ಕೃಷಿ ಕಾಯಿದೆ, ಸಿಎಎ ವಿರೋಧಿ ಹೋರಾಟಗಾರರ ವಿರುದ್ಧದ ಪ್ರಕರಣ ಕೈಬಿಡಲು ತಮಿಳುನಾಡು ಸರಕಾರ ನಿರ್ಧಾರ
ಚೆನ್ನೈ: ಕೇಂದ್ರದ ನೂತನ ಕೃಷಿ ಕಾನೂನುಗಳು ಹಾಗೂ ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರತಿಭಟಿಸಿದವರ ವಿರುದ್ಧ ಈ ಹಿಂದಿನ ಸರಕಾರ ದಾಖಲಿಸಿದ್ದ ದೂರುಗಳೆಲ್ಲವನ್ನೂ ವಾಪಸ್ ಪಡೆಯಲು ತಮಿಳುನಾಡಿನ ಎಂ ಕೆ ಸ್ಟಾಲಿನ್ ಸರಕಾರ ಆದೇಶಿಸಿದೆ.
ರಾಜ್ಯದ ನ್ಯೂಟ್ರಿನೊ ಯೋಜನೆ, ಕೂಡಂಕುಳಂ ಅಣು ವಿದ್ಯುತ್ ಯೋಜನೆ ಹಾಗೂ ಚೆನ್ನೈ-ಸೇಲಂ ಎಕ್ಸ್‍ಪ್ರೆಸ್ ವೇ ಯೋಜನೆಗಳ ವಿರುದ್ಧ ಪ್ರಜಾಸತ್ತಾತ್ಮಕವಾಗಿ ಪ್ರತಿಭಟಿಸಿದವರ ವಿರುದ್ಧದ ಪ್ರಕರಣಗಳನ್ನೂ ಕೈಬಿಡಲು ಸರಕಾರ ನಿರ್ಧರಿಸಿದೆ.
ಈ ಕುರಿತು ಇಂದು ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ವೇಳೆ ಮುಖ್ಯಮಂತ್ರಿ ಸ್ಟಾಲಿನ್ ಘೋಷಿಸಿದರಲ್ಲದೆ ಅಹಿಂಸಾತ್ಮಕವಾಗಿ ಪ್ರತಿಭಟಿಸಿದವರೆಲ್ಲರ ವಿರುದ್ಧದ ಪ್ರಕರಣಗಳನ್ನು ಕೈಬಿಡಲಾಗುವುದು ಎಂದಿದ್ದಾರೆ.
ಹಿಂದಿನ ಸರಕಾರ ಪ್ರತಿಭಟನಾಕಾರರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಹೇಳಲಾಗಿದೆ, ಅನ್ಯಾಯವಾಗಿ ಪ್ರಕರಣ ದಾಖಲಾಗಿದ್ದರೆ ಹಾಗೂ ಪ್ರತಿಭಟನೆ ಅಹಿಂಸಾತ್ಮಕವಾಗಿದ್ದರೆ ಪ್ರಕರಣ ವಾಪಸ್ ಪಡೆಯಲಾಗುವುದು ಎಂದು ಅವರು ಹೇಳಿದ್ದಾರೆ.
ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ರಚನೆ, ಸ್ಟರ್ಲೈಟ್ ವಿರೋಧಿ ಹೋರಾಟ ಹಾಗೂ ಟಾಸ್ಮಾಕ್ ಮಳಿಗೆಗಳ ವಿರುದ್ಧ ಪ್ರತಿಭಟಿಸಿದ್ದ ಮಹಿಳೆಯರ ವಿರುದ್ಧ ಪ್ರಕರಣಗಳನ್ನು ಕೈಬಿಡುವಂತೆ ಟಿವಿಕೆ ನಾಯಕ ವೇಲ್ಮುರುಗನ್, ಸಿಪಿಎಂ ನಾಯಕ ನಗೈ ಮಲಿ ಹಾಗೂ ಕಾಂಗ್ರೆಸ್ ಶಾಸಕ ಎಸ್ ವಿಜಯಧರಣಿ ಅವರು ಮಾಡಿದ ಅಪೀಲಿಗೆ ಸ್ಪಂದಿಸಿ ಸೀಎಂ ಮೇಲಿನಂತೆ ಹೇಳಿದರು.