13 ವರ್ಷದ ಬಾಲಕನಿಗೂ ಕೋವಿಡ್ ಲಸಿಕೆ ದೃಢೀಕರಣ ಪ್ರಮಾಣಪತ್ರ ಬಂತು !
ಭೋಪಾಲ್, ಜೂ.29: ಕಳೆದ ಸೋಮವಾರ ರಾತ್ರಿ 7:27ಕ್ಕೆ ತಮ್ಮ ಮೊಬೈಲ್ ಫೋನ್ ಗೆ ಬಂದ ಸರ್ಕಾರಿ ಮೆಸೇಜ್ ನೋಡಿ ರಜತ್ ಡಾಂಗ್ರೆ ದಂಗಾದರು. ಏಕೆಂದರೆ ಇವರ ಹದಿಮೂರು ವರ್ಷದ ಮಗ ಕೋವಿಡ್-19 ಲಸಿಕೆ ಪಡೆದ ಮಾಹಿತಿ ನೀಡುವ ಮೆಸೇಜ್ ಅದಾಗಿತ್ತು. ಸರ್ಕಾರ ಇನ್ನೂ ಅಧಿಕೃತವಾಗಿ 18 ವರ್ಷಕ್ಕಿಂತ ಕೆಳಗಿನವರಿಗೆ ಲಸಿಕೆ ನೀಡಿಕೆ ಆರಂಭಿಸಿಲ್ಲ.
ಭೋಪಾಲ್‌ನ ತಿಲ ಜಮಾಲ್‌ಪುರ ಹೌಸಿಂಗ್‌ಬೋರ್ಡ್ ಕಾಲನಿಯ ನಿವಾಸಿ ವೇದಾಂತ ಡಾಂಗ್ರೆಗೆ ಇನ್ನೂ ಹದಿಮೂರು ವರ್ಷ. ಅಂಗವಿಕಲನಾದ ಆತನಿಗೆ ಅಧಿಕೃತವಾಗಿ ಲಸಿಕೆ ನೀಡಲಾಗಿದೆ ಎಂಬ ಸಂದೇಶದಲ್ಲಿ ಈತನ ವಯಸ್ಸು 56 ವರ್ಷ ಎಂದು ನಮೂದಾಗಿದೆ.
"ಜೂನ್ 21ರಂದು ಸಂಜೆ 7:27ಕ್ಕೆ ವೇದಾಂತ್ ಲಸಿಕೆ ಪಡೆದ ಬಗ್ಗೆ ನನಗೆ ಸಂದೇಶ ಬಂತು. ಆತನಿಗೆ ಇನ್ನೂ 13 ವರ್ಷ. ಈ ಬಗ್ಗೆ ದೂರು ನೀಡಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಲಿಂಕ್ ಬಳಸಿಕೊಂಡು ಪ್ರಮಾಣಪತ್ರ ಡೌನ್‌ಲೋಡ್ ಮಾಡಿದಾಗ, ನಾನು ಕೆಲ ದಿನಗಳ ಹಿಂದೆ ಪಾಲಿಕೆಯಲ್ಲಿ ವಿಶೇಷ ಅಗತ್ಯತೆಯವರಿಗಾಗಿ ಲಭ್ಯವಿರುವ ಪಿಂಚಣಿಗೆ ಸಲ್ಲಿಸಿದ್ದ ಅರ್ಜಿಯ ಜತೆಗಿನ ದಾಖಲೆಗಳನ್ನು ಅವರು ಬಳಸಿಕೊಂಡಿದ್ದು ಗಮನಕ್ಕೆ ಬಂತು" ಎಂದು ರಜತ್ ವಿವರಿಸಿದರು.
ಒಂದೇ ದಿನ 17.42 ಲಕ್ಷ ಡೋಸ್ ನೀಡಿ ಮಧ್ಯಪ್ರದೇಶ ಜೂನ್ 21ರಂದು ದಾಖಲೆ ಸೃಷ್ಟಿಸಿತ್ತು. ಆದರೆ ಈಗ ಲಸಿಕೆ ಪಡೆಯದವರಿಗೂ ಲಸಿಕೆ ಪಡೆದ ಬಗ್ಗೆ ಪ್ರಮಾಣಪತ್ರಗಳು ಬಂದಿರುವ ದೂರುಗಳು ಹೆಚ್ಚುತ್ತಿವೆ.
ಇದೇ ದಿನ ವೇದಾಂತ್‌ನಂತೆ ಸಾತ್ನಾದ ಚೈನೇಂದ್ರ ಪಾಂಡೆ ಅವರಿಗೂ ಐದು ನಿಮಿಷಗಳಲ್ಲಿ ಮೂರು ಸಂದೇಶಗಳು ಬಂದಿದ್ದವು. ಇದರಲ್ಲಿ ಅವರಿಗೆ ಪರಿಚಯವೇ ಇಲ್ಲದ ಕತಿಕ್‌ರಾಂ, ಕಲೀಂದ್ರಿ ಮತ್ತು ಚಂದನ್ ಅವರಿಗೆ ಲಸಿಕೆ ನೀಡಲಾಗಿದೆ ಎಂಬ ಮಾಹಿತಿ ಇತ್ತು. ಈ ಮೆಸೇಜ್ ತನ್ನ ಮೊಬೈಲಿಗೆ ಹೇಗೆ ಮತ್ತು ಏಕೆ ಬಂದಿದ ಎಎನ್ನುವುದು ಅವರಿಗೆ ಇನ್ನೂ ನಿಗೂಢವಾಗಿಯೇ ಉಳಿದಿದೆ.
ಭೋಪಾಲ್‌ನ ಪಿಜಿಬಿಟಿ ಕಾಲೇಜು ರಸ್ತೆಯ ನುಝತ್ ಸಲೀಂ (46) ಅವರಿಗೂ ಲಸಿಕೆ ಪಡೆದ ಬಗ್ಗೆ ಸಂದೇಶ ಬಂದಿದೆ. ಆಕೆ ಪಿಂಚಿಣಿ ಪಡೆಯುವವರಲ್ಲದಿದ್ದರೂ, ಪಿಂಚಣಿ ದಾಖಲೆಯನ್ನು ಗುರುತಿನ ಪತ್ರವಾಗಿ ನೀಡಿದ ಉಲ್ಲೇಖವಿದೆ.