×
Ad

ಕೋವಿಡ್ ಸಾವಿನ ಪ್ರಮಾಣ ಎರಡನೇ ಅಲೆಯಲ್ಲಿ ಶೇಕಡ 40ರಷ್ಟು ಅಧಿಕ

Update: 2021-06-29 09:19 IST

ಹೊಸದಿಲ್ಲಿ, ಜೂ.29: ಕೋವಿಡ್-19 ಸೋಂಕಿನಿಂದ ಆಸ್ಪತ್ರೆಗೆ ಸೇರಿದ ರೋಗಿಗಳ ಪೈಕಿ ಮೃತಪಟ್ಟವರ ಪ್ರಮಾಣ ಮೊದಲ ಅಲೆಗೆ ಹೋಲಿಸಿದರೆ ಎರಡನೇ ಅಲೆಯಲ್ಲಿ ಶೇಕಡ 40ರಷ್ಟು ಅಧಿಕ ಎನ್ನುವ ಅಂಶ ಬಹಿರಂಗವಾಗಿದೆ.

ಮ್ಯಾಕ್ಸ್ ಹೆಲ್ತ್‌ಕೇರ್ ನಡೆಸಿದ ಅಧ್ಯಯನದಿಂದ ಈ ಅಂಶ ದೃಢಪಟ್ಟಿದೆ. ಎರಡನೇ ಅಲೆಯಲ್ಲಿ ಅಂದರೆ 2021ರ ಜನವರಿಯಿಂದ ಜೂನ್ ಮಧ್ಯದವರೆಗೆ, ಆಸ್ಪತ್ರೆಗೆ ದಾಖಲಾದ 5,454 ಸೋಂಕಿತರ ಪೈಕಿ ಸಾವಿನ ಅನುಪಾತವನ್ನು ಲೆಕ್ಕ ಹಾಕಲಾಗಿದೆ. ಇದು 10.5ರಷ್ಟಾಗಿದ್ದು, ಮೊದಲ ಅಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗಳ ಸಾವಿನ ಪ್ರಮಾಣ (7.2%)ಕ್ಕೆ ಹೋಲಿಸಿದರೆ ಇದು ಶೇಕಡ 40ರಷ್ಟು ಅಧಿಕ. ಮೊದಲ ಅಲೆಯಲ್ಲಿ ದಾಖಲಾಗಿದ್ದ 14,398 ಮಂದಿಯ ಪೈಕಿ ಶೇಕಡ 7.2ರಷ್ಟು ಮಂದಿ ಮೃತಪಟ್ಟಿದ್ದರು.

ಈ ಅಧ್ಯಯನವನ್ನು MedRxiv ಎಂಬ ನಿಯತಕಾಲಿಕದಲ್ಲಿ ಪ್ರಕಟಿಸಲಾಗಿದೆ. ದಿಲ್ಲಿಯ ಆರು ಸೇರಿದಂತೆ ಭಾರತದ ವಿವಿಧೆಡೆ ಇರುವ ಮ್ಯಾಕ್ಸ್ ಹೆಲ್ತ್‌ಕೇರ್ ಆಸ್ಪತ್ರೆಗಳಿಂದ ಸಂಗ್ರಹಿಸಿದ ಅಂಕಿ ಅಂಶಗಳ ಆಧಾರದಲ್ಲಿ ಈ ವಿಶ್ಲೇಷಣೆ ನಡೆಸಲಾಗಿದೆ.

45 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಅಧಿಕ ಸಂಖ್ಯೆಯಲ್ಲಿ ಮೃತಪಟ್ಟಿರುವುದೂ ದೃಢಪಟ್ಟಿದೆ ಎಂದು ಸಮೂಹದ ವೈದ್ಯಕೀಯ ನಿರ್ದೇಶಕ ಡಾ.ಸಂದೀಪ್ ಬುಧಿರಾಜ ಹೇಳಿದ್ದಾರೆ.

ಮೊದಲನೇ ಅಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ 45 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಸೋಂಕಿತರ ಪೈಕಿ 1.3% ಮಂದಿ ಮೃತಪಟ್ಟಿದ್ದರೆ, ಎರಡನೇ ಅಲೆಯಲ್ಲಿ ಈ ಪ್ರಮಾಣ 4.1% ಇದೆ ಎಂದು ಅವರು ವಿವರಿಸಿದ್ದಾರೆ. 45-59 ವಯೋಮಿತಿಯವರಲ್ಲೂ ಹೆಚ್ಚಿನ ಸಾವು ವರದಿಯಾಗಿದೆ. 60-74 ವರ್ಷದ ವಯೋಮಿತಿ ಹಾಗೂ 75 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಕೂಡಾ ಸಾವಿನ ಪ್ರಮಾಣ ಅನುಕ್ರಮವಾಗಿ 12% ದಿಂದ 13.8%ಗೆ ಹಾಗೂ 18.9%ದಿಂದ 26.9%ಗೆ ಹೆಚ್ಚಿರುವುದು ಕೂಡಾ ಕಂಡುಬಂದಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News