ಯುರೋಪಿಯನ್ ಯೂನಿಯನ್ ಪ್ರವಾಸ ಪಾಸ್ ಗೆ ಅರ್ಹತೆ ಪಡೆಯದ ಭಾರತದ 'ಕೋವಿಶೀಲ್ಡ್'

Update: 2021-06-29 05:21 GMT

ಹೊಸದಿಲ್ಲಿ: ಭಾರತದಲ್ಲಿ ಸದ್ಯ ನಾಗರಿಕರಿಗೆ ನೀಡಲಾಗುತ್ತಿರುವ ಎರಡು ಕೋವಿಡ್ ಲಸಿಕೆಗಳಾದ ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಪೈಕಿ ಕೋವಿಶೀಲ್ಡ್  ಲಸಿಕೆಯು ಪ್ರವಾಸಿಗರಿಗೆ ನೀಡಲಾಗುವ ಯುರೋಪಿಯನ್ ಯೂನಿಯನ್ ಪ್ರವಾಸ ಪಾಸ್‍ಗೆ ಅರ್ಹವಾಗಿಲ್ಲ ಎಂದು ತಿಳಿದು ಬಂದಿದೆ.

ಆಸ್ಟ್ರಾಝೆನಕಾ ಲಸಿಕೆಯು ಭಾರತದಲ್ಲಿ  ತಯಾರಾಗಿ ಕೋವಿಶೀಲ್ಡ್ ಎಂಬ ಹೆಸರಿನಲ್ಲಿ ನೀಡಲಾಗುತ್ತಿದೆ. ಜುಲೈ 1ರಿಂದ ಜಾರಿಗೊಳ್ಳಲಿರುವ ಯುರೋಪಿಯನ್ ಯೂನಿಯನ್ ಪ್ರವಾಸ ಪಾಸ್ ಅಥವಾ ಡಿಜಿಟಲ್ ಗ್ರೀನ್ ಸರ್ಟಿಫಿಕೇಟ್‍ಗೆ ಆಸ್ಟ್ರಾಝೆನೆಕಾ ಅರ್ಹವಾಗಿದ್ದರೂ ಕೋವಿಶೀಲ್ಡ್ ಅರ್ಹವಾಗಿಲ್ಲ ಎಂದು ಹೇಳಲಾಗಿದೆ.

ಆಸ್ಟ್ರಾಝೆನೆಕಾ ಲಸಿಕೆಗೆ ಯುರೋಪಿಯನ್ ಮೆಡಿಸಿನ್ಸ್ ಏಜನ್ಸಿ ಅನುಮೋದನೆ ನೀಡಿದ್ದರೆ ಈ ಅನುಮೋದನೆ ಕೋವಿಶೀಲ್ಡ್‍ಗೆ ದೊರಕಿಲ್ಲ. ಅನುಮೋದನೆಗೆ ಅರ್ಜಿ ಸಲ್ಲಿಸಲಾಗಿದೆಯೇ ಎಂಬ ಕುರಿತು  ಭಾರತದಲ್ಲಿ ಕೋವಿಶೀಲ್ಡ್ ತಯಾರಕ ಸಂಸ್ಥೆಯಾಗಿರುವ ಸೀರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ ಇನ್ನೂ ಸ್ಪಷ್ಟಪಡಿಸಿಲ್ಲ  ಆದರೆ ಈ ಸಂಸ್ಥೆ ಇನ್ನೂ ಅರ್ಜಿ ಸಲ್ಲಿಸಿಲ್ಲ ಎಂದು ಯುರೋಪಿಯನ್ ಮೆಡಿಸಿನ್ಸ್ ಏಜನ್ಸಿಯು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದೆ.

ಈ ಸಮಸ್ಯೆ ಆದಷ್ಟು  ಬೇಗ ಪರಿಹರಿಸಲು ಪ್ರಯತ್ನಿಸುವುದಾಗಿ ಸೀರಮ್ ಇನ್‍ಸ್ಟಿಟ್ಯೂಟ್ ಸಿಇಒ ಅದಾರ್ ಪೂನಾವಾಲ ಹೇಳಿದ್ದಾರೆ.

ಅತ್ತ ಭಾರತದಲ್ಲಿ ನೀಡಲಾಗುವ ಇನ್ನೊಂದು ಲಸಿಕೆ ಕೊವ್ಯಾಕ್ಸಿನ್ ಕೂಡ ಇನ್ನೂ ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನೆ ಪಡೆದಿಲ್ಲ. ಕೊವ್ಯಾಕ್ಸಿನ್ ತಯಾರಕ ಸಂಸ್ಥೆ ಭಾರತ್ ಬಯೋಟೆಕ್ ಕೂಡ ಇಎಂಎ ಅನುಮೋದನೆಗೆ ಅರ್ಜಿ ಸಲ್ಲಿಸಿಲ್ಲ.

ಭಾರತದಲ್ಲಿ   ಈಗಾಗಲೇ 32 ಕೋಟಿಗೂ ಅಧಿಕ ಮಂದಿಗೆ ಈ ಎರಡು ಲಸಿಕೆಗಳನ್ನು ನೀಡಲಾಗಿದೆ. ಭಾರತದಲ್ಲಿ ಬಳಕೆಗೆ ಅನುಮೋದನೆ ಪಡೆದಿರುವ ರಷ್ಯಾದ ಸ್ಪುಟ್ನಿಕ್ ವಿ ಕೂಡ ಇಎಂಎ ಪರಿಶೀಲನೆಯಲ್ಲಿರುವ ಲಸಿಕೆಯಾಗಿದೆ ಆದರೆ ಭಾರತದಲ್ಲಿ ಇನ್ನೂ ಸ್ಪುಟ್ನಿಕ್ ಲಸಿಕೆ ನೀಡಿಕೆ ಆರಂಭಗೊಂಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News