ವಿಶ್ವದಾಖಲೆಯ ಕಾರ್ಯಕ್ರಮದಲ್ಲಿ ಬ್ರಹ್ಮಾವರ ಕ್ರಾಸ್‌ಲ್ಯಾಂಡ್ ಕಾಲೇಜು

Update: 2021-06-26 13:12 GMT

ಉಡುಪಿ, ಜೂ.26: ವಿಶ್ವದಾಖಲೆಗಾಗಿ 51 ಗಂಟೆಗಳ ಕಾಲ ನಡೆದ ಅಂತಾರಾಷ್ಟ್ರೀಯ ಆನ್‌ಲೈನ್‌ನಲ್ಲಿ ನಡೆದ ವರ್ಚುವಲ್ ಕಾರ್ಯಕ್ರಮವೊಂದರಲ್ಲಿ ತಮಿಳುನಾಡಿನ ವಿದ್ಯಾಸಂಸ್ಥೆಗಳೊಂದಿಗೆ ಬ್ರಹ್ಮಾವರದ ಕ್ರಾಸ್‌ಲ್ಯಾಂಡ್ ಕಾಲೇಜು ಸಹ ಭಾಗವಹಿಸಿತ್ತು.

ಚೆನ್ನೈನ ತಮಿಳುನಾಡು ಶಿಕ್ಷಕರ ಶಿಕ್ಷಣ ವಿಶ್ವವಿದ್ಯಾಲಯದೊಂದಿಗೆ ಕ್ರಾಸ್‌ಲ್ಯಾಂಡ್ ಕಾಲೇಜು ಸೇರಿದಂತೆ ದೇಶದ 51 ಸಂಸ್ಥೆ ಗಳು, 51 ವಿಷಯಗಳು, 50 ಅತಿಥಿಗಳ ಸಹಯೋಗದೊಂದಿಗೆ ವಿಶ್ವದಾಖಲೆಯ 51ಗಂಟೆಗಳ ಆನ್‌ಲೈನ್ ಅಂತಾರಾಷ್ಟ್ರೀಯ ವರ್ಚುವಲ್ ಕಾರ್ಯಕ್ರಮ ಮೂರು ದಿನಗಳ ಕಾಲ ನಡೆದಿತ್ತು.

2030ರಲ್ಲಿ ಉನ್ನತ ಸ್ಥಾನ ತಲುಪಲು ಜೀವನ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುವ ಪ್ರಾಮುಖ್ಯತೆಯ ಕುರಿತಂತೆ ನಡೆದ ಈ ಮೆಗಾ ಕಾರ್ಯಕ್ರಮದಲ್ಲಿ ತಮಿಳುನಾಡಿನ 49 ಸಂಸ್ಥೆಗಳು, ಹೊರರಾಜ್ಯಗಳ ಕ್ರೈಸ್ಟ್ ವಿವಿ ಹಾಗೂ ಬಹ್ಮಾವರದ ಕ್ರಾಸ್‌ಲ್ಯಾಂಡ್ ಕಾಲೇಜುಗಳು ಭಾಗವಹಿಸಿದ್ದವು ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

ಕ್ರಾಸ್‌ಲ್ಯಾಂಡ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಸ್ಯಾಮ್ಯುಯೆಲ್ ಸ್ಯಾಮುಯೆಲ್ ಅವರ ಮಾರ್ಗದರ್ಶನದಲ್ಲಿ ಸಹಾಯಕ ಪ್ರಾಧ್ಯಾಪಕ ಡಾ.ರಾಬರ್ಟ್ ಕ್ಲೈವ್ ಸಂಯೋಜನೆಯಲ್ಲಿ ಸುಮಾರು ಒಂದು ಗಂಟೆ ಕಾಲ ಕಾಲೇಜಿನ ವತಿಯಿಂದ ಜೀವನ ಕೌಶಲ್ಯಗಳ ಮೂಲಕ ಸ್ಥಿತಿ ಸ್ಥಾಪಕತ್ವ ನಿರ್ಮಿಸುವುದು ಕುರಿತಂತೆ ಕಾರ್ಯಕ್ರಮ ನೀಡಲಾಯಿತು.

ವಿದ್ಯಾರ್ಥಿಗಳಾದ ಫಿಲಿಪ್, ಹಡ್ಸನ್, ಸುಷ್ಮಾ, ಡ್ಯಾನ್ ಜೋಸ್, ಆರ್ಷಾ ಜಾನ್ಸನ್, ಎಡ್ವಿನ್ ರೋಬಿನ್, ಟೆಸ್ ಝೇವಿಯರ್ ಜೀವನದಲ್ಲಿ ವ್ಯಕ್ತಿತ್ವ ವಿಕಸನಕ್ಕಾಗಿ ಅಳವಡಿಸಿಕೊಂಡ ವಿಧಾನಗಳು ಹಾಗೂ ಅದರಿಂದ ಅವರು ಪಡೆದ ಯಶಸ್ಸಿನ ಕುರಿತು ಮಾತನಾಡಿದರು.

ಕಾಲೇಜಿನ ಪ್ರೊ.ರಿಬೂ ಸ್ಯಾಮುಯೆಲ್ ಸ್ವಾಗತಿಸಿ, ಉಪನ್ಯಾಸಕಿಯರಾದ ದೀಪಾ ರಾವ್ ವಂದಿಸಿ ವರ್ಷಿತಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News