×
Ad

ಪ್ರಸ್ತಾವಿತ ಕಾಯ್ದೆ ಲಕ್ಷದ್ವೀಪದ ಸಂಸ್ಕೃತಿಗೆ ವಿರುದ್ಧವಾಗಿದೆ: ರಾಷ್ಟ್ರಪತಿಗೆ ವಿಜ್ಞಾನಿಗಳ ಪತ್ರ

Update: 2021-06-24 23:40 IST

ತಿರುವನಂತಪುರ, ಜೂ.24: ಪ್ರಸ್ತಾವಿತ ಲಕ್ಷದ್ವೀಪ ಅಭಿವೃದ್ಧಿ ಪ್ರಾಧಿಕಾರ ನಿಯಂತ್ರಣ ಕಾಯ್ದೆ 2021(ಎಲ್ಡಿಎಆರ್) ಅತ್ಯಂತ ಸಮಸ್ಯಾತ್ಮಕವಾಗಿದ್ದು, ಲಕ್ಷದ್ವೀಪದ ಪರಿಸರ ವಿಜ್ಞಾನ, ಜೀವನಾಧಾರ ಮತ್ತು ಸಂಸ್ಕೃತಿಯ  ರಕ್ಷಣೆಗಾಗಿನ ಈಗಿನ ಕಾನೂನು ಪ್ರಕ್ರಿಯೆಗೆ ವಿರುದ್ಧವಾಗಿದೆ ಎಂದು  ವಿವಿಧ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ವಿಜ್ಞಾನಿಗಳ ತಂಡ ರಾಷ್ಟ್ರಪತಿಗೆ ಪತ್ರ ಬರೆದಿದೆ ಎಂದು ಮೂಲಗಳು ಹೇಳಿವೆ.

ಲಕ್ಷದ್ವೀಪದಲ್ಲಿ ಹಲವು ವರ್ಷ ಕಾರ್ಯನಿರ್ವಹಿಸಿದ ವಿಜ್ಞಾನಿಗಳ ತಂಡ ಇದಾಗಿದೆ.  ರಾಷ್ಟ್ರಪತಿ ಮಧ್ಯಪ್ರವೇಶಿಸಿ ಪ್ರಸ್ತಾವಿತ ಕಾನೂನನ್ನು ಹಿಂಪಡೆಯುವಂತೆ ಸೂಚಿಸಬೇಕು ಎಂದು ಕೋರಿ ಬರೆದ ಪತ್ರಕ್ಕೆ 60 ಇತರ ವಿಜ್ಞಾನಿಗಳೂ ಸಹಿ ಹಾಕಿದ್ದಾರೆ ಎಂದು ಲಕ್ಷದ್ವೀಪ ರಿಸರ್ಚ್ ಕಲೆಕ್ಟಿವ್ ಹೇಳಿದೆ. ಎಲ್ಡಿಎಆರ್ ನ ಅಂತರಾರ್ಥದ ಕೂಲಂಕುಷ ಪರಿಶೀಲನೆ ನಡೆಸಿದ್ದೇವೆ. ಸ್ಥಳೀಯರ ಜಮೀನು ಸ್ವಾಧೀನಕ್ಕೆ ಅವಕಾಶ ಮಾಡುವ ಈ ಕಾಯ್ದೆ, ಈಗ ಇರುವ ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ವ್ಯವಸ್ಥೆ ಕಾಯ್ದೆ 2013, ಜೈವಿಕ ವೈವಿಧ್ಯತೆ ಕಾಯ್ದೆ 2002, ಪರಿಸರ ಸಂರಕ್ಷಣೆ ಕಾಯ್ದೆ 1986 ಕ್ಕೆ  ಹೊಂದಿಕೆಯಾಗುವುದಿಲ್ಲ.

ಅಲ್ಲದೆ ಸುಪ್ರೀಂಕೋರ್ಟ್ ನೇಮಿಸಿದ ನ್ಯಾ. ರವೀಂದ್ರನ್ ಸಮಿತಿ 2015ರ ಅಕ್ಟೋಬರ್ 23ರಂದು ನೀಡಿದ್ದ  ಶಿಫಾರಸು ಮತ್ತು ಸಲಹೆಗಳಿಗೆ, ಲಕ್ಷದ್ದೀಪ ಪಂಚಾಯತ್ಗಳ ನಿಯಂತ್ರಣ ಕಾಯ್ದೆ 1994ಕ್ಕೆ ವಿರುದ್ಧವಾಗಿದೆ. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಯ ಬಗ್ಗೆ ಭಾರತದ ಬದ್ಧತೆಯನ್ನು, 2019ರ ಜೈವಿಕ ವೈವಿಧ್ಯತೆ ಮತ್ತು ಪರಿಸರ ಪ್ರವಾಸೋದ್ಯಮ ಮಾರ್ಗಸೂಚಿಗಳ ಸಮಾವೇಶದಲ್ಲಿ ಅಂಗೀಕರಿಸಲಾದ ಸಮುದ್ರ ರಕ್ಷಣೆಯ ಉದ್ದೇಶವನ್ನು ಎಲ್ಡಿಎಆರ್ ಒಳಗೊಂಡಿಲ್ಲ.

ಜೀವಂತ ಹವಳ ವ್ಯವಸ್ಥೆಯ ಭಾಗವಾಗಿರುವ ಲಕ್ಷದ್ವೀಪ ಹವಾಮಾನ ಬದಲಾವಣೆಯ ಆಘಾತಕ್ಕೆ ಒಳಗಾಗುವ ಭೀತಿಯಲ್ಲಿದೆ. ಶಿಲಾ ಭಿತ್ತಿ ಸವೆಯುವ ಮೂಲಕ ಹವಳದ ಜೀವಸಂತತಿ ವಿನಾಶದತ್ತ ಸಾಗುತ್ತಿದ್ದು ಲಕ್ಷದ್ವೀಪದ ರಾಜಧಾನಿ ಕವರತ್ತಿಯಲ್ಲಿ ಶಿಲಾಭಿತ್ತಿಗಳು ಕ್ಷಿಪ್ರವಾಗಿ ಸವೆಯುತ್ತಿವೆ. ಲಕ್ಷದ್ವೀಪವು ಪರಿಸರ ಸೂಕ್ಷ್ಮ ಪ್ರದೇಶ ಮಾತ್ರವಲ್ಲ, ಪ್ರಗತಿಶೀಲ ಸಮಾಜವೂ ಆಗಿರುವುದರಿಂದ ಸುಸ್ಥಿರ ಅಭಿವೃದ್ಧಿಯ ರೂಪುರೇಷೆಯ ಅಗತ್ಯವಿದೆ. ಲಕ್ಷದ್ವೀಪದಲ್ಲಿ ಭೂಮಿ, ಹಿನ್ನೀರು ಮತ್ತು ಶಿಲಾಭಿತ್ತಿಗಳು ಒಂದಕ್ಕೊಂದು ಜೋಡಣೆಯಾಗಿರುವುದನ್ನು ಗಮನಿಸಿದರೆ, ಎಲ್ಡಿಎಆರ್ನಲ್ಲಿ ಸೂಚಿಸಿದ ಪ್ರಗತಿಯ ಪರಿಕಲ್ಪನೆ ವಿನಾಶಕಾರಿಯಾಗಿದೆ ಎಂದು `ನೇಚರ್ ಕನ್ಷರ್ವೇಷನ್ ಫೌಂಡೇಷನ್'ನ ಹಿರಿಯ ವಿಜ್ಞಾನಿ ರೋಹನ್ ಆರ್ಥರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News