ಅಫ್ಘಾನ್ ನಿರಾಶ್ರಿತೆಯಾಗಿದ್ದ ನಾದಿಯಾ ನದೀಂ ಈಗ ಡೆನ್ಮಾರ್ಕ್‍ನ ಅತ್ಯಂತ ಪ್ರಭಾವಿ ಫುಟ್ಬಾಲ್ ಆಟಗಾರ್ತಿ

Update: 2021-06-25 12:32 GMT
Photo: Theguardian

ಹೊಸದಿಲ್ಲಿ: ಒಂದೊಮ್ಮೆ ಅಫ್ಘಾನ್ ನಿರಾಶ್ರಿತೆಯಾಗಿದ್ದ ಹಾಗೂ ಈಗ ಡೆನ್ಮಾರ್ಕ್ ಪರವಾಗಿ ಆಡುತ್ತಿರುವ 33 ವರ್ಷದ ಫುಟ್ಬಾಲ್ ಆಟಗಾರ್ತಿ ನಾದಿಯಾ ನದೀಂ ಅವರು ಹಲವು ಸವಾಲುಗಳನ್ನು ಹಿಮ್ಮೆಟ್ಟಿಸಿ ಯಶಸ್ಸಿನ ಪಥದಲ್ಲಿ  ಹೆಜ್ಜೆಯಿರಿಸಿದವರು. ಆಕೆಯ ಜೀವನಗಾಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

2020-21 ಸೀಸನ್‍ನ ಫ್ರೆಂಚ್ ಲೀಗ್ ಪಂದ್ಯಾವಳಿಯನ್ನು ಪ್ಯಾರಿಸ್ ಸೈಂಟ್-ಜರ್ಮೈನ್  ಅವರ ಜತೆಗೆ ಗೆದ್ದ ನಂತರ ಆಕೆ  ಅತ್ಯಂತ ಪ್ರಭಾವಿ ಫುಟ್ಬಾಲ್ ಆಟಗಾರ್ತಿ ಎಂದು ಪರಿಗಣಿತರಾಗಿದ್ದಾರೆ.

ಜನವರಿ 2, 1988ರಂದು ಅಫ್ಘಾನಿಸ್ತಾನದ ಹೀರತ್ ನಲ್ಲಿ ಜನಿಸಿದ ನಾಡಿಯಾ, ಅವರು 11 ವರ್ಷದವರಿರುವಾಗ ಅಫ್ಘಾನ್ ಸೇನೆಯಲ್ಲಿ ಜನರಲ್ ಆಗಿದ್ದ ಅವರ ತಂದೆಯನ್ನು ತಾಲಿಬಾನಿಗಳು ಹತ್ಯೆಗೈದಿದ್ದರು. ತಾಯಿ ಹಾಗೂ ನಾಲ್ಕು ಸಹೋದರಿಯರೊಂದಿಗೆ ಆಕೆ ಫೋರ್ಜರಿ ಮಾಡಲ್ಪಟ್ಟ ಪಾಸ್‍ಪೋರ್ಟ್ ಗಳೊಂದಿಗೆ ಅಫ್ಘಾನಿಸ್ತಾನದಿಂದ ಪಾಕಿಸ್ತಾನಕ್ಕೆ ಪರಾರಿಯಾಗಿದ್ದರು. ಮುಂದೆ ಅವರ ಕುಟುಂಬ ಯುರೋಪ್‍ಗೆ ವಲಸೆ ಹೋಗಿತ್ತು.

"ಲಂಡನ್‍ನಲ್ಲಿ ಕೆಲ ಸಂಬಂಧಿಗಳಿರುವುದರಿಂದ ನಾವು ಅಲ್ಲಿಗೆ ಹೋಗಬೇಕೆಂದು ಬಯಸಿದ್ದೆವು ಆದರೆ ಪಾಕ್ ಮೂಲಕ ನಾವು ಇಟಲಿಗೆ ಬಂದೆವು," ಎಂದು ಆಕೆ ತಮ್ಮ ವೆಬ್‍ಸೈಟ್‍ನಲ್ಲಿ ಬರೆದುಕೊಂಡಿದ್ದಾರೆ.

"ಅಲ್ಲಿಂದ ನಮ್ಮ ಕುಟುಂಬ ಲಂಡನ್ ಗೆ ಹೋಗುವುದೆಂದು ಟ್ರಕ್ ಒಂದರಲ್ಲಿ ಸಾಗಿದೆವು. ಮುಂದೆ ಬಸ್‍ನಲ್ಲಿ ತೆರಳಿದೆವು. ಬಸ್ ನಮ್ಮನ್ನು ಒಂದೆಡೆ ಇಳಿಸಿತ್ತು. ದಾರಿಹೋಕರೊಬ್ಬರನ್ನು ಕೇಳಿದಾಗ ಬಸ್ ನಮ್ಮನ್ನು ಡೆನ್ಮಾರ್ಕ್ ನಲ್ಲಿ ಬಿಟ್ಟು ತೆರಳಿದೆ ಎಂದು ತಿಳಿದು ಬಂತು" ಎಂದು ಆಕೆ ಬರೆದಿದ್ದಾರೆ.

ಮುಂದೆ ಆಕೆಗೆ ಡೆನ್ಮಾರ್ಕ್ ದೇಶವೇ ಮನೆಯಾಯಿತು ಹಾಗೂ ಅಲ್ಲಿ ಬಿ52 ಆಲ್ಬೊರ್ಗ್ ಕ್ಲಬ್‍ಗೆ ಆಕೆ ಫುಟ್ಬಾಲ್ ಆಡಲಾರಂಭಿಸಿದ್ದರು. 2009ರಲ್ಲಿ ಆಕೆ ಡೆನ್ಮಾರ್ಕ್ ರಾಷ್ಟ್ರೀಯ ತಂಡವನ್ನು ಅಲ್ಗಾರ್ವೆ ಕಪ್ ಪಂದ್ಯಾಟದಲ್ಲಿ ಪ್ರತಿನಿಧಿಸಿದ್ದರು. ಆಕೆ ಬಾರಿಸಿರುವ ಗೋಲ್‍ಗಳು ಆಕೆಯ ತಂಡಕ್ಕೆ ಹಲವು ಜಯಗಳನ್ನು ತಂದುಕೊಟ್ಟಿವೆ.

ಫುಟ್ಬಾಲ್ ಆಟದ ನಡುವೆ ಆಕೆ ಆರ್ಹಸ್ ವಿವಿಯ ವೈದ್ಯಕೀಯ ವಿದ್ಯಾರ್ಥಿನಿಯೂ ಆಗಿದ್ದು ಕ್ರೀಡೆಯಿಂದ ನಿವೃತ್ತಿ ಪಡೆದ ಬಳಿಕ ವೈದ್ಯಕೀಯ ವೃತ್ತಿಗೆ ಗಮನ ನೀಡುವುದಾಗಿ ಆಕೆ ಹೇಳುತ್ತಾರೆ.

ನಾದಿಯಾ ತಮ್ಮ ದೇಶದ ತಂಡವನ್ನು 98 ಬಾರಿ ಪ್ರತಿನಿಧಿಸಿ 200 ಗೋಲುಗಳನ್ನು ಬಾರಿಸಿದ್ದು  ಆಕೆ ಫೋರ್ಬ್ಸ್ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News