ವೆಬ್ ಸೈಟ್ ನಲ್ಲಿ ಭಾರತದ ತಪ್ಪಾದ ಭೂಪಟ: ಟ್ವಿಟರ್ ಇಂಡಿಯಾ ಮುಖ್ಯಸ್ಥರ ವಿರುದ್ಧ ಎಫ್‍ಐಆರ್

Update: 2021-06-29 04:59 GMT
ಟ್ವಿಟರ್ ಇಂಡಿಯಾ ಮುಖ್ಯಸ್ಥ ಮನೀಶ್ ಮಹೇಶ್ವರಿ

ಹೊಸದಿಲ್ಲಿ: ಟ್ವಿಟ್ಟರ್ ವೆಬ್ ಸೈಟ್‍ನಲ್ಲಿ ಜಮ್ಮು ಕಾಶ್ಮೀರ ಮತ್ತು ಲಡಾಖ್ ಅನ್ನು ಪ್ರತ್ಯೇಕ ದೇಶವೆಂಬಂತೆ ಭಾರತದ ಭೂಪಟದಲ್ಲಿ ಬಿಂಬಿಸಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದಲ್ಲಿ ದಾಖಲಾಗಿರುವ ಎಫ್‍ಐಆರ್ ನಲ್ಲಿ ಟ್ವಿಟರ್ ಇಂಡಿಯಾ ಮುಖ್ಯಸ್ಥ ಮನೀಶ್ ಮಹೇಶ್ವರಿ ಅವರನ್ನು ಹೆಸರಿಸಲಾಗಿದೆ. ಕೇಂದ್ರ ಸರಕಾರ ಮತ್ತು ಟ್ವಿಟರ್ ನಡುವೆ ಕಳೆದ ಹಲವು ಸಮಯದಿಂದ ಭಾರತದ ಹೊಸ ಐಟಿ ನಿಯಮಗಳ ಕುರಿತು ನಡೆಯುತ್ತಿರುವ ಜಟಾಪಟಿಯ ನಡುವೆ ಇದು ಹೊಸ ಬೆಳವಣಿಗೆಯಾಗಿದೆಯಲ್ಲದೆ ಒಂದು ತಿಂಗಳ ಅವಧಿಯಲ್ಲಿ ಟ್ವಿಟರ್ ವಿರುದ್ಧ ಉತ್ತರ ಪ್ರದೇಶ ಪೊಲೀಸರು ದಾಖಲಿಸಿರುವ ಎರಡನೇ ಎಫ್‍ಐಆರ್ ಇದಾಗಿದೆ.

ಭಾರತದ ತಿರುಚಲ್ಪಟ್ಟ ಭೂಪಟವು ಟ್ವಿಟರ್ ವೆಬ್ ಸೈಟ್‍ನ `ಟ್ವೀಪ್ ಲೈಫ್' ವಿಭಾಗದಲ್ಲಿದ್ದು ಟ್ವಿಟ್ಟರಿಗರೊಬ್ಬರು ಇದರತ್ತ ಎಲ್ಲರ ಗಮನ ಹರಿಸಿದ ನಂತರ ಭುಗಿಲೆದ್ದ ಆಕ್ರೋಶದ ನಂತರ ಟ್ವಿಟರ್ ಈ ಭೂಪಟದ ಚಿತ್ರವನ್ನು ತೆಗೆದುಹಾಕಿದೆ.

ಈ ಕುರಿತಂತೆ ಟ್ವಿಟರ್ ವಿರುದ್ಧ ಬಜರಂಗದಳ ನಾಯಕ ಪ್ರವೀಣ್ ಭಟಿ ಎಂಬವರು ದೂರು ದಾಖಲಿಸಿದ್ದಾರೆ. "ಈ ದೇಶದ್ರೋಹದ ಕೃತ್ಯವನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಹಾಗೂ ಕ್ರಮ ಕೈಗೊಳ್ಳಬೇಕಿದೆ,'' ಎಂದು ದೂರಿನಲ್ಲಿ ಹೇಳಲಾಗಿದೆ. ಟ್ವಿಟರ್ ಇಂಡಿಯಾ ಮುಖ್ಯಸ್ಥರ ವಿರುದ್ಧ ಐಪಿಸಿ ಸೆಕ್ಷನ್ 505(2) ಹಾಗೂ ಐಟಿ ಕಾಯಿದೆ 2008 ಇದರ ಸೆಕ್ಷನ್ 74 ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಟ್ವಿಟರ್ ಇಂಡಿಯಾ ಉದ್ಯೋಗಿ ಅಮೃತಾ ತ್ರಿಪಾಠಿ ಅವರ ಹೆಸರನ್ನೂ ಬುಲಂದ್‍ಶಹರ್ ನಲ್ಲಿ ದಾಖಲಿಸಲಾಗಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆಕೆ ಈ ನಿರ್ದಿಷ್ಟ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಎಂಬ ಅರ್ಥ ನೀಡುವ ಟ್ವೀಟ್ ಅನ್ನು ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಮಾಡಿದ್ದಾರೆ.

ಕೆಲ ದಿನಗಳ ಕಾಲ ರಜೆಯಲ್ಲಿದೆ, ಅನಾರೋಗ್ಯವಿತ್ತು  ಎಂದು ಅವರು ತಮ್ಮ ಟ್ವೀಟ್‍ನಲ್ಲಿ ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News