ಉ.ಪ್ರ.: ಒತ್ತೆ ಹಣಕ್ಕಾಗಿ ಗೆಳೆಯನ ಹತ್ಯೆ; ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿ ಎಂದು ಪಿಪಿಇ ಕಿಟ್ ಧರಿಸಿ ಅಂತ್ಯಕ್ರಿಯೆ
ಆಗ್ರಾ, ಜೂ. 28: ಎರಡು ಕೋಟಿ ರೂಪಾಯಿ ಒತ್ತೆ ಹಣ ನೀಡದ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಆಗ್ರಾದ ಕೋಲ್ಡ್ ಸ್ಟೋರೇಜ್ ಮಾಲಕನ 23 ವರ್ಷದ ಪುತ್ರನನ್ನು ಆತನ ಗೆಳೆಯ ಹಾಗೂ ಇತರ ನಾಲ್ವರು ಸೇರಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಅನಂತರ ಆರೋಪಿಗಳು ಕೋವಿಡ್ನಿಂದ ಮೃತಪಟ್ಟಿರುವ ವ್ಯಕ್ತಿ ಎಂದು ಪ್ರತಿಪಾದಿಸಿ ಆತನ ಮೃತದೇಹದ ಅಂತ್ಯ ಸಂಸ್ಕಾರವನ್ನು ಪಿಪಿಇ ಕಿಟ್ ಧರಿಸಿ ನೆರವೇರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಎಲ್ಲ ಐದು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಚಿನ್ ಚೌಹಾನ್ ನೊಂದಿಗೆ ಗೆಳೆಯ ಹಾಗೂ ಆತನ ಸಹವರ್ತಿಗಳು ಆಗ್ರಾದ ಪಾಳು ಬಿದ್ದ ನೀರಿನ ಟ್ಯಾಂಕ್ ಬಳಿ ಮದ್ಯ ಸೇವಿಸಿದ್ದರು. ಅನಂತರ ಸಚಿನ್ ಚೌಹಾನ್ ನನ್ನು ಲ್ಯಾಮಿನೇಷನ್ ಪೇಪರ್ ಬಳಸಿ ಉಸಿರು ಕಟ್ಟಿಸಿ ಹತ್ಯೆಗೈದಿದ್ದರು. ಹತ್ಯೆಯನ್ನು ಮುಚ್ಚಿಹಾಕಲು ಕೋವಿಡ್ನಿಂದ ಮೃತಪಟ್ಟ ವ್ಯಕ್ತಿ ಎಂದು ಪ್ರತಿಪಾದಿಸಿ ಅಂತ್ಯಕ್ರಿಯೆ ನಡೆಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಸಚಿನ್ ಚೌಹಾನ್ ನಾಪತ್ತೆಯಾದ ಒಂದು ದಿನದ ಬಳಿಕ ಆತನ ಹೆತ್ತವರು ಪೊಲೀಸ್ ಠಾಣೆ ಸಂಪರ್ಕಿಸಿ ದೂರು ದಾಖಲಿಸಿದ್ದರು. ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.