×
Ad

ಡಾ. ಎಪಿಜೆ ಅಬ್ದುಲ್‌ ಕಲಾಂ ದ್ವೀಪ ನೆಲೆಯಿಂದ 'ಅಗ್ನಿ ಪ್ರೈಮ್' ಕ್ಷಿಪಣಿ ಯಶಸ್ವಿ ಉಡಾವಣೆ

Update: 2021-06-28 21:57 IST

ಹೊಸದಿಲ್ಲಿ, ಜೂ.28: ಅಗ್ನಿ ಸರಣಿಗಳ ಕ್ಷಿಪಣಿಯ ಅತ್ಯಾಧುನಿಕ ಆವೃತ್ತಿ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಸೋಮವಾರ ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ರಕ್ಷಣಾ ಇಲಾಖೆಯ ಮೂಲಗಳು ಹೇಳಿವೆ. ಅಣ್ವಸ್ತ್ರ ಹೊತ್ತೊಯ್ಯುವ ಸಾಮರ್ಥ್ಯವಿರುವ ಅಗ್ನಿ ಪ್ರೈಮ್ ಕ್ಷಿಪಣಿಯ ಪರೀಕ್ಷೆಯನ್ನು ಒಡಿಶಾ ಕರಾವಳಿಯ ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದ ನೆಲೆಯಿಂದ ಬೆಳಿಗ್ಗೆ 10:55 ಗಂಟೆಗೆ ಯಶಸ್ವಿಯಾಗಿ ನಡೆಸಲಾಗಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ಡಿಒ) ಹೇಳಿದೆ. ‌

ಭುವನೇಶ್ವರದಿಂದ ಸುಮಾರು 150 ಕಿ.ಮೀ ದೂರದ ಪೂರ್ವ ಕರಾವಳಿಯ ವಿವಿಧೆಡೆ ಸ್ಥಾಪಿಸಲಾಗಿರುವ ವಿವಿಧ ಟೆಲೆಮೆಟ್ರಿಗಳು ಮತ್ತು ರೇಡಾರ್ಗಳು ಕ್ಷಿಪಣಿಯ ಪಥದ ಮೇಲೆ ನಿಗಾ ವಹಿಸಿದ್ದವು. ಕ್ಷಿಪಣಿ ಅತ್ಯಂತ ನಿಖರವಾಗಿ ಗುರಿಗೆ ಅಪ್ಪಳಿಸಿದೆ ಎಂದು ಡಿಆರ್ಡಿಒ ಹೇಳಿದೆ. ಮುಂದಿನ ಪೀಳಿಗೆಯ ಅಣ್ವಸ್ತ್ರ ಕ್ಷಿಪಣಿಯಾಗಿರುವ ಅಗ್ನಿಪ್ರೈಮ್ 1000ದಿಂದ 2000 ಕಿ.ಮೀ ವರೆಗಿನ ವ್ಯಾಪ್ತಿ ಹೊಂದಿದೆ.  

ದೇಶದಲ್ಲೇ ಅಭಿವೃದ್ಧಿಗೊಳಿಸಿದ ಪಿನಾಕಾ ಕ್ಷಿಪಣಿಯ ಸುಧಾರಿತ ಆವೃತ್ತಿಯನ್ನು 2 ದಿನದ ಹಿಂದೆ ಒಡಿಶಾದ ಚಂಡೀಪುರದಿಂದ ಯಶಸ್ವಿಯಾಗಿ ಪರೀಕ್ಷಿಸಲಾಗಿತ್ತು. ಈ ಸುಧಾರಿತ ಆವೃತ್ತಿಯ ಕ್ಷಿಪಣಿ 45 ಕಿ.ಮೀ ವರೆಗಿನ ವ್ಯಾಪ್ತಿಯಲ್ಲಿರುವ ಗುರಿಯ ಮೇಲೆ ಎರಗುವ ಸಾಮರ್ಥ್ಯ ಹೊಂದಿದೆ. ಎಪ್ರಿಲ್ ನಲ್ಲಿ ಡಿಆರ್ಡಿಒ ಎಸ್ಎಫ್ಡಿಆರ್(ಸಾಲಿಡ್ ಫುಯೆಲ್ ಡಕ್ಟೆಡ್ ರ್ಯಾಮ್ಜೆಟ್) ತಂತ್ರಜ್ಞಾನ ಆಧಾರಿತ ಅತ್ಯಾಧುನಿಕ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News