×
Ad

ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ಮರೆಯಲು ಸಾಧ್ಯವಿಲ್ಲ: ಪ್ರಧಾನಿ ಮೋದಿ

Update: 2021-06-25 20:00 IST
photo: twitter/@narendramodi

ಹೊಸದಿಲ್ಲಿ,ಜೂ.25: ನಲವತ್ತಾರು ವರ್ಷಗಳ ಹಿಂದೆ 1975ರಲ್ಲಿ ದೇಶದಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿ ಕುರಿತಂತೆ ಶುಕ್ರವಾರ ಕಾಂಗ್ರೆಸ್ ವಿರುದ್ಧ ತೀವ್ರ ದಾಳಿಯನ್ನು ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು,ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನೆಂದಿಗೂ ಮರೆಯಲು ಸಾಧ್ಯವಿಲ್ಲ. ಆ 21 ತಿಂಗಳುಗಳ ಅವಧಿಯು ಪ್ರಜಾಸತ್ತಾತ್ಮಕ ಸಂಸ್ಥೆಗಳ ವ್ಯವಸ್ಥಿತ ನಾಶಕ್ಕೆ ಸಾಕ್ಷಿಯಾಗಿತ್ತು ಎಂದು ಟ್ವೀಟಿಸಿದ್ದಾರೆ.

‘ಭಾರತದ ಪ್ರಜಾಸತ್ತಾತ್ಮಕ ಆಶಯವನ್ನು ಬಲಪಡಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡಲು ಪಣವನ್ನು ತೊಡೋಣ ಮತ್ತು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೌಲ್ಯಗಳಿಗೆ ಅನುಗುಣವಾಗಿ ಬದುಕೋಣ’ ಎಂದು ಸರಣಿ ಟ್ವೀಟ್ ಗಳಲ್ಲಿ ಹೇಳಿರುವ ಮೋದಿ,‘ತುರ್ತು ಪರಿಸ್ಥಿತಿಯು ಕಾಂಗ್ರೆಸ್ ನಮ್ಮ ಪ್ರಜಾಪ್ರಭುತ್ವ ಮೌಲ್ಯಗಳನ್ನು ದಮನಿಸಿದ್ದ ರೀತಿಯಾಗಿದೆ. ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದ ಮತ್ತು ಭಾರತೀಯ ಪ್ರಜಾಪ್ರಭುತ್ವವನ್ನು ರಕ್ಷಿಸಿದ್ದ ಎಲ್ಲರನ್ನೂ ಸ್ಮರಿಸಿಕೊಳ್ಳೋಣ’ ಎಂದಿದ್ದಾರೆ. 

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಿಷೇಧಿಸಲಾಗಿದ್ದ ವಿಷಯಗಳನ್ನು ಪಟ್ಟಿ ಮಾಡಿರುವ ಬಿಜೆಪಿಯ ಇನ್ಸ್ಟಾಗ್ರಾಂ ಪೋಸ್ಟ್ ನ ಲಿಂಕ್ ಅನ್ನೂ ಅವರು ಶೇರ್ ಮಾಡಿಕೊಂಡಿದ್ದಾರೆ. ಮೇರುಗಾಯಕ ಕಿಶೋರ್ ಕುಮಾರ್ ಅವರ ಗೀತೆಗಳು, ಕ್ರಾಂತಿಕಾರಿಗಳಾದ ಚಂದ್ರಶೇಖರ ಆಝಾದ್ ಮತ್ತು ಭಗತ್ ಸಿಂಗ್ ಅವರ ಕುರಿತು ಚಲನಚಿತ್ರಗಳು,ರವೀಂದ್ರನಾಥ ಟಾಗೋರ್ ಮತ್ತು ಮಹಾತ್ಮಾ ಗಾಂಧಿಯವರ ಉಕ್ತಿಗಳು ಮತ್ತು ಪ್ರತಿಭಟನೆಗಳು ಈ ಪಟ್ಟಿಯಲ್ಲಿವೆ. ಜೊತೆಗೆ ‘ನಮ್ಮ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದ್ದವರಿಗೆ ಮತ್ತೊಮ್ಮೆ ಹಾಗೆ ಮಾಡಲು ಅಧಿಕಾರವಿಲ್ಲದಂತೆ ನೋಡಿಕೊಳ್ಳಲು ಜೊತೆಯಾಗಿ ಪ್ರತಿಜ್ಞೆ ಮಾಡೋಣ ’ಎಂದೂ ಪೋಸ್ಟ್ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News