ಪ್ರಧಾನಿ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಿ: ನರೇಂದ್ರ ಮೋದಿಗೆ ಸಿಟಿಝನ್ ಫಾರ್ ಡೆಮಾಕ್ರಸಿ ಪತ್ರ

Update: 2021-06-25 15:47 GMT

ಬೆಂಗಳೂರು, ಜೂ. 25: `ಬ್ರಾಂಡ್ ಮೋದಿ ಸರಕಾರ ಆಮ್ಲಜನಕವಿಲ್ಲದೆ ತುರ್ತುನಿಗಾ ಘಟಕದಲ್ಲಿದೆ. ಆದುದರಿಂದ ಮೋದಿಯರು ಕೂಡಲೇ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಷ್ಟ್ರೀಯ ಸರಕಾರ ರಚನೆ'ಗೆ ಅವಕಾಶ ಮಾಡಿಕೊಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಟಿಝನ್ ಫಾರ್ ಡೆಮಾಕ್ರಸಿ ಅಧ್ಯಕ್ಷ ಎಸ್.ಆರ್.ಹೀರೆಮಠ್, ದೇವನೂರು ಮಹಾದೇವ ಸಹಿತ 25 ಮಂದಿ ಗಣ್ಯರು ಪತ್ರ ಬರೆದಿದ್ದಾರೆ.

'ಸಂಯುಕ್ತ ಕಿಸಾನ್ ಮೋರ್ಚಾ' ಕರೆ ಕೊಟ್ಟಿರುವ ಕೃಷಿ ಉಳಿಸಿ, ಪ್ರಜಾಪ್ರಭುತ್ವ ರಕ್ಷಿಸಿ ಹಾಗೂ ಇತರೆ ಕಾರ್ಯಕ್ರಮಗಳಿಗೆ ಸಿಟಿಜನ್ ಫಾರ್ ಡೆಮಾಕ್ರಸಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಇತರ ಸಮಾನ ಮನಸ್ಕ ಸಂಘಟನೆಗಳು ಕೋವಿಡ್ ಮಾಹಾಮಾರಿ ಎದುರಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ಮೋದಿ ರಾಜಿನಾಮೆ ಕೊಟ್ಟು ಸರಕಾರ ವಜಾಗೊಳಿಸಬೇಕು ಮತ್ತು ರಾಷ್ಟ್ರೀಯ ಸರಕಾರ ರಚಿಸುವುದಕ್ಕೆ ಸಂಬಂಧಿಸಿದಂತೆ ಒಮ್ಮತಾಭಿಪ್ರಾಯ ರೂಪಿಸಬೇಕು ಹಾಗೂ ಪಕ್ಷಭೇದ ಮರೆತು ಎಲ್ಲ ಪಕ್ಷಗಳ ಪ್ರತಿನಿಧಿಗಳನ್ನು ಒಳಗೊಂಡಂತ ರಾಷ್ಟ್ರೀಯ ಸರಕಾರ ರಚಿಸಿ ಅತ್ಯಂತ ಭೀಕರ ಆರೋಗ್ಯ ಬಿಕ್ಕಟ್ಟಿನ ಇಂದಿನ ಸಂದರ್ಭದಲ್ಲಿ ಕೋವಿಡ್ ಮಹಾರೋಗದ 3ನೆ ಅಲೆಯನ್ನು ಉತ್ತಮವಾಗಿ ಎದುರಿಸಲು ಮತ್ತು ದೇಶದಲ್ಲಿ ದುಸ್ಥಿತಿಯಲ್ಲಿರುವ ಜನವರ್ಗಕ್ಕೆ ಹಾಗೂ ವಲಸೆ ಕಾರ್ಮಿಕರಿಗೆ ಜೀವನೋಪಾಯ ಒದಗಿಸಲು ಇಂತಹ ಕ್ರಮ ಅಗತ್ಯವಾಗಿದೆ' ಎಂದು ಪತ್ರದಲ್ಲಿ ಪ್ರತಿಪಾದಿಸಲಾಗಿದೆ.

ದೇಶದಲ್ಲಿನ ಎಲ್ಲ ಜನವರ್ಗದ ಸಹಕಾರದಿಂದ ರಾಷ್ಟ್ರೀಯ ಸರಕಾರವು ದೇಶ ಎದುರಿಸುತ್ತಿರುವ ಗಂಭೀರ ಸಮಸ್ಯೆಯನ್ನು ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ನಾವು ಬಲವಾಗಿ ನಂಬಿದ್ದೇವೆ. ಈ ಮೂಲಕ ನಮ್ಮ ಜನತಾಂತ್ರಿಕ ಸಂಸ್ಥೆಗಳನ್ನು ಬಲಪಡಿಸಲು ಮತ್ತು ಸಾರ್ವಜನಿಕ ಜೀವನದಲ್ಲಿನ ನೈತಿಕ ಮೌಲ್ಯಗಳನ್ನು ಪುನರ್ ಸ್ಥಾಪಿಸಲು ಕ್ರಮಗಳನ್ನು ತೆಗೆದುಕೊಳ್ಳಲು ಆಗ್ರಹಿಸುತ್ತೇವೆ. ಸುನಾಮಿಯೋಪಾದಿಯಲ್ಲಿ ಕೋವಿಡ್-19 ಎರಡನೆಯ ಅಲೆಯು ದೇಶದಾದ್ಯಂತ ಹರಡುತ್ತಿರುವಾಗ ಸಮಸ್ಯೆಯನ್ನು ಎದುರಿಸುವಲ್ಲಿ ಯಾವುದೇ ದಾರಿಕಾಣದೆ ಸರಕಾರವು ಕೈಚೆಲ್ಲಿ ಕುಳಿತಿದೆ. ಇಂತಹ ಅತ್ಯಂತ ಗಂಭೀರ ಸ್ಥಿತಿಯಲ್ಲಿ ಮಹಾರೋಗಕ್ಕೆ ಪರಿಹಾರ ಆಗುವುದಕ್ಕೆ ಬದಲಾಗಿ ಸರಕಾರವು ಸಮಸ್ಯೆಯ ಭಾಗವಾಗಿದೆ. ಈ ಹಿನ್ನೆಲೆಯಲ್ಲಿ ನಾವು ಈ ಮನವಿ ಮಾಡುತ್ತಿದ್ದೆವೆ.

ಒಕ್ಕೂಟ ಸರಕಾರವು ಮೊದಲ ಅಲೆಯಿಂದ ಪಾಠ ಕಲಿಯದೆ ಇದ್ದುದರಿಂದ ಮತ್ತು ಮುಂಚಿತವಾಗಿಯೇ ತಜ್ಞರು ನೀಡಿದ ಎಚ್ಚರಿಕೆಗಳನ್ನು ಕೇಳದೆ ಇದ್ದುದುರಿಂದ ಅದು ಮಹಾರೋಗದ ಎರಡನೆಯ ಅಲೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಸಿದ್ಧತೆ ಮಾಡಿಕೊಳ್ಳಲಿಲ್ಲ. ರೈತರು ದಿಲ್ಲಿ ಗಡಿಯಲ್ಲಿ ಕೇಂದ್ರ ಮೂರು ಕೃಷಿ ಕಾನುನುಗಳು ಅಸಂವಿಧಾನಿಕ ಎಂದು ಹೋರಾಟ ಮಾಡುತ್ತಿದ್ದು, ಅದನ್ನು ಸರಿಯಾಗಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ರೈತರ ಕಠಿಣ ಪರಿಶ್ರಮಕ್ಕೆ ನ್ಯಾಯಯುತ ಆದಾಯವನ್ನು ಮಾತ್ರ ಕೇಳುತ್ತಿದ್ದಾರೆ. ಕೃಷಿ ಉತ್ಪನ್ನ ಮಾರಾಟ ಕಾಯ್ದೆ, ಭೂ ಸುಧಾರಣೆ ತಿದ್ದುಪಡಿ, ಎಪಿಎಂಸಿ ತಿದ್ದುಪಡಿ, ಜಾನುವಾರು ಹತ್ಯೆ ನಿಷೇಧ ಸೇರಿದಂತೆ ಇನ್ನಿತರ ಕಾಯ್ದೆಗಳನ್ನು ಹಿಂಪಡೆಯದ ಹಿನ್ನೆಲೆಯಲ್ಲಿ ಪ್ರಧಾನಿ ರಾಜೀನಾಮೆಗೆ ಆಗ್ರಹಿಸುತ್ತಿದ್ದೇವೆ' ಎಂದು ಸಿಟಿಝನ್ ಫಾರ್ ಡೆಮಾಕ್ರಸಿ ಪ್ರಕಟಣೆಯಲ್ಲಿ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News