ರೈತರ ತಾತ್ಕಾಲಿಕ ಶೆಡ್ ಕೆಡವಲು ನೋಟಿಸ್ ಜಾರಿಗೊಳಿಸಿದ ಲಕ್ಷದ್ವೀಪ ಆಡಳಿತ
ಕೊಚ್ಚಿ: ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರು ಜಾರಿಗೆ ತರಲುದ್ದೇಶಿಸಿರುವ ಹಲವು ಕಾನೂನುಗಳು ಹಾಗೂ ನಿಯಮಗಳ ವಿರುದ್ಧ ವ್ಯಾಪಕ ಆಕ್ರೋಶ ಮೂಡಿರುವ ನಡುವೆಯೇ ಅಲ್ಲಿನ ಕಂದಾಯ ಇಲಾಖೆಯು ರೈತರಿಗೆ ನೋಟಿಸ್ ಜಾರಿಗೊಳಿಸಿ ಜನವಸತಿಯಿಲ್ಲದ ದ್ವೀಪಗಳಲ್ಲಿ ನಿರ್ಮಿಸಿರುವ ತಾತ್ಕಾಲಿಕ ಶೆಡ್‍ಗಳನ್ನು ಕೆಡಹುವಂತೆ ನೀಡಿದ ಸೂಚನೆ ಹೊಸ ವಿವಾದ ಹುಟ್ಟು ಹಾಕಿದೆ.
ಜೂನ್ 24ರಂದು ಈ ನೋಟಿಸ್ ಜಾರಿಗೊಳಿಸಲಾಗಿದ್ದು ಏಳು ದಿನಗಳೊಳಗಾಗಿ ಅಕ್ರಮ ಶೆಡ್‍ಗಳನ್ನು ತೆರವುಗೊಳಿಸಬೇಕೆಂದು ಸೂಚಿಸಲಾಗಿದೆ. ಆದೇಶಕ್ಕೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಜುಲೈ 1ರೊಳಗಾಗಿ ಸಲ್ಲಿಸುವಂತೆ ಹೇಳಲಾಗಿದೆ. ಒಂದು ವೇಳೆ ಆದೇಶ ಪಾಲಿಸಲು ವಿಫಲವಾದಲ್ಲಿ ಸಂಬಂಧಿತ ಪ್ರಾಧಿಕಾರವೇ ತೆರವುಗೊಳಿಸಿ ಅದರ ವೆಚ್ಚವನ್ನು ರೈತರಿಂದ ಭರಿಸಲಾಗುವುದು" ಎಂದು ನೋಟಿಸ್‍ನಲ್ಲಿ ಹೇಳಲಾಗಿದೆ.
ರೈತರು ನಿರ್ಮಿಸಿರುವ ಶೆಡ್‍ಗಳು ಭೂ ಕಂದಾಯ ಮತ್ತು ಬಾಡಿಗೆದಾರ ನಿಯಂತ್ರಣ ನಿಯಮಾವಳಿ 1965 ಇದರ ಸೆಕ್ಷನ್ 20(1) ಇದರ ಉಲ್ಲಂಘನೆಯಾಗಿದೆ ಎಂದು ಕಂದಾಯ ಇಲಾಖೆ ಹೇಳಿದೆ.
ಆದರೆ ಈ ಜನವಸತಿಯಿಲ್ಲದ ದ್ವೀಪಗಳಲ್ಲಿ ದಶಕಗಳಿಂದ ಸಾಗುವಳಿ ನಡೆಸುತ್ತಿರುವ ಲಕ್ಷದ್ವೀಪ ನಿವಾಸಿಗಳು ನೋಟಿಸ್‍ಗೆ ಆಕ್ಷೇಪ ಸೂಚಿಸಿದ್ದಾರೆ. ಈ ಶೆಡ್‍ಗಳು ತಾತ್ಕಾಲಿಕ ಹಾಗೂ ಅವುಗಳನ್ನು ರೈತರು ತಮ್ಮ ಉತ್ಪನ್ನಗಳನ್ನು ಶೇಖರಿಸಿಡಲು ಬಳಸುವುದರಿಂದ ಅದನ್ನು ಕೆಡವುದು ಸಾಧ್ಯವಿಲ್ಲ ಎಂದೂ ಹೇಳಲಾಗಿದೆ.