ಮಲೆನಾಡಿನ ರಸ್ತೆ ಅಗಲೀಕರಣವೂ... ಭಾರೀ ಕಾರ್ಪೊರೇಟ್ ಹಿತಾಸಕ್ತಿಗಳೂ...

Update: 2021-06-29 03:52 GMT

ಗುಡ್ಡಗಳು ಬೋಳಾಗಿ ಕಾಣತೊಡಗಿವೆ. ಹಿತಕರ ವಾತಾವರಣದ ಜಾಗದಲ್ಲಿ ಬಿಸಿಯೇರುತ್ತಿರುವ ವಾತಾವರಣ, ಅನಾವೃಷ್ಟಿ, ಅತೀವೃಷ್ಟಿ ಈಗ ಮಲೆನಾಡಿನ ಮಾಮೂಲಿ ಸಂಗತಿಗಳಾಗಿಬಿಟ್ಟಿವೆ. ಬೇಸಿಗೆಯಲ್ಲಿ ಕುಡಿಯುವ ನೀರಿಗೂ ತತ್ವಾರವಾಗತೊಡಗಿದೆ. ಈ ಪರಿಸ್ಥಿತಿಗೆ ಅಲ್ಲಿ ಹಲವು ಪೀಳಿಗೆಗಳಿಂದ ವಾಸ ಮಾಡುತ್ತಾ ಬಂದ ಜನಸಾಮಾನ್ಯರು ಪ್ರಧಾನ ಕಾರಣರಲ್ಲ ಎನ್ನುವುದನ್ನು ಸ್ಪಷ್ಟವಾಗಿ ಗ್ರಹಿಸಿದಾಗ ಮಾತ್ರ ನೈಜ ಕಾರಣಗಳತ್ತ ಹೊರಳಿ ಚಿಂತಿಸಲು ಸಾಧ್ಯವಾಗುತ್ತದೆ.


ಕಳೆದ ನೂರಾರು ವರ್ಷಗಳಿಂದ ಮಲೆನಾಡಿನ ಬೆಟ್ಟಗುಡ್ಡಗಳನ್ನು ಸುತ್ತಿ ಬಳಸಿ ಸಾಗುತ್ತಿದ್ದ ಹಲವಾರು ರಸ್ತೆಗಳು ಈಗ ಭಾರೀ ಅಗಲವಾಗತೊಡಗಿವೆ. ಬಿಳಿ ಪಟ್ಟಿಗಳು, ಹಳದಿ ಪಟ್ಟಿಗಳು, ಕಬ್ಬಿಣದ ಬದಿತಡೆಗಳನ್ನು ಪಡೆಯತೊಡಗಿವೆ. ಈ ರಸ್ತೆಗಳು ಮೂಲದಲ್ಲಿ ದಲಿತ ದಮನಿತರು, ಆದಿವಾಸಿಗಳು ನಡೆದು ಕಡಿದು ನಿರ್ಮಿಸಿದ ಕಾಲುದಾರಿಗಳಾಗಿ ಬಹಳ ಕಾಲ ಉಳಿದಿದ್ದವು. ಆನಂತರ ಜನರು ಚಕ್ಕಡಿ/ಗಾಡಿದಾರಿಗಳಾಗಿ ಮಾಡಿಕೊಂಡಿದ್ದರು. ಲಕ್ಷಾಂತರ ಜನರನ್ನು ಸಂಪರ್ಕಿಸಿ ಬೆಸುಗೆ ಹಾಕುವ, ಪೋಡು ಇಲ್ಲವೇ ಕುಮರಿ ಬೇಸಾಯದಿಂದ ರಾಗಿ, ಭತ್ತ, ಕಾಡುತ್ಪತ್ತಿ, ಮರದ ದಿಮ್ಮಿ, ಕಾಳು ಮೆಣಸು, ಅಡಿಕೆ, ತೆಂಗು, ಏಲಕ್ಕಿ, ಕಾಫಿ, ಕೊಕೊ, ಟೀ ಇತ್ಯಾದಿಗಳನ್ನು ಹೊತ್ತು ಸಾಗಿಸಲು ಒತ್ತಾಸೆಯಾಗಿದ್ದವು ಇವೇ ದಾರಿ, ರಸ್ತೆಗಳು.

ಬ್ರಿಟಿಷರು ತಮ್ಮ ಅಕ್ರಮ ಆಳ್ವಿಕೆ ನಡೆಸತೊಡಗಿದ ಮೇಲೆ ತಮ್ಮ ಲೂಟಿಗೆ ಅನುಕೂಲ ಮಾಡಿಕೊಳ್ಳುವ ಸಲುವಾಗಿ ಜನರು ಓಡಾಡಿ ಕಡಿದು ಮಾಡಿದ ದಾರಿಗಳಲ್ಲಿ ಕೆಲವನ್ನು ರಸ್ತೆಗಳನ್ನಾಗಿ ಮಾಡಿ ಡಾಮರು, ಸಿಮೆಂಟುಗಳನ್ನು ಹಾಕಿ ಮೋಟಾರು ವಾಹನಗಳ ಓಡಾಟಕ್ಕೆ ಅನುಕೂಲ ಮಾಡಿಕೊಂಡಿದ್ದರು. ಅವುಗಳಲ್ಲಿ ಹಲವು ರಸ್ತೆಗಳು ಬ್ರಿಟಿಷರು ಹೋದ ನಂತರ ಮಲೆನಾಡು ರಾಜ್ಯದ ಇತರ ಭಾಗಗಳೊಂದಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳನ್ನಾಗಿ ಮಾರ್ಪಡಿಸಲಾಗಿತ್ತು. ಮಲೆನಾಡಿಗೆ ರೈಲು ಸಂಪರ್ಕ ಹಾಗೂ ವಾಯುಸಂಪರ್ಕ ಕಡಿಮೆ. ಉಳಿದಂತೆ ಜನಸಾಮಾನ್ಯರ ವಾಸ ಪ್ರದೇಶಗಳನ್ನು ಸಂಪರ್ಕಿಸುವ ರಸ್ತೆಗಳನ್ನು ಈಗಿನ ಕಾಲಕ್ಕೆ ಹೋಲಿಸಿದಾಗ ಬಹಳ ಹಿಂದುಳಿದ ಸ್ಥಿತಿಗಳಲ್ಲೇ ಈಗಲೂ ಇಡಲಾಗಿದೆ ಎಂದರೆ ಉತ್ಪ್ರೇಕ್ಷೆಯಲ್ಲ. ಅಂತಹ ಬಹುತೇಕ ರಸ್ತೆಗಳು ದ್ವಿಚಕ್ರವಾಹನ ಸಂಚಾರ ಯೋಗ್ಯವೂ ಆಗಿಲ್ಲ ಎಂಬುದೇ ವಾಸ್ತವ

ಆದರೆ ಈಗ ಗುಡ್ಡ ಕಡಿದು, ಮಣ್ಣು ತೆಗೆದು, ಗಿಡಮರಗಳನ್ನು ಉರುಳಿಸಿ, ಭಾರೀ ಹೆದ್ದಾರಿಗಳಂತೆ ಅವೈಜ್ಞಾನಿಕವಾಗಿ ಅಗಲಗೊಳಿಸುತ್ತಿರುವ ರಸ್ತೆಗಳು ಈ ಭಾಗದ ಜನಸಾಮಾನ್ಯರ ನಿತ್ಯಬಳಕೆಯ ಹಳ್ಳಿ, ಕೂಡಿಗೆ, ಮನೆಗಳನ್ನು ಸಂಪರ್ಕಿಸುವ ರಸ್ತೆಗಳಲ್ಲ ಎನ್ನುವುದು ಕೂಡ ಉತ್ಪ್ರೇಕ್ಷೆಯಲ್ಲ. ಬದಲಿಗೆ ಅವೆಲ್ಲವೂ ಪ್ರಧಾನವಾಗಿ ಭಾರೀ ಕಾರ್ಪೊರೇಟ್‌ಗಳ ಲೂಟಿಯ ಹಿತಾಸಕ್ತಿಗಳನ್ನು ಪೂರೈಸುವ, ದೊಡ್ಡ ಗುತ್ತಿಗೆದಾರರ ಹಿತಾಸಕ್ತಿಗಳನ್ನು ಪೂರೈಸುವ ಉದ್ದೇಶಗಳನ್ನು ಹೊಂದಿವೆ. ಅದಕ್ಕಾಗಿಯೇ ಸರಕಾರಗಳು ಮುಂದೆ ನಿಂತು ಇವುಗಳನ್ನೆಲ್ಲಾ ಮಾಡಿಸತೊಡಗಿವೆ. ಹಾಗಾಗಿ ಮಲೆನಾಡಿನ ಬಹಳಷ್ಟು ರಸ್ತೆಗಳು ನಾಲ್ಕು ಪಥಗಳ ರಸ್ತೆಗಳ ತರಹ ಕಾಣಿಸತೊಡಗಿವೆ. ಇವನ್ನೆಲ್ಲ ಮಲೆನಾಡಿನ ಅಭಿವೃದ್ಧಿ, ಪ್ರವಾಸೋದ್ದಿಮೆಯ ಅಭಿವೃದ್ಧಿ...ಎಂದೆಲ್ಲ ಬಿಂಬಿಸಲಾಗುತ್ತಿದೆ. ಜನಸಾಮಾನ್ಯರನ್ನು ನಂಬಿಸಿ, ಭ್ರಮೆಗಳಲ್ಲಿ ಕೆಡಹುವ ಕೆಲಸಗಳು ಜೋರಾಗಿ ನಡೆಯುತ್ತಿವೆ. ಇದಕ್ಕೆಂದೇ ನವವಸಾಹತುಶಾಹಿ ಅಂತರ್‌ರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ದೊಡ್ಡ ಮೊತ್ತದ ಸಾಲಗಳನ್ನು ಮಾಡಲಾಗುತ್ತಿದೆ.

ಮಲೆನಾಡು, ಪಶ್ಚಿಮ ಘಟ್ಟ ಪರಿಸರಸೂಕ್ಷ್ಮ ಪ್ರದೇಶ. ಅದನ್ನು ರಕ್ಷಿಸಬೇಕೆಂದು ಹೇಳುತ್ತಾ ರಾಷ್ಟ್ರೀಯ ಉದ್ಯಾನವನ, ರಕ್ಷಿತಾರಣ್ಯ, ಅಭಯಾರಣ್ಯ, ಮೀಸಲು ಅರಣ್ಯ, ಇನಾಮು ಭೂಮಿ ಎಂದೆಲ್ಲಾ ಕರೆದು ಅಲ್ಲಿ ತಲೆತಲಾಂತರಗಳಿಂದ ಬದುಕು ನಡೆಸುತ್ತಾ ಬಂದ ಆದಿವಾಸಿ, ದಲಿತ ಇನ್ನಿತರ ಜನಸಮೂಹಗಳನ್ನು ಅಲ್ಲಿಂದ ಖಾಲಿಮಾಡಿಸಿ ಇಡೀ ಪಶ್ಚಿಮ ಘಟ್ಟ ಹಾಗೂ ಮಲೆನಾಡಿನ ಭೂಪ್ರದೇಶದ ಮೇಲೆ ಸರಕಾರಿ ಹಿಡಿತ ಹೊಂದಿ ಆನಂತರ ಡಿನೋಟಿಫಿಕೇಷನ್ ಇತ್ಯಾದಿ ಮಾಡಿ, ಪ್ರವಾಸೋದ್ದಿಮೆಯೆಂದೋ, ಪರಿಸರ ಪ್ರವಾಸಿತಾಣವೆಂದೋ, ಪರಿಸರಸ್ನೇಹಿ ಯೋಜನೆಗಳೆಂದೋ ಚೆಕ್ ಡ್ಯಾಂ, ಕಿರುವಿದ್ಯುತ್, ನೀರು ಸರಬರಾಜು, ಸಸ್ಯಪ್ರಭೇದಗಳು ಪ್ರಾಣಿ ಪ್ರಭೇದಗಳ ರಕ್ಷಣೆ, ಸಾಮಾಜಿಕ ಅರಣ್ಯ ಯೋಜನೆಗಳೆಂದೋ, ಖಾಸಗಿ ಹಾಗೂ ಸರಕಾರಿ ಸಹಭಾಗಿತ್ವದಲ್ಲಿ ಪರಿಸರ ರಕ್ಷಣೆ ಎಂದೆಲ್ಲಾ ಹೆಸರಿಸಿ ಭಾರೀ ಕಾರ್ಪೊರೇಟ್‌ಗಳಿಗೆ ಹಸ್ತಾಂತರಿಸುವ ನೂರಾರು ಯೋಜನೆಗಳನ್ನು ಸರಕಾರಗಳು ಈಗಾಗಲೇ ತಯಾರು ಮಾಡಿ ಇಟ್ಟಿವೆ. ಸಾಮಾಜಿಕ ಅರಣ್ಯ ಯೋಜನೆಯಲ್ಲಿ ಅಕೇಷಿಯ ಹಾಗೂ ನೀಲಗಿರಿಗಳನ್ನು ಬೆಳೆಸಿ ಮಲೆನಾಡಿನ ಗುಡ್ಡಗಳನ್ನು ಇತರ ಭೂಮಿಗಳನ್ನು ಬರಡು ಮಾಡಿದ್ದಲ್ಲದೆ ಪರಿಸರಕ್ಕೆ ಹೆಚ್ಚಿನ ಹಾನಿಗಳನ್ನು ಮಾಡಲಾಗಿದೆ. ಮಲೆನಾಡಿನ ಮೇಲೆ ಇಂತಹ ಅಕ್ರಮಗಳನ್ನು ಮಾಡಿದ್ದಲ್ಲದೆ ಅದರಡಿಯಲ್ಲಿ ಭಾರೀ ಕಾರ್ಪೊರೇಟ್‌ಗಳಿಗೆ ಕಚ್ಚಾ ವಸ್ತುಗಳನ್ನು ಸಾರ್ವಜನಿಕರ ತೆರಿಗೆಯ ಹಣ ವ್ಯಯಿಸಿ ಒದಗಿಸುವ ಕೆಲಸಗಳನ್ನು ಸರಕಾರಗಳು ಮಾಡುತ್ತಾ ಬಂದಿದ್ದವು. ಆನಂತರ ಇತ್ತೀಚೆಗೆ ನೀಲಗಿರಿ, ಅಕೇಷಿಯ ಬೆಳೆಯುವುದನ್ನು ನಿಷೇಧಿಸುವ ಪ್ರಹಸನವನ್ನೂ ಮಾಡಲಾಯಿತು.

ಅದೇ ವೇಳೆಯಲ್ಲಿ ಪಶ್ಚಿಮ ಘಟ್ಟ ಹಾಗೂ ಮಲೆನಾಡು ರಕ್ಷಣೆಯ ಕ್ರಮ ಎಂಬಂತೆ ಮಾಧವ ಗಾಡ್ಗೀಳ್ ವರದಿ, ಆನಂತರ ಅದರ ಸುಧಾರಿತ ರೂಪ ಕಸ್ತೂರಿ ರಂಗನ್ ವರದಿಯ ತಯಾರಿ ಹಾಗೂ ಈಗ ಜಾರಿಯ ಬಗ್ಗೆ ಭಾರೀ ಕಾರ್ಪೊರೇಟ್‌ಗಳು ಮತ್ತು ಅವುಗಳೇ ಪ್ರಾಯೋಜಿಸುತ್ತಿರುವ ಸರಕಾರಗಳು ಉತ್ಸುಕವಾಗಿವೆ. ಹಲವು ನಗರಕೇಂದ್ರಿತ ಪರಿಸರ ಪ್ರೇಮದ ಸೋಗಿನವರು, ಹಾಗೆಯೇ ಕೆಲವು ಪರಿಸರ ಕಾಳಜಿಯ ಮನಸ್ಸುಗಳೂ ಕಸ್ತೂರಿ ರಂಗನ್ ವರದಿಯನ್ನು ಬೆಂಬಲಿಸುತ್ತಿದ್ದಾರೆ. ಕಸ್ತೂರಿ ರಂಗನ್ ವರದಿ ಮೇಲುನೋಟದಲ್ಲಿ ನೋಡಿದಾಗ ಪರಿಸರ ರಕ್ಷಣೆ, ಜನರ ಅಭಿವೃದ್ಧಿಯ ಕುರಿತಾಗಿ ಆಕರ್ಷಕವಾಗಿ ಕಾಣಿಸುತ್ತದೆ. ಆದರೆ ಅದನ್ನು ಅಂಕಿ ಅಂಶಗಳುಳ್ಳ ಪರಿಸರ ವಾದಸರಣಿ ಹಾಗೂ ಜನರ ಮೇಲೆ ಕಾಳಜಿ ಇರುವಂತೆ ಹೆಣೆಯಲಾಗಿದೆ. ಸಾಕಷ್ಟು ನಯವಂತಿಕೆ, ಚಾಕಚಕ್ಯತೆ ಅಲ್ಲಿ ಕೆಲಸ ಮಾಡಿದೆ. ಅದು ಪಶ್ಚಿಮ ಘಟ್ಟದ ಮೇಲೆ ಕಾರ್ಪೊರೇಟ್ ಹಿಡಿತ ಹೆಚ್ಚಿಸುವ ನಯವಂತಿಕೆ ಹಾಗೂ ನಾಜೂಕಿನ ನಡೆಗಳನ್ನು ಶಿಫಾರಸು ಮಾಡಿದ ವರದಿಯಾಗಿದೆ ಎನ್ನುವುದು ಹಲವು ನೈಜ ಪರಿಸರ ಕಾಳಜಿಯವರಿಗೂ ಕೂಡ ಅರ್ಥವಾದಂತಿಲ್ಲ. ಆ ವರದಿಯ ಶಿಫಾರಸುಗಳಲ್ಲಿ ಒಟ್ಟಾರೆಯಾಗಿ ಜಾರಿಯಾಗುವುದು ಜನಸಾಮಾನ್ಯರ ವಿರುದ್ಧ ಹಾಗೆಯೇ ಭಾರೀ ಕಾರ್ಪೊರೇಟ್‌ಗಳ ಪರವಾಗಿಯೇ ಎನ್ನುವುದನ್ನು ಅಗತ್ಯವಾಗಿ ಗ್ರಹಿಸಬೇಕಿದೆ.

ಉದಾಹರಣೆಗೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸಾವಯವ ಕೃಷಿಗೆ ಮಾತ್ರ ಅವಕಾಶ ನೀಡಬೇಕೆಂದೂ, ಅಲ್ಲಿನ ಜನಸಾಮಾನ್ಯರನ್ನೂ ಪ್ರವಾಸೋದ್ದಿಮೆಯಲ್ಲಿ ಪಾಲುದಾರರನ್ನಾಗಿ ಮಾಡಿ ಅದರ ಲಾಭದಲ್ಲಿ ಪಾಲು ಸಿಗುವಂತೆ ಮಾಡಬೇಕೆಂದು, ಪರಿಸರ ರಕ್ಷಣೆಯಲ್ಲೂ ಅಲ್ಲಿನ ಜನರನ್ನು ಒಳಗೊಳಿಸಿ ಅರಣ್ಯ ರಕ್ಷಣೆಯ ಜವಾಬ್ದಾರಿ ನೀಡಿ, ಅದರ ಲಾಭದ ಪಾಲುದಾರರನ್ನಾಗಿ ಮಾಡಬೇಕು ಹಾಗೂ ಜಾನುವಾರುಗಳನ್ನು ಮನೆಗಳ ಆವರಣಗಳಲ್ಲಿಯೇ ಕಟ್ಟಿ ಸಾಕಬೇಕು... ಹೀಗೆಲ್ಲಾ ಆ ವರದಿಯಲ್ಲಿ ಹೇಳಲಾಗಿದೆ. ಮೇಲ್ಮಟ್ಟದಲ್ಲಿ ನೋಡಿದಾಗ ಈ ಶಿಫಾರಸುಗಳು ಸರಿಯಲ್ಲವೇ, ಜನರಿಗೂ ಅದರ ಉಪಯೋಗ, ಜನರ ಒಳಗೊಳ್ಳುವಿಕೆ, ಸಾವಯವ ಕೃಷಿಯ ಬೆಳವಣಿಗೆಗೆ ಬಹಳ ಸಹಕಾರಿಯಲ್ಲವೇ ... ಎಂದೆಲ್ಲ ಎನಿಸುವುದು ಸಹಜ. ಆದರೆ ಇಂದಿನ ಸಂದರ್ಭದಲ್ಲಿ ಪ್ರವಾಸೋದ್ದಿಮೆಯೆಂದಾಗ ಅದು ರೆಸಾರ್ಟ್‌ಗಳು, ಐಷಾರಾಮಿ ವ್ಯವಸ್ಥೆಗಳು, ದೊಡ್ಡ ಮಟ್ಟದ ಟ್ರಕ್ಕಿಂಗ್ ಇತ್ಯಾದಿ ಎಂದೇ ಅರ್ಥ.

ಈ ವ್ಯವಸ್ಥೆಗಳನ್ನು ಭಾರೀ ಕಾರ್ಪೊರೇಟ್‌ಗಳಲ್ಲದೆ ಸಾಮಾನ್ಯ ಜನರು ಮಾಡಲು ಸಾಧ್ಯವಿಲ್ಲ. ಆರಂಭದಲ್ಲಿ ಸ್ಥಳೀಯ ಶ್ರೀಮಂತರು ಇದರ ಲಾಭ ಪಡೆದರೂ ಅಂತಿಮವಾಗಿ ಅದು ಸಹಜವಾಗಿ ಭಾರೀ ಕಾರ್ಪೊರೇಟ್‌ಗಳು ಸುಲಭವಾಗಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ತಮ್ಮ ಹಿಡಿತವನ್ನು ಪರಿಸರ ರಕ್ಷಣೆಯ ಹೆಸರಿನಲ್ಲೇ ಕಾನೂನಾತ್ಮಕವಾಗಿಯೇ ಸಾಧಿಸುವಂತೆ ಮಾಡುತ್ತದೆ. ಅದೇ ರೀತಿ ಸಣ್ಣಪುಟ್ಟ ಹಿಡುವಳಿದಾರರು ಯಾವುದೇ ಸರಕಾರಿ ಕಾರ್ಯಗತ ಬೆಂಬಲವಿಲ್ಲದೇ ಸಾವಯವ ಕೃಷಿ ಮಾಡಿ ಬದುಕಲು ಸದ್ಯಕ್ಕೆ ಸಾಧ್ಯವಾಗದ ಮಾತು. ಅಂತಿಮವಾಗಿ ಸಣ್ಣ ಪುಟ್ಟ ಹಿಡುವಳಿದಾರರ ಭೂಮಿ ಸಾವಯವ ಕೃಷಿ ಮಾಡುವ ನೆಪದಲ್ಲಿ ಭಾರೀ ಕಾರ್ಪೊರೇಟ್‌ಗಳು, ದೊಡ್ಡ ಹಿಡುವಳಿದಾರರ ಕೈಗೆ ಸಹಜವೆಂಬಂತೆ ಹೋಗಿ ಸೇರುತ್ತದೆ. ಪಶ್ಚಿಮ ಘಟ್ಟ ಹಾಗೂ ಮಲೆನಾಡಿನ ಆದಿವಾಸಿ, ದಲಿತ, ಹಿಂದುಳಿದ ಸಮುದಾಯಗಳು ಮತ್ತು ಇನ್ನಿತರ ಜನಸಮುದಾಯಗಳ ಬಹುಸಂಖ್ಯಾತ ಜನರು ಬದುಕು ಕಳೆದುಕೊಂಡು ಊಹಿಸಲಾಗದ ಸಂಕಷ್ಟಗಳಿಗೆ ಸಿಲುಕುತ್ತಾರೆ. ಪಶ್ಚಿಮ ಘಟ್ಟ ಪ್ರದೇಶ ಊಹಿಸಲಾಗದಷ್ಟು ಅಪಾಯಗಳಿಗೆ ಗುರಿಯಾಗುತ್ತದೆ.

ಈ ಎಲ್ಲ ಸಮಸ್ಯೆಗಳು ಒಂದುಕಡೆ ಇದ್ದರೆ, ಈಗ ರಸ್ತೆಗಳನ್ನು ಅನಗತ್ಯವಾಗಿ ಭಾರೀ ಹೆದ್ದಾರಿಗಳ ರೀತಿಯಲ್ಲಿ ಅವೈಜ್ಞಾನಿಕವಾಗಿ ಅಗಲೀಕರಿಸಲು ಸರಕಾರಗಳಿಗೆ ಕಸ್ತೂರಿ ರಂಗನ್ ವರದಿಯ ಶಿಫಾರಸುಗಳು ಯಾಕೆ ತಡೆಯಾಗಿ ನಿಲ್ಲುತ್ತಿಲ್ಲ ಎಂಬ ಪ್ರಶ್ನೆಯನ್ನು ಹಾಕಬೇಕಿದೆ. ಅದೇ ವೇಳೆಯಲ್ಲಿ ಜನಸಾಮಾನ್ಯರ ಹಾಡಿ, ಕೂಡಿಗೆ, ಹಳ್ಳಿ, ಮನೆಗಳಿಗೆ ಸಂಪರ್ಕಿಸುವ ರಸ್ತೆ ದಾರಿಗಳಿಗೆ, ಅವರ ತುಂಡು ಜಮೀನುಗಳಿಗೆ ಖಾಯಂ ಹಕ್ಕುಪತ್ರ ಒದಗಿಸಲು, ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು, ಶಾಲೆ, ಆಸ್ಪತ್ರೆ, ಕುಡಿಯುವ ನೀರು ಇತ್ಯಾದಿ ಮೂಲಭೂತ ವ್ಯವಸ್ಥೆ ಕಲ್ಪಿಸಲು ಮಾತ್ರ ಯಾಕೆ ಕಸ್ತೂರಿ ರಂಗನ್ ವರದಿಯನ್ನು, ರಾಷ್ಟ್ರೀಯ ಉದ್ಯಾನ, ಮೀಸಲು, ಅಭಯಾರಣ್ಯ, ಹುಲಿ ಯೋಜನೆ ಇತ್ಯಾದಿಗಳನ್ನು ಅಡ್ಡಿಯಾಗಿ ನಿಲ್ಲಿಸಿ ತಡೆಯುತ್ತಿದ್ದಾರೆ ಎನ್ನುವುದರ ಬಗ್ಗೆ ಎಲ್ಲರೂ ಗಂಭೀರವಾಗಿ ಚಿಂತಿಸಬೇಕಾಗಿದೆ.

ಗುಡ್ಡಗಳು ಬೋಳಾಗಿ ಕಾಣತೊಡಗಿವೆ. ಹಿತಕರ ವಾತಾವರಣದ ಜಾಗದಲ್ಲಿ ಬಿಸಿಯೇರುತ್ತಿರುವ ವಾತಾವರಣ, ಅನಾವೃಷ್ಟಿ, ಅತೀವೃಷ್ಟಿ ಈಗ ಮಲೆನಾಡಿನ ಮಾಮೂಲಿ ಸಂಗತಿಗಳಾಗಿಬಿಟ್ಟಿವೆ. ಬೇಸಿಗೆಯಲ್ಲಿ ಕುಡಿಯುವ ನೀರಿಗೂ ತತ್ವಾರವಾಗತೊಡಗಿದೆ. ಈ ಪರಿಸ್ಥಿತಿಗೆ ಅಲ್ಲಿ ಹಲವು ಪೀಳಿಗೆಗಳಿಂದ ವಾಸ ಮಾಡುತ್ತಾ ಬಂದ ಜನಸಾಮಾನ್ಯರು ಪ್ರಧಾನ ಕಾರಣರಲ್ಲ ಎನ್ನುವುದನ್ನು ಸ್ಪಷ್ಟವಾಗಿ ಗ್ರಹಿಸಿದಾಗ ಮಾತ್ರ ನೈಜ ಕಾರಣಗಳತ್ತ ಹೊರಳಿ ಚಿಂತಿಸಲು ಸಾಧ್ಯವಾಗುತ್ತದೆ. ಮಲೆನಾಡಿನ ಇಂತಹ ಪರಿಸ್ಥಿತಿಗೆ ಅರಣ್ಯ ಹಾಗೂ ಪರಿಸರದ ಲೂಟಿಗೆ ಪ್ರಧಾನ ಕಾರಣಕರ್ತರು ಸರಕಾರ ಮತ್ತದರ ಆಡಳಿತಾಂಗಗಳು, ಅದರಲ್ಲೂ ಅರಣ್ಯ ಇಲಾಖೆ, ಭಾರೀ ಭೂ ಒಡೆಯರು, ಭಾರೀ ಕಾರ್ಪೊರೇಟ್‌ಗಳು, ಗಣಿಗಾರಿಕೆ, ಕಾಡುತ್ಪನ್ನ ಗುತ್ತಿಗೆದಾರರು, ಕಳ್ಳ ಅರಣ್ಯ ಮಾಫಿಯಾಗಳು ಪ್ರಧಾನ ಕಾರಣಕರ್ತರಾಗಿದ್ದಾರೆ. ಇದನ್ನು ಮರೆತು ಮಾತನಾಡುವವರು ಪರಿಸರ ಪ್ರೇಮಿಗಳಾಗಲು ಸಾಧ್ಯವೇ ಇಲ್ಲ ಎನ್ನುವುದನ್ನು ಕೂಡ ನೆನಪಿನಲ್ಲಿ ಇಡಬೇಕು.

ಇದರಿಂದಾಗಿ ಮಲೆನಾಡಿನಲ್ಲಿ ಗುಡ್ಡಕುಸಿತಗಳು, ಮಣ್ಣು ಸವಕಳಿ, ನದಿಗಳಲ್ಲಿ ಹೂಳುಗಳು ಭಾರೀ ಪ್ರಮಾಣದಲ್ಲಿ ಹೆಚ್ಚಾಗತೊಡಗಿವೆ. ಅದರ ಪರಿಣಾಮವಾಗಿ ಜನಸಾಮಾನ್ಯರ ಪ್ರಾಣಗಳು, ಆಸ್ತಿಪಾಸ್ತಿಗಳು ನಾಶವಾಗತೊಡಗಿವೆ. ಪಶ್ಚಿಮ ಘಟ್ಟ, ಮಲೆನಾಡು ಭೀಕರ ಹಾನಿಗೊಳಗಾಗುತ್ತಾ ಜನಸಾಮಾನ್ಯರ ಬದುಕು ದಿನೇ ದಿನೇ ದುಸ್ತರವಾಗತೊಡಗಿದೆ. ಭತ್ತ, ಅಡಿಕೆ, ಏಲಕ್ಕಿ, ತೆಂಗು, ಕಾಫಿ, ಟೀ ಇತ್ಯಾದಿಗಳ ಕೃಷಿಯೂ ಗಂಡಾಂತರಗಳಿಗೆ ಒಳಗಾಗಿದೆ.
ಇದು ಕೇವಲ ಪಶ್ಚಿಮ ಘಟ್ಟ ಅಥವಾ ಮಲೆನಾಡಿನ ಜನರು ಹಾಗೂ ಪರಿಸರದ ವಿಚಾರ ಮಾತ್ರ ಅಲ್ಲ. ಇದು ಇಡೀ ಏಶ್ಯ, ದೇಶ ಅದರಲ್ಲೂ ದಕ್ಷಿಣ ಭಾರತದದ ಜನರು ಹಾಗೂ ಭೌಗೋಳಿಕ ಪರಿಸರದ ಪ್ರಶ್ನೆಯಾಗಿದೆ.

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News