×
Ad

"ಸ್ಥಳೀಯರಿಗೆ ನಾವು ಧ್ವನಿಯಾಗಬೇಕು": ಟಾಯ್ಕಥಾನ್ 2021ರಲ್ಲಿ ಪ್ರಧಾನಿ ಮೋದಿ ಹೇಳಿಕೆ

Update: 2021-06-24 23:22 IST

ಹೊಸದಿಲ್ಲಿ, ಜೂ.೨೪: ಗುರುವಾರ ಆಯೋಜಿಸಲಾದ ಟಾಯ್ಕಥಾನ್ 2021ರಲ್ಲಿ ಪಾಲ್ಗೊಂಡಿದ್ದವರ ಜತೆ ಸಂವಾದ ನಡೆಸಿದ ಪ್ರಧಾನಿ ಮೋದಿ , ಸ್ಥಳೀಯ ಆಟಿಕೆಗಳಿಗೆ ಪ್ರೋತ್ಸಾಹ ನೀಡುವಂತೆ ಆಟಿಕೆ ಉದ್ಯಮಕ್ಕೆ ಕರೆ ನೀಡಿದರು.

ಭಾರತವು 80% ಆಟಿಕೆಗಳನ್ನು ಆಮದು ಮಾಡಿಕೊಳ್ಳುತ್ತಿದ್ದು ಇದರಿಂದ ಕೋಟ್ಯಾಂತರ ರೂಪಾಯಿ ಹಣ ದೇಶದಿಂದ ಹೊರಹೋಗುತ್ತಿದೆ. ಈಗ ಈ ಸ್ಥಿತಿಯನ್ನು ಬದಲಾಯಿಸಬೇಕಿದೆ. ಸುಮಾರು 100 ಬಿಲಿಯನ್ ಡಾಲರ್ ಜಾಗತಿಕ ಆಟಿಕೆ ಮಾರುಕಟ್ಟೆಯಲ್ಲಿ ಭಾರತದ ಪಾಲು ಕೇವಲ 1.5 ಬಿಲಿಯನ್ ಡಾಲರ್. ಮಗುವಿನ ಮೊದಲ ಪಾಠಶಾಲೆ ಕುಟುಂಬ ಅಥವಾ ಮನೆ. ಪ್ರಥಮ ಪುಸ್ತಕ ಮತ್ತು ಸ್ನೇಹಿತನೆಂದರೆ ಆಟಿಕೆ. ಆಸಕ್ತಿದಾಯಕ ಮತ್ತು ಸಂವಾದಾತ್ಮಕ ರೀತಿಯಲ್ಲಿ ಭಾರತೀಯತೆಯ ಎಲ್ಲಾ ದೃಷ್ಟಿಕೋನಗಳನ್ನು ಹೊಂದಿರುವ ಆಟಿಕೆ, ಗೇಮ್ಸ್ಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ನೀಡಬೇಕು ಎಂದು ಮೋದಿ ಹೇಳಿದರು.

ಭಾರತದ ಸಾಮರ್ಥ್ಯ, ಕಲೆ, ಸಂಸ್ಕೃತಿ, ಸಮಾಜವನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ಅರಿತುಕೊಳ್ಳಲು ಜಗತ್ತು ಬಯಸಿದೆ. ನಮ್ಮ ಆಟಿಕೆ ಮತ್ತು ಗೇಮಿಂಗ್ ಉದ್ಯಮ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಬಹುದು. ಈಗ ಮಾರುಕಟ್ಟೆಯಲ್ಲಿ ಲಭಿಸುವ ಬಹುತೇಕ ಆಟಿಕೆ ಮತ್ತು ಗೇಮ್ಸ್ಗಳಲ್ಲಿ ಭಾರತೀಯತೆಯ ಲಕ್ಷಣಗಳಿಲ್ಲ. ಹಿಂಸೆ ಅಥವಾ ಮಾನಸಿಕ ಒತ್ತಡ ಹೆಚ್ಚಿಸುವುದೇ ಹೆಚ್ಚಿನ ಆನ್ಲೈನ್ ಗೇಮ್ಸ್ ಗಳ ಪರಿಕಲ್ಪನೆಯಾಗಿದೆ.  ಆದ್ದರಿಂದ ನಮ್ಮ ಸ್ಥಳೀಯ ಆಟಿಕೆಗಳ ಮೂಲಕ ಪಾರಂಪರಿಕ ಜ್ಞಾನವನ್ನು ಜಗತ್ತಿಗೆ ಪರಿಚಯಿಸಲು ಪ್ರೋತ್ಸಾಹ ನೀಡಬೇಕು ಎಂದು ಪ್ರಧಾನಿ ಹೇಳಿದರು.

ಜನರಿಂದ ಆಟಿಕೆ ಮತ್ತು ಗೇಮಿಂಗ್ನಲ್ಲಿ ಹೊಸ ಆವಿಷ್ಕಾರ, ನಾವೀನ್ಯತೆಯ ಬಗ್ಗೆ ಸಲಹೆ ಪಡೆಯುವ ನಿಟ್ಟಿನಲ್ಲಿ ಶಿಕ್ಷಣ , ಜವಳಿ, ಎಂಎಸ್ಎಇ, ಮಾಹಿತಿ ಮತ್ತು ಪ್ರಸಾರ ಇಲಾಖೆಗಳು ಹಾಗೂ ಇತರ ಕೆಲವು ಸಂಘಟನೆಗಳ ಸಹಭಾಗಿತ್ವದಲ್ಲಿ ಟಾಯ್ಕಥಾನ್ 2021ಕ್ಕೆ  ಜನವರಿ ೫ರಂದು ಚಾಲನೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News