ಬಾರಾಬಂಕಿ ಮಸೀದಿ ನೆಲಸಮ ಕುರಿತು ವೀಡಿಯೋ ವರದಿ ಮಾಡಿದ 'ದಿ ವೈರ್', ಪತ್ರಕರ್ತರ ವಿರುದ್ಧ ಎಫ್‍ಐಆರ್
ಹೊಸದಿಲ್ಲಿ : ಉತ್ತರ ಪ್ರದೇಶದ ಬಾರಾಬಂಕಿ ಎಂಬಲ್ಲಿ ನೆಲಸಮಗೊಳಿಸಲಾಗಿದೆ ಎನ್ನಲಾದ ಮಸೀದಿ ಕುರಿತಾದ ವೀಡಿಯೋ ವರದಿ ತಯಾರಿಸಿದ್ದಕ್ಕಾಗಿ ದಿ ವೈರ್ ಮತ್ತದರ ಇಬ್ಬರು ಪತ್ರಕರ್ತರ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಈ ಮಸೀದಿಯನ್ನು ಸ್ಥಳೀಯಾಡಳಿತ ಮೇ 17ರಂದು ನೆಲಸಮಗೊಳಿಸಿತ್ತು. ಈ ಸುದ್ದಿಯನ್ನು ದಿ ವೈರ್ ಸಹಿತ ಭಾರತ ಮತ್ತು ವಿದೇಶಗಳಲ್ಲಿನ ಹಲವು ಮಾಧ್ಯಮಗಳು ವರದಿ ಮಾಡಿದ್ದವು.
ಬಾರಾಬಂಕಿಯ ರಾಮ್ ಸ್ನೇಹಿ ಘಾಟ್ ಪ್ರದೇಶದಲ್ಲಿರುವ ಗರೀಬ್ ನವಾಝ್ ಅಲ್ ಮರೋಫ್ ಮಸೀದಿಯ ನೆಲಸಮಕ್ಕೆ ಕಾರಣವಾದ ಘಟನೆಗಳ ಕುರಿತಂತೆ ಸ್ಥಳೀಯರು ವಿವರಣೆ ನೀಡುವುದು ವೀಡಿಯೋದಲ್ಲಿ ದಾಖಲಾಗಿದೆ. ದಿ ವೈರ್ ವರದಿಗಾರರ ರಾಮ್ ಸ್ನೇಹಿ ಘಾಟ್ ಇಲ್ಲಿನ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಜಿತೇಂದ್ರ ಕಟಿಯಾರ್ ಅವರನ್ನು ಈ ಕುರಿತು ಚರ್ಚಿಸಲು ಭೇಟಿಯಾಗಲು ಯತ್ನಿಸಿರುವುದು ಹಾಗೂ ಈ ಕುರಿತು ಮಾತನಾಡಲು ನಿರಾಕರಿಸಿರುವುದು ಹಾಗೂ ಅವರು ಹುದ್ದೆಯನ್ನೇರುವ ಮುನ್ನವೇ ಮಸೀದಿ ನೆಲಸಮಗೊಳಿಸಲಾಗಿದೆ ಎಂದು ಹೇಳುತ್ತಿರುವುದೂ ವೀಡಿಯೋದಲ್ಲಿ ದಾಖಲಾಗಿದೆ.
ಬಾರಾಬಂಕಿ ಪೊಲೀಸರ ಎಫ್‍ಐಆರ್‍ನಲ್ಲಿ ʼಮಸೀದಿ' ಪದ ಬಳಕೆ ಮಾಡದೆ `ಅಕ್ರಮ ಕಟ್ಟಡ' ಎಂದಷ್ಟೇ ಉಲ್ಲೇಖಿಸಲಾಗಿದೆ. ಘಟನೆ ಕುರಿತು ದಿ ವೈರ್ ಪತ್ರಕರ್ತರಾದ ಸಿರಾಜ್ ಆಲಿ ಹಾಗೂ ಮುಕುಲ್ ಸಿಂಗ್ ಚೌಹಾಣ್ ಅವರ ಟ್ವೀಟ್‍ಗಳು ಸಮಾಜದಲ್ಲಿ ದ್ವೇಷ ಹರಡುತ್ತವೆ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ತರುತ್ತದೆ ಎಂದು ಎಫ್‍ಐಆರ್‍ನಲ್ಲಿ ಹೇಳಲಾಗಿದೆ ಆದರೆ ಯಾವ ಟ್ವೀಟ್ ಎಂದು ಹೇಳಲಾಗಿಲ್ಲ.
ಇಬ್ಬರು ಪತ್ರಕರ್ತರ ಹೊರತಾಗಿ ಮಸೀದಿ ಸಮಿತಿ ಕಾರ್ಯದರ್ಶಿ ಮೊಹಮ್ಮದ್ ಅನೀಸ್, ಸ್ಥಳೀಯ ನಿವಾಸಿ ಮೊಹಮ್ಮದ್ ನಸೀಂ ಎಂಬವರ ವಿರುದ್ಧವೂ ಎಫ್‍ಐಆರ್ ದಾಖಲಾಗಿದ್ದು ಪೊಲೀಸ್ ಅಧಿಕಾರಿಯೊಬ್ಬರ ದೂರಿನ ಆಧಾರದಲ್ಲಿ ಎಫ್‍ಐಆರ್ ದಾಖಲಾಗಿದೆ.
ಪೊಲೀಸರ ಆರೋಪಗಳನ್ನು ದಿ ವೈರ್ ನಿರಾಕರಿಸಿದೆಯಲ್ಲದೆ ರಾಜ್ಯದಲ್ಲಿ ನಡೆಯುತ್ತಿರುವುದನ್ನು ವರದಿ ಮಾಡಿದ ಪತ್ರಕರ್ತರ ಕೆಲಸವನ್ನು ಅಪರಾಧೀಕರಣಗೊಳಿಸುವ ಯತ್ನ ಈ ಕ್ರಮವಾಗಿದೆ ಎಂದು ದೂರಿದೆ.
ಈ ನಿರ್ದಿಷ್ಟ ಮಸೀದಿ ಉತ್ತರ ಪ್ರದೇಶ ಸುನ್ನಿ ವಕ್ಫ್ ಮಂಡಳಿಯಲ್ಲಿ ನೋಂದಣಿಯಾಗಿದೆ.