ನೋವಾವ್ಯಾಕ್ಸ್ ನ ಕೋವಿಡ್ ಲಸಿಕೆ ‘ಕೋವೊವ್ಯಾಕ್ಸ್’ನ ಉತ್ಪಾದನೆಯನ್ನು ಆರಂಭಿಸಿದ ಸಿರಮ್ ಇನ್ಸ್ಟಿಟ್ಯೂಟ್

Update: 2021-06-25 14:19 GMT

ಹೊಸದಿಲ್ಲಿ,ಜೂ.25: ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ನೊವೊವ್ಯಾಕ್ಸ್ ಅಭಿವೃದ್ಧಿಗೊಳಿಸಿರುವ ಕೋವಿಡ್-19 ಲಸಿಕೆ ಕೋವೊವ್ಯಾಕ್ಸ್ ನ ಮೊದಲ ಬ್ಯಾಚ್ ನ ಉತ್ಪಾದನೆಯನ್ನು ತನ್ನ ಪುಣೆ ಘಟಕದಲ್ಲಿ ಆರಂಭಿಸಿದೆ. ಶುಕ್ರವಾರ ಟ್ವೀಟ್ ಮೂಲಕ ಇದನ್ನು ಹಂಚಿಕೊಂಡಿರುವ ಸಿಐಐ, ಇದರೊಂದಿಗೆ ಹೊಸ ಮೈಲಿಗಲ್ಲೊಂದನ್ನು ತಲುಪಿದ್ದೇವೆ ಎಂದು ತಿಳಿಸಿದೆ.

ಕೋವೊವ್ಯಾಕ್ಸ್ ನ ಟ್ರಯಲ್ ಗಳು ಅಂತಿಮ ಹಂತದಲ್ಲಿದ್ದು, ಸೆಪ್ಟೆಂಬರ್ ನಲ್ಲಿ ಈ ಲಸಿಕೆಯನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಆಶಯವನ್ನು ಕಂಪನಿಯು ಹೊಂದಿದೆ ಎಂದು ಸಿಐಐ ಸಿಇಒ ಆದಾರ್ ಪೂನಾವಾಲಾ ಅವರು ಈ ಹಿಂದೆ ತಿಳಿಸಿದ್ದರು.
 
ಕೋವೊವ್ಯಾಕ್ಸ್ ಲಸಿಕೆಯು ಮಧ್ಯಮ ಮತ್ತು ತೀವ್ರ ಸ್ವರೂಪದ ಕೋವಿಡ್ ಸೋಂಕು ಪ್ರಕರಣಗಳ ವಿರುದ್ಧ ಶೇ.100ರಷ್ಟು ರಕ್ಷಣೆಯನ್ನು ಒದಗಿಸುತ್ತದೆ ಮತ್ತು ಒಟ್ಟಾರೆಯಾಗಿ ಶೇ.90.4ರಷ್ಟು ಪರಿಣಾಮಕಾರಿತ್ವ ಹೊಂದಿದೆ ಎನ್ನುವುದನ್ನು ಫಲಿತಾಂಶಗಳು ತೋರಿಸಿವೆ ಎಂದು ನೋವಾ ವ್ಯಾಕ್ಸ್ ಜೂ.14ರಂದು ಹೇಳಿಕೆಯೊಂದರಲ್ಲಿ ತಿಳಿಸಿತ್ತು.

ಲಸಿಕೆಯ ಪರಿಣಾಮಕಾರಿತ್ವ,ಸುರಕ್ಷತೆ ಮತ್ತು ಪ್ರತಿರೋಧಕ ಶಕ್ತಿಯ ಮೌಲ್ಯಮಾಪನಕ್ಕಾಗಿ ಅಮೆರಿಕ ಮತ್ತು ಮೆಕ್ಸಿಕೋದ 119 ಸ್ಥಳಗಳಲ್ಲಿ 29,960 ಜನರನ್ನು ಅಧ್ಯಯನಕ್ಕೊಳಪಡಿಸಲಾಗಿದೆ ಎಂದೂ ಅದು ಹೇಳಿತ್ತು. ತನ್ನ ಲಸಿಕೆಯು ಕೊರೋನವೈರಸ್ ರೂಪಾಂತರಿ ಪ್ರಭೇದಗಳ ವಿರುದ್ಧ ಶೇ.93ರಷ್ಟು ಪರಿಣಾಮಕಾರಿತ್ವ ಹೊಂದಿದೆ ಎಂದು ನೋವಾವ್ಯಾಕ್ಸ್ ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News