಪರೀಕ್ಷಾ ಹಗರಣದ ಕೇಂದ್ರಬಿಂದುವಾದ ಸಂಸ್ಥೆಗೆ ಬಿಜೆಪಿಯೊಂದಿಗೆ ನಂಟು

Update: 2021-06-24 17:31 GMT

ಮುಂಬೈ, ಜೂ.24: ಹರಿದ್ವಾರದಲ್ಲಿ ನಡೆದ ಕುಂಭಮೇಳದ ಸಂದರ್ಭ ಸುಮಾರು ಒಂದು ಲಕ್ಷ ನಕಲಿ ಕೋವಿಡ್ ಪರೀಕ್ಷೆಗಳನ್ನು ನಡೆಸಿದ್ದ ಆರೋಪಿಯಾಗಿರುವ ಮ್ಯಾಕ್ಸ್ ಕಾರ್ಪೊರೇಟ್ ಸರ್ವಿಸಿಸ್ ಆಡಳಿತ ಬಿಜೆಪಿಯೊಂದಿಗೆ ನಂಟು ಹೊಂದಿದೆ ಮತ್ತು ಮೊದಲು ಅನರ್ಹವಾಗಿದ್ದರೂ ನಂತರ ಅದನ್ನು ಉತ್ತರಾಖಂಡ ಅಧಿಕಾರಿಗಳು ಆಯ್ಕೆ ಮಾಡಿದ್ದರಲ್ಲಿ ಈ ನಂಟು ಪ್ರಮುಖ ಪಾತ್ರ ವಹಿಸಿರಬಹುದು ಎಂದು ಸುದ್ದಿ ಜಾಲತಾಣ The Wire ತನ್ನ ತನಿಖಾ ವರದಿಯಲ್ಲಿ ಬಹಿರಂಗಗೊಳಿಸಿದೆ.

The Wire  ಬಳಿಯಲ್ಲಿರುವ ಸಾಕ್ಷಾಧಾರಗಳು ಕಂಪನಿಯ ಸ್ಥಾಪಕ-ಪಾಲುದಾರ ಶರತ್ ಪಂತ್ ಅವರು ಪರೀಕ್ಷೆಯ ಗುತ್ತಿಗೆ ಪಡೆಯುವ ಮುನ್ನ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಪಕ್ಷದ ಹಿರಿಯ ನಾಯಕರು ಮತ್ತು ಮೋದಿ ಸರಕಾರದ ಸಚಿವರೊಂದಿಗೆ ಒಡನಾಟದಲ್ಲಿದ್ದರು ಎನ್ನುವುದನ್ನು ಬೆಟ್ಟು ಮಾಡುತ್ತಿವೆ. ಮಲ್ಲಿಕಾ ಪಂತ್ ಕಂಪನಿಯ ಇನ್ನೋರ್ವ ಸ್ಥಾಪಕ-ಪಾಲುದಾರರಾಗಿದ್ದಾರೆ.

ಪಂತ್ ಅವರ ಕುಟುಂಬವೂ ಬಿಜೆಪಿಯೊಂದಿಗೆ ನಂಟು ಹೊಂದಿದೆ. ಪಂತ್ ಸೋದರಮಾವ ಭೂಪೇಶ ಜೋಶಿ ಅವರು ಮಾಜಿ ಕೇಂದ್ರ ಸಚಿವ ದಿ.ಅನಂತ ಕುಮಾರ ಅವರ ನಿಕಟ ಸಹಾಯಕರಾಗಿದ್ದರು. ಅನಂತ ಕುಮಾರ ಜೊತೆಗೆ ಕೆಲಸ ಮಾಡಿದ್ದನ್ನು ದೃಢಪಡಿಸಿರುವ ಅವರು ಈಗಲೂ ತಾನು ಕೇಂದ್ರ ಸಂಪುಟದೊಂದಿಗೆ ಮುಂದುವರಿದಿದ್ದೇನೆ ಎಂದು ತಿಳಿಸಿದರಾದರೂ ತನ್ನ ಹುದ್ದೆಯನ್ನು ಬಹಿರಂಗಗೊಳಿಸಲಿಲ್ಲ. ಹಿರಿಯ ನಾಯಕರೊಂದಿಗೆ ತಾನು ನಿಕಟವಾಗಿರುವುದಕ್ಕೂ ಪಂತ್ ಗುತ್ತಿಗೆಯನ್ನು ಪಡೆದಿರುವುದಕ್ಕೂ ಸಂಬಂಧವಿಲ್ಲ ಎಂದು ಅವರು ಒತ್ತಿ ಹೇಳಿದರು.

 ಜನವರಿಯಲ್ಲಿ ಕುಂಭಮೇಳ ಆಡಳಿತವು ಉತ್ತರಾಖಂಡ ಸರಕಾರದ ಮೂಲಕ ಕುಂಭಮೇಳದಲ್ಲಿ ಸಾಮೂಹಿಕ ಕೋವಿಡ್ ಲಸಿಕೆ ನೀಡಿಕೆಯ ಗುತ್ತಿಗೆಗಾಗಿ ಆಸಕ್ತರಿಂದ ಪ್ರಸ್ತಾವಗಳನ್ನು ಆಹ್ವಾನಿಸಿತ್ತು. ಈ ಪ್ರಕ್ರಿಯೆ ಜಾರಿಯಲ್ಲಿರುವಾಗ ಪಂತ್ ನಡ್ಡಾ,ಕೇಂದ್ರ ಸಚಿವರಾದ ರಮೇಶ ಪೋಖ್ರಿಯಾಲ್ ನಿಷಾಂಕ್ ಮತ್ತು ಸ್ಮತಿ ಇರಾನಿ ಸೇರಿದಂತೆ ಹಲವಾರು ಹಿರಿಯ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದರು. ಈ ನಾಯಕರೊಂದಿಗೆ ಭೇಟಿಯ ಚಿತ್ರಗಳನ್ನು ಪಂತ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು.

ತನ್ಮಧ್ಯೆ ಲಸಿಕೆ ನೀಡಿಕೆಯ ಗುತ್ತಿಗೆಯನ್ನು ಪಡೆಯಲು ನಿಗದಿತ ಮಾನದಂಡಗಳನ್ನು ಹೊಂದಿಲ್ಲ ಎಂಬ ಕಾರಣಕ್ಕೆ ಪಂತ್ ಅವರ ಕಂಪನಿಯು ಸಲ್ಲಿಸಿದ್ದ ಪ್ರಸ್ತಾವವನ್ನು ಜಿಲ್ಲಾಡಳಿತವು ತಿರಸ್ಕರಿಸಿತ್ತು.
  
ಮಾ.9ರಂದು ನಿಗೂಢ ಸನ್ನಿವೇಶದಲ್ಲಿ ತ್ರಿವೇಂದ್ರ ಸಿಂಗ್ ರಾವತ್ ಅವರು ಉತ್ತರಾಖಂಡ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು ಮತ್ತು ಮರುದಿನವೇ ತೀರ್ಥ ಸಿಂಗ್ ರಾವತ್ರನ್ನು ನೂತನ ಮುಖ್ಯಮಂತ್ರಿಯನ್ನಾಗಿ ಬಿಜೆಪಿ ಘೋಷಿಸಿತ್ತು. ಅದೇ ದಿನ ಪಂತ್ ನೂತನ ಮುಖ್ಯಮಂತ್ರಿಗಳನ್ನು ಅಭಿನಂದಿಸಿ ಅವರ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು. ಜಿಲ್ಲಾಡಳಿತದಿಂದ ಪಂತ್ ಅವರ ಕಂಪನಿ ಮ್ಯಾಕ್ಸ್ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡ 15 ದಿನಗಳ ಬಳಿಕ ಅಂತಹುದೇ ಪ್ರಸ್ತಾವವನ್ನು ಕುಂಭಮೇಳ ಆಡಳಿತಕ್ಕೆ ಸಲ್ಲಿಸಿದ್ದರು. ಈ ಪ್ರಸ್ತಾವವನ್ನು ಜಿಲ್ಲಾಡಳಿತವನ್ನು ತಪ್ಪಿಸಿ ನೇರವಾಗಿ ರಾಜ್ಯ ಸರಕಾರದ ಮುಂದಿರಿಸಲಾಗಿತ್ತು ಮತ್ತು ಮಾ.16ರಂದು ಪಂತ್ ಕಂಪನಿ ಮ್ಯಾಕ್ಸ್ಗೆ ಗುತ್ತಿಗೆ ಮಂಜೂರಾಗಿತ್ತು.

ಮ್ಯಾಕ್ಸ್ ಗುತ್ತಿಗೆಯನ್ನು ಪಡೆದುಕೊಂಡ ಬೆನ್ನಿಗೇ ಹೇಗೆ ಅವ್ಯವಹಾರಗಳು ಆರಂಭಗೊಂಡಿದ್ದವು ಎನ್ನುವುದನ್ನು ಹರಿದ್ವ್ವಾರ ಜಿಲ್ಲಾಡಳಿತವು ಆದೇಶಿಸಿರುವ ತನಿಖೆಯು ಬಹಿರಂಗಗೊಳಿಸಿದೆ. ಮ್ಯಾಕ್ಸ್ಗೆ ಗುತ್ತಿಗೆಯನ್ನು ನೀಡುವಾಗ ನಿಯಮಗಳನ್ನು ಉಲ್ಲಂಘಿಸಲಾಗಿತ್ತು ಎಂದು ತನಿಖಾಧಿಕಾರಿ ತಿಳಿಸಿದರು.
 
ಮ್ಯಾಕ್ಸ್ ತಾನು ನಡೆಸಿರುವುದಾಗಿ ಹೇಳಿಕೊಂಡಿರುವ ಎಲ್ಲ ಕೋವಿಡ್ ಪರೀಕ್ಷೆಗಳ ಸಂಪರ್ಕ ವಿವರಗಳನ್ನು ತನಿಖಾ ತಂಡವು ಈಗ ಪರಿಶೀಲಿಸುತ್ತಿದೆ. ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಹೊಂದಿರುವ ಪಂತ್ ಮುಂದಿನ ವರ್ಷದ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಹವಣಿಸುತ್ತಿದ್ದಾರೆ ಎಂದು ಅವರ ಸಂಬಂಧಿಯೋರ್ವರು ತಿಳಿಸಿದರು. ಪಂತ್ ಅಲ್ಮೋರಾ ಜಿಲ್ಲೆಯ ದ್ವಾರಹಾಟ್ ನಿವಾಸಿಯಾಗಿದ್ದು,ಈ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ಮಹೇಶಸಿಂಗ ನೇಗಿ ಅತ್ಯಾಚಾರದ ಆರೋಪವನ್ನು ಎದುರಿಸುತ್ತಿದ್ದಾರೆ.

ಕೋವಿಡ್ ಪರೀಕ್ಷೆ ಹಗರಣವು ಪಂತ್ಗೆ ಹಾನಿಯನ್ನುಂಟು ಮಾಡುವ ಸಾಧ್ಯತೆಯಿಲ್ಲ,ಅವರ ಹಿಂದೆ ಬಿಜೆಪಿಯ ‘ದೊಡ್ಡ’ನಾಯಕರಿದ್ದಾರೆ. ಅವರಿಗೆ ಖಂಡಿತ ಬಿಜೆಪಿ ಟಿಕೆಟ್ ಸಿಗುತ್ತದೆ ಎಂದು ಅವರನ್ನು ನಿಕಟವಾಗಿ ಬಲ್ಲ ಸ್ಥಳೀಯ ಮೂಲವೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News