ದೇಹತೂಕ ನಿರಂತರ ಇಳಿಕೆ: ಉ.ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಆರೋಗ್ಯಸ್ಥಿತಿ ಬಗ್ಗೆ ಜನರಲ್ಲಿ ಆತಂಕ
ಪ್ಯಾಂಗ್ಯಾಂಗ್, ಜೂ.28: ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ದೇಹತೂಕದಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ ಅವರ ಆರೋಗ್ಯಸ್ಥಿತಿಯ ಬಗ್ಗೆ ಹಲವು ವದಂತಿ ಹಬ್ಬಿದೆ ಎಂದು ವರದಿಯಾಗಿದೆ.
ಜೂನ್ ನಲ್ಲಿ ಕಿಮ್ ಜೊಂಗ್ ಪಾಲ್ಗೊಂಡಿದ್ದ ಕಾರ್ಯಕ್ರಮವೊಂದರ ವೀಡಿಯೊ ದೃಶ್ಯಾವಳಿ ಗಮನಿಸಿದಾಗ, 37 ವರ್ಷದ ಅಧ್ಯಕ್ಷರ ದೇಹ ತೂಕ ಕಡಿಮೆಯಾಗಿರುವುದು ಸ್ಪಷ್ಟವಾಗಿದೆ ಎಂದು ವಿದೇಶಿ ವಿಶ್ಲೇಷಕರು ಹೇಳಿದ್ದಾರೆ . ‘ಮಾನ್ಯ ಪ್ರಧಾನ ಕಾರ್ಯದರ್ಶಿ(ಕಿಮ್ ಜೊಂಗ್) ಕೃಶರಾಗಿರುವುದನ್ನು ಕಂಡು ದೇಶದ ಜನತೆಯ ಹೃದಯವೇ ಒಡೆದುಹೋಗಿದೆ. ಎಲ್ಲ ಕಣ್ಣಾಲಿಗಳು ತುಂಬಿ ಬಂದಿವೆ ’ ಎಂದು ಓರ್ವ ನಾಗರಿಕ ಕಣ್ಣೊರೆಸುತ್ತಾ ಹೇಳುವ ಸಂದರ್ಶನದ ಭಾಗವನ್ನು ಸರಕಾರಿ ಅಧೀನದ ಟಿವಿ ವಾಹಿನಿ ಕೆಆತರ್ಟಿ ಶುಕ್ರವಾರ ಪ್ರಸಾರ ಮಾಡಿದೆ.ಕೊರಿಯಾ ವರ್ಕರ್ಸ್ ಪಾರ್ಟಿ(ಡಬ್ಯುಪಿಕೆ)ಯ ವಾರ್ಷಿಕ ಸಭೆಯ ಬಳಿಕ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಕಿಮ್ ಹಾಗೂ ಇತರ ಅಧಿಕಾರಿಗಳು ಪಾಲ್ಗೊಂಡಿದ್ದು ಈ ಕಾರ್ಯಕ್ರಮವನ್ನು ರಸ್ತೆಯಲ್ಲಿ ಅಳವಡಿಸಲಾದ ಬೃಹತ್ ಪರದೆಯ ಮೂಲಕ ಜನತೆ ವೀಕ್ಷಿಸಿದ್ದರು.
ಸುಮಾರು 1 ತಿಂಗಳು ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಕಿಮ್, ಜೂನ್ನಲ್ಲಿ ಪ್ರತ್ಯಕ್ಷರಾದಾಗ ಅವರು ತುಂಬಾ ಕೃಶರಾಗಿದ್ದರು. ಅವರ ಆರೋಗ್ಯದ ಕುರಿತು ಇದ್ದ ವದಂತಿಗೆ ಇದು ಪುಷ್ಟಿ ನೀಡಿದೆ ಎಂದು ದಕ್ಷಿಣ ಕೊರಿಯಾದ ಎನ್ಕೆ ನ್ಯೂಸ್ ಎಂಬ ವೆಬ್ಸೈಟ್ ನ ವಿದೇಶಿ ವಿಶ್ಲೇಷಕರು ಹೇಳಿದ್ದಾರೆ. ಉತ್ತರಕೊರಿಯಾದ ಮೇಲೆ ಬಿಗಿಹಿಡಿತ ಹೊಂದಿರುವ ಕಿಮ್, ತನ್ನ ಉತ್ತರಾಧಿಕಾರಿಯ ಬಗ್ಗೆ ಯಾವತ್ತೂ ಪ್ರಸ್ತಾವಿಸಿಲ್ಲ. ಆದ್ದರಿಂದ ಅಂತರಾಷ್ಟ್ರೀಯ ಮಾಧ್ಯಮಗಳು, ಗುಪ್ತಚರ ಸಂಸ್ಥೆಗಳು ಹಾಗೂ ವಿಶೇಷ ತಜ್ಞರು ಕಿಮ್ ಆರೋಗ್ಯದ ಬಗ್ಗೆ ನಿಕಟ ಗಮನ ಇರಿಸಿದ್ದಾರೆ.